ಕೃಷ್ಣಾ ನದಿಯಿಂದ ನೀರು ಹರಿಸಲು ತೀರ್ಮಾನ
ಬೆಂಗಳೂರು: ನಮ್ಮ ಸರ್ಕಾರ ರೈತರ ಪರವಾಗಿದ್ದು, ಅವರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ
ಬೆಂಗಳೂರಿನ ಗೃಹಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು ಹೆಚ್ಚು ಮಳೆಯಾಗದ ಕಾರಣ ರಾಜ್ಯದ ಹಲವು ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೆಣಸಿನಕಾಯಿ ಬೆಳೆಗಾರರು 2000 ಕೋಟಿ ನಷ್ಟವಾಗುತ್ತಿದೆ ಎಂದು ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದ್ದು, ಅವರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ನಿರತವಾಗಿದೆ.
ಕಳೆದ ವರ್ಷದ ನೀರಿನ ಸಂಗ್ರಹಣೆಗೆ ಹೋಲಿಸಿದರೆ ಈ ವರ್ಷ ಹಲವು ವ್ಯತ್ಯಾಸಗಳಾಗಿವೆ. ರೈತರ ನೀರಿನ ಸಮಸ್ಯೆ ಕುರಿತು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಚರ್ಚೆ ಮಾಡಿದ್ದೇನೆ. ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು 2.75 ಟಿಎಂಸಿ ನೀರು ಬಿಡಲು ನಿರ್ಧಾರ ಮಾಡಿದ್ದೇವೆ.
ಈ ನೀರನ್ನು ಯಾರು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ ಅವರಿಗೆ ಉಪಯೋಗವಾಗುವಂತೆ ನೋಡಿಕೊಳ್ಳುವುದು ರೈತರ ಪರವಾಗಿ ಹೋರಾಟ ಮಾಡುವವರ ಜವಾಬ್ದಾರಿ. ಮಳೆ ಕೊರತೆಯಿಂದಾಗಿ ಮೆಣಸಿನಕಾಯಿ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ಮನಗಂಡು ನೀರು ಹರಿಸಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.