ಕೆಆರ್‌ಎಸ್ ಕಾರ್ಯಾಧ್ಯಕ್ಷ ಲಿಂಗೇಗೌಡ ನಿಧನ
ಮಂಡ್ಯ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರು ಗುಜರಾತಿನಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ.
ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಭೇಟಿಯಾಗಿ ಮನವಿ ನೀಡಲು ಮಂಗಳೂರಿನಿಂದ ದೆಹಲಿಗೆ ಐದು ಜನರ ತಂಡ ಪಾದಯಾತ್ರೆ ಹೊರಟಿತ್ತು. ಇಂದು 55ನೇ ದಿನ ಪಾದಯಾತ್ರೆಯು ಗುಜರಾತಿನ ಭರೂಚ್ ಎನ್ನುವ ನಗರ ತಲುಪಿತ್ತು.
ಈ ಪಾದಯಾತ್ರೆಯಲ್ಲಿದ್ದವರಿಗೆ ನೈತಿಕ ಬೆಂಬಲ ನೀಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರೂ ಸಹ ನಿನ್ನೆ ಮತ್ತು ಇಂದು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭರೂಚ್ ನಗರದ ಬಳಿಯ ಹೆದ್ದಾರಿಯಲ್ಲಿ ಲಾರಿಯೊಂದು ರಸ್ತೆಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಹರಿದು, KRS ಪಕ್ಷದ ಕಾರ್ಯಾಧ್ಯಕ್ಷ ಎಸ್.ಎಚ್. ಲಿಂಗೇಗೌಡ ಮತ್ತು ಮಂಗಳೂರಿನ ಕುಂಜಿ ಮೂಸಾ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರು ಸೇರಿದಂತೆ ನಾಲ್ಕು ಜನರಿಗೆ ತೀವ್ರ ಗಾಯಗಳಾಗಿವೆ. ಅವರು ಭರೂಚ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಶೀಘ್ರ ಮುಗಿಸಿ ಮೃತದೇಹಗಳನ್ನು ರಾಜ್ಯಕ್ಕೆ ವಾಪಸು ತರುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಗುಜರಾತ್ ಸರ್ಕಾರ ಕ್ರಮ ಕೈಗೊಂಡಿದೆ.