ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕೃಷಿ ಶಿಕ್ಷಣ-ತರಬೇತಿ ಆದ್ಯತೆಯಾಗಲಿ

02:45 AM Sep 02, 2024 IST | Samyukta Karnataka

ಬೆಳಗಾಗಿ ನಾನೆದ್ದು ಯರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ
ಎದ್ದೊಂದ ಘಳಿಗೆ ನೆನೆದೇನ..
ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ನಮ್ಮಲ್ಲೆರನ್ನೂ ಸಲಹುವಳೆ ಭೂಮಿತಾಯಿ. ನಮ್ಮ ದೇಶ ಹಳ್ಳಿಗಳ ದೇಶ. ರೈತನನ್ನು ನಾವು ಅನ್ನದಾತ ಎನ್ನುತ್ತೇವೆ. ಅನ್ನದಾತ ಸುಖೀಭವ..’ ಎಂದು ಹಾರೈಸುತ್ತೇವೆ. ಬದುಕಿನುದ್ದಕ್ಕೂ ಭೂಮಿಯನ್ನೇ ನಂಬಿಕೊಂಡಿರುವ ರೈತನ ಬೆವರಿನ ಫಲವೇ ನಮ್ಮ ಕೈಯೊಳಗಿನ ತುತ್ತು. ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ನಮ್ಮ ರಕ್ತದ ಕಣಕಣದಲ್ಲೂ ಭೂದೇವಿ ನೀಡಿದ ಆಹಾರದ ಅಂಶವಿದ್ದರೂ, ಜಾಗತೀಕರಣದ ಅವಸರದಲ್ಲಿ ಮತ್ತು ದುರಾಸೆಯಿಂದಾಗಿ ಭೂಮಿಯ ಫಲವತ್ತತೆ ಮತ್ತು ಅದರ ಮಹತ್ವವನ್ನು ಮರೆಯುತ್ತಿದ್ದೇವೆ. ಹಳ್ಳಿಗಳ ದೇಶವಾದ ಭಾರತ ಇಂದು ಆಧುನಿಕತೆ ಮೈಗೂಡಿಸಿಕೊಂಡಿದೆ. ಎಲ್ಲರಿಗೂ ಹಣ ಗಳಿಕೆಯೊಂದೇ ಮುಖ್ಯ ಗುರಿಯಾಗಿದೆ. ವಿಜ್ಞಾನ ಬೆಳೆದಂತೆ ದುಡಿಮೆ, ಪರಿಶ್ರಮಗಳಿಗೂ ಗ್ರಹಣ ಹಿಡಿದಿದೆ. ಕೃಷಿ ಅಭಿವೃದ್ಧಿಗೆ, ಅನ್ನದಾತನಿಗೆ ಪ್ರೋತ್ಸಾಹ ನೀಡಬೇಕಾದ ಸರ್ಕಾರ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕಾದ ರಾಜಕಾರಣಿಗಳು ಅಗ್ಗದ, ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೃಷಿ ಮತ್ತು ಕೃಷಿಕರನ್ನೂ ಮರೆಯುತ್ತಿದ್ದಾರೆ. ದುಡಿದು ತಿನ್ನಬೇಕಾದ ಜನರನ್ನು ಕುಳಿತು ತಿನ್ನವಂತೆ ಮಾಡಿ ದರಿದ್ರರನ್ನಾಗಿ ಮಾಡುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಯಾವುದೇ ವಿದ್ಯೆ ತಿಳಿದಿದ್ದರೂ, ಇಂತಹ ಕೋಟಿ ವಿದ್ಯೆಗಳಿಗಿಂತ ಒಕ್ಕಲುತನವೇ ಶ್ರೇಷ್ಠವಾದ ವಿದ್ಯೆಯಾಗಿದೆ. ಕೃಷಿಯಿಂದ ಮಾತ್ರ ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳೂ ನಡೆಯುತ್ತವೆ. ಕೃಷಿ ಇಲ್ಲದಿದ್ದರೆ ಇನ್ನಾವ ಕ್ಷೇತ್ರವೂ ನಡೆಯುವುದಿಲ್ಲ. ಆದರೆ ಕೃಷಿ ಕ್ಷೇತ್ರವನ್ನು ಸರ್ಕಾರ ಸೇರಿದಂತೆ ನಾವೆಲ್ಲ ನಿರ್ಲಕ್ಷ್ಯ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ರೈತನೇ ದೇಶದ ಬೆನ್ನೆಲುಬು, ಅನ್ನದಾತನೆಂದು ಭಾಷಣಗಳಲ್ಲಿ ಬೀಗಿದರೂ, ರೈತನಿಗೆ ಉಳಿಗಾಲವಿಲ್ಲವಾಗಿದೆ. ಬಿತ್ತಿದ ಬೀಜ ಮೊಳಕೆಯೊಡೆಯದಿದ್ದಾಗ, ಮೊಳಕೆಯೊಡೆದರೂ ಬೆಳೆ ಬೆಳೆಯದಿದ್ದಾಗ, ಬೆಳೆ ಬೆಳೆದರೂ ಧಾನ್ಯಕ್ಕೆ ಕೈತುಂಬ ಹಣ ಬರದೇ ಇದ್ದಾಗ ಅವನ ಬದುಕು ನಿತ್ಯ ಸಾಯುತ್ತಿದೆ. ಅತ್ತ ಮಾಡಿದ ಸಾಲ ತೀರಿಸಲಾರದ ಸಂದಿಗ್ಧ ಸ್ಥಿತಿ, ಇತ್ತ ಬೆಳೆದ ಬೆಳೆ ಕೈಗೆ ಸಿಗದಾದಾಗ, ಸಿಕ್ಕರೂ ಬೆಲೆ ಬಾರದೆ ಇದ್ದಾಗ, ಬದುಕನ್ನು ಎದುರಿಸಲಾರದ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅಲ್ಲದೆ ರೈತನ ಮೇಲೆಯೂ ಭೂಮಿತಾಯಿ ಮುನಿಸಿಕೊಂಡಿದ್ದಾಳೆ. ಹೆಜ್ಜೆಹೆಜ್ಜೆಗೂ ರೈತನನ್ನು ರಕ್ಷಿಸುವ ಭೂತಾಯಿಯ ಫಲವತ್ತತೆ ಕಾಪಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಸಮಾಜ ಮತ್ತು ಸರ್ಕಾರ ಕೂಡ ಭೂಮಿಯ ಮಣ್ಣಿನ ಫಲವತ್ತತೆ ಸಂರಕ್ಷಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಭೂಮಿಯ ಮಣ್ಣಿನ ಬಗೆಗಿನ ತಿಳಿವಳಿಕೆ, ಬೀಜ, ಗೊಬ್ಬರ ಬಳಕೆ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಲ್ಲಿ ದಾಪುಗಾಲು ಹಾಕಬೇಕಿದೆ.ಲ್ಯಾಬ್ ಟು ಲ್ಯಾಂಡ್’ ಎಂಬ ಘೋಷಣೆ ವೇದಿಕೆಗೆ ಸೀಮಿತ ಆಗಬಾರದು. ರಾಜ್ಯದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಇಲಾಖೆಗಳ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು ರೈತರ ನೆರವಿಗೆ ಧಾವಿಸಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿ, ತೋಟಗಾರಿಕೆ ಕುರಿತಾದ ಶಿಕ್ಷಣ ಮತ್ತು ತರಬೇತಿ ನೀಡಲು ಪ್ರಥಮ ಆದ್ಯತೆ ನೀಡಬೇಕು. ಯುವಜನತೆ ಕೃಷಿಯಲ್ಲಿ ತೊಡಗಲು ಉತ್ತೇಜನ ನೀಡಬೇಕು. ರೈತರ ದಶಕಗಳ ಕಾಲದ ಬೇಡಿಕೆಗಳಾದ ಸಮರ್ಪಕ ನೀರಾವರಿ ಸೌಲಭ್ಯ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು, ನೈಸರ್ಗಿಕ ವಿಕೋಪಗಳಿಂದ ಬೆಳೆನಷ್ಟ ಆದಾಗ ವಾಸ್ತವ ನಷ್ಟದ ಪರಿಹಾರ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಎಂಬುದು ರೈತರ ಕನಸು.
ಕೃಷಿ ಡಿಪ್ಲೊಮಾ ಕೋರ್ಸ್ ಬಂದ್ ಮಾಡಿದ ಸರ್ಕಾರ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿರುವ ಕೃಷಿ ಸಂಶೋಧನೆ ಮತ್ತು ತೋಟಗಾರಿಕೆ ಕೇಂದ್ರದಲ್ಲಿ ನಡೆಸುತ್ತಿದ್ದ ಕೃಷಿ ಡಿಪ್ಲೊಮಾ ಕೋರ್ಸ್‌ನ ೨೦೨೪-೨೫ನೇ ಸಾಲಿಗೆ ಬಂದ್ ಮಾಡಲಾಗಿದೆ. ಪ್ರತಿವರ್ಷ ೧೦೦ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದು, ಕೃಷಿ ಮತ್ತು ತೋಟಗಾರಿಕೆಯಲ್ಲಿ ತಜ್ಞರಿಂದ ತರಬೇತಿ ಪಡೆಯುತ್ತಿದ್ದರು. ಶಿವಮೊಗ್ಗದಲ್ಲಿರುವ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಕತ್ತಲಗೆರೆ ಮತ್ತು ಉಡುಪಿ ಜಿಲ್ಲೆ ಬ್ರಹ್ಮಾವರ ಪಟ್ಟಣದಲ್ಲಿರುವ ಕೃಷಿ ಸಂಶೋಧನಾ ಮತ್ತು ತೋಟಗಾರಿಕೆ ಕೇಂದ್ರಗಳಿಗೆ ಮಾತ್ರ ಕೃಷಿ ಡಿಪ್ಲೊಮಾ ಕೋರ್ಸ್ ನಡೆಸಲು ವಿವಿ ಅನುಮತಿ ನೀಡಿತ್ತು. ಕತ್ತಲಗೆರೆ ಕಾಲೇಜಿನಿಂದ ಇದುವರೆಗೆ ಸಾವಿರಾರು ರೈತರ ಮಕ್ಕಳು ತರಬೇತಿ ಪಡೆದಿದ್ದಾರೆ, ಪ್ರಗತಿಪರ ರೈತರಾಗಿದ್ದಾರೆ, ತಜ್ಞರು ಕೃಷಿಯಲ್ಲಿ ರೈತರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಆದರೆ ಈಗ ಇದ್ದಕ್ಕಿದ್ದಂತೆ ಪ್ರವೇಶಾತಿ ಬಂದ್ ಮಾಡಲಾಗಿದೆ. ಪ್ರತಿವರ್ಷ ೧೦೦ ಸೀಟುಗಳಿದ್ದರೂ, ಸುಮಾರು ೩೦೦-೪೦೦ ವಿದ್ಯಾರ್ಥಿಗಳು ಪ್ರವೇಶ ಕೋರಿ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ೧೦೦ ಸೀಟುಗಳಿಗೆ ಸೀಮಿತವಾಗಿದ್ದರಿಂದ ಉಳಿದವರಿಗೆ ನಿರಾಶೆಯಾಗುತ್ತಿತ್ತು. ನೂರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯ ಇರುವ ಕೊಠಡಿಗಳು, ಗ್ರಂಥಾಲಯ, ಪ್ರಯೋಗಾಲಯ, ಹಾಸ್ಟೆಲ್ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳಿವೆ. ಆದರೆ ಈ ವರ್ಷ ಇದ್ದಕ್ಕಿದ್ದಂತೆ ಸರ್ಕಾರ ಈ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದನ್ನು ಸರ್ಕಾರವೇ ತಿಳಿಸಬೇಕಿದೆ. ಅಷ್ಟಕ್ಕೂ ಈ ಕೋರ್ಸುಗಳಿಗೆ ಸರ್ಕಾರವಾಗಲಿ, ವಿಶ್ವವಿದ್ಯಾನಿಲಯವಾಗಲಿ ಯಾವುದೇ ಅನುದಾನ ನೀಡುತ್ತಿರಲಿಲ್ಲ. ಕಾಲೇಜಿನಲ್ಲಿರುವ ಕೃಷಿ ವಿಜ್ಞಾನಿಗಳೇ ಸ್ವಂತ ಆಸಕ್ತಿಯಿಂದ ತರಗತಿಗಳನ್ನು ನಡೆಸುತ್ತಿದ್ದರು. ಈಗ ಸರ್ಕಾರವೇ ಕೋರ್ಸ್ ಬಂದ್ ಮಾಡಿರುವುದರಿಂದ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ.
ಕೃಷಿ-ತೋಟಗಾರಿಕೆ ಕಾಲೇಜಾಗಿ ಮೇಲ್ದರ್ಜೆಗೇರಿಸಿ
ಮಧ್ಯ ಕರ್ನಾಟಕದಲ್ಲಿ ಚನ್ನಗಿರಿ ತಾಲೂಕು ಕತ್ತಲಗೆರೆಯಲ್ಲಿರುವ ಕೃಷಿ ಸಂಶೋಧನೆ ಮತ್ತು ತೋಟಗಾರಿಕೆ ಕೇಂದ್ರದಲ್ಲಿ ಡಿಪ್ಲೊಮಾ ಕೋರ್ಸ್ ಪ್ರವೇಶಾತಿಗೆ ಮತ್ತೆ ಅನುಮತಿ ನೀಡುವ ಜೊತೆಗೆ ಕೇಂದ್ರವನ್ನು ಕೃಷಿ-ತೋಟಗಾರಿಕೆ ಕಾಲೇಜಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಜನತೆಯ ಬೇಡಿಕೆಯಾಗಿದೆ. ಹಲವು ವರ್ಷಗಳಿಂದ ಈ ಬೇಡಿಕೆ ಇದ್ದರೂ ಈ ಭಾಗದ ಜನಪ್ರತಿನಿಧಿಗಳು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಜೇನು ಸಾಕಾಣಿಕೆ ಸೇರಿದಂತೆ ಕೃಷಿ ಪೂರಕ ಚಟುವಟಿಕೆಗಳಲ್ಲಿ ಶಿಕ್ಷಣ ಮತ್ತು ತರಬೇತಿ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕಾದ ಸರ್ಕಾರ ಒಂದೆರೆಡು ಕಡೆ ಇರುವ ಕೃಷಿ ತರಬೇತಿ ಕೇಂದ್ರಗಳನ್ನೂ ಮುಚ್ಚಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಆಡಳಿತ ನಡೆಸುವವರ ವಿರುದ್ಧ ಬರುತ್ತಿವೆ. ಆದ್ದರಿಂದ ಕೃಷಿ ಹಾಗೂ ತೋಟಗಾರಿಕೆ ಸಚಿವರು ಗಮನ ಹರಿಸಿ ಜನರ ಆಶಯಗಳನ್ನು ಈಡೇರಿಸುವಲ್ಲಿ ಮುಂದಾಗಬೇಕು. ಕತ್ತಲಗೆರೆ ಕೃಷಿ ಸಂಶೋಧನಾ ಮತ್ತು ತೋಟಗಾರಿಕೆ ಕೇಂದ್ರವನ್ನು ಕೃಷಿ ಮತ್ತು ತೋಟಗಾರಿಕೆ ಕಾಲೇಜಾಗಿ ಮೇಲ್ದರ್ಜೆಗೇರಿಸಬೇಕಾಗಿದೆ.
ಈ ಹಿಂದೆ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳು `ಭತ್ತದ ಕಣಜ’ ಎಂಬ ಹೆಸರು ಪಡೆದಿತ್ತು. ಆದರೆ ಕಾರ್ಮಿಕರ ಕೊರತೆ, ಭದ್ರಾ ಅಚ್ಚುಕಟ್ಟು ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯದಿರುವುದು, ಮಾರುಕಟ್ಟೆಯಲ್ಲಿ ಸರಿಯಾದ ಧಾರಣಿ ಸಿಗದೆ ಇರುವುದು ಮತ್ತಿತರ ಕಾರಣಗಳಿಂದ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ನಗರಕ್ಕೆ ಸಮೀಪ ಇರುವ ಭತ್ತದ ಗದ್ದೆಗಳಿಂದು ಬಡಾವಣೆಗಳಾಗಿ ಪರಿವರ್ತನೆಯಾಗಿವೆ. ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಯಿಂದಾಗಿ ಜಮೀನುಗಳ ಬೆಲೆ ಗಗನಕ್ಕೇರಿದ್ದು, ರೈತರು ಜಮೀನು ಮಾರಾಟ ಮಾಡಿ, ಕಡಿಮೆ ಬೆಲೆ ಇರುವ ಕಡೆ ಖರೀದಿಸುತ್ತಿದ್ದಾರೆ.
ಮತ್ತೆ ಕೆಲವು ಗದ್ದೆಗಳು ಅಡಿಕೆ ತೋಟಗಳಾಗಿವೆ. ಇಂದು ದಾವಣಗೆರೆ ಜಿಲ್ಲೆ ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿ ಹೊರಹೊಮ್ಮುತ್ತಿದೆ. ಜೊತೆಗೆ ಹತ್ತಿ, ಮೆಕ್ಕೆಜೋಳ, ಶೇಂಗಾ, ದ್ವಿದಳ ಧಾನ್ಯ, ರಾಗಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಈ ಬಗ್ಗೆ ರೈತರಿಗೆ ಶಿಕ್ಷಣ, ತರಬೇತಿ, ಕೃಷಿ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಿದೆ. ಅಲ್ಲದೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪಿಸುವುದು ತೀರ ಅಗತ್ಯ ಇದ್ದು, ಇದಕ್ಕಾಗಿ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಹೊಂದಿರುವ ಚನ್ನಗಿರಿ ತಾಲೂಕು ಕತ್ತಲಗೆರೆಯ ಕೃಷಿ ಸಂಶೋಧನಾ ಕೇಂದ್ರ ಸೂಕ್ತ ಸ್ಥಳವಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿವಿ ಪಕ್ಕದ ಶಿವಮೊಗ್ಗದಲ್ಲಿದ್ದರೂ, ಕತ್ತಲಗೆರೆ ಕೃಷಿ ಡಿಪ್ಲೊಮಾ ಕೋರ್ಸ್ ಬಂದ್ ಮಾಡಿರುವುದು ಸರಿಯಲ್ಲ. ತಕ್ಷಣ ೨೦೨೪-೨೫ನೇ ಸಾಲಿನ ಕೋರ್ಸ್‌ಗಳಿಗೆ ಮತ್ತೆ ಪ್ರವೇಶಾತಿ ನೀಡಬೇಕು. ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪಿಸಲು ಮುಂದಾಗಬೇಕು ಎಂಬುದು ಇಲ್ಲಿನ ಕೃಷಿ ವಿಜ್ಞಾನಿಗಳ ಆಗ್ರಹವಾಗಿದ್ದು, ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕಿದೆ.

Next Article