For the best experience, open
https://m.samyuktakarnataka.in
on your mobile browser.

ಕೆಎಎಫ್ ನೀರಿಗೆ ನಂದಿನಿ ಹೆಸರು ಬಳಕೆಗೆ ತಡೆ

03:12 AM Jan 28, 2024 IST | Samyukta Karnataka
ಕೆಎಎಫ್ ನೀರಿಗೆ ನಂದಿನಿ ಹೆಸರು ಬಳಕೆಗೆ ತಡೆ

ಬೆಂಗಳೂರು: ರಾಜ್ಯ ಸರಕಾರಿ ಸ್ವಾಮ್ಯದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಖನಿಜಯುಕ್ತ ನೀರಿನ ಉತ್ಪಾದನೆಗೆ ನಂದಿನಿ ಹೆಸರು ಮತ್ತು ಚಿಹ್ನೆಯನ್ನು ಬಳಸದಂತೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.
ಮೆಸರ್ಸ್ ವೆಂಕಿಸ್ ಮಿನರಲ್ ವಾಟರ್ ಪ್ರೊಡಕ್ಟ್ಸ ಕಂಪನಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ೧೮ನೇ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿ ಕೆಎಂಎಫ್ ಸಂಸ್ಥೆಯು ಖನಿಜಯುಕ್ತ ಪ್ಯಾಕೇಜ್ಡ್ ನೀರಿಗೆ ನಂದಿನಿ ಹೆಸರು ಮತ್ತು ಚಿಹ್ನೆ ಬಳಸದಂತೆ ಆದೇಶ ನೀಡಿದೆ.
ವೆಂಕಿಸ್ ಮಿನರಲ್ ವಾಟರ್ ಪ್ರೊಡಕ್ಟ್ಸ ಕಂಪನಿಯು ೨೦೦೨ರಿಂದ ನಂದಿನಿ ಅಕ್ವಾ ಹೆಸರಿನಲ್ಲಿ ಖನಿಜಯುಕ್ತ ನೀರಿನ ಉತ್ಪಾದನೆ ಮಾಡುತ್ತ ಬಂದಿದೆ. ಆದರೆ ಕೆಎಂಎಫ್ ಸಂಸ್ಥೆಯು ಹಾಲಿನ ಉತ್ಪನ್ನಗಳ ಸಂಸ್ಥೆಯಾಗಿದ್ದು, ಅದೂ ಕೂಡ ಪ್ಯಾಕೇಜ್ಡ್ ನೀರಿನ ಬಾಟಲ್‌ಗಳಿಗೆ ನಂದಿನಿ ಎಂದೇ ಹೆಸರು ಮತ್ತು ಚಿಹ್ನೆ ಬಳಸುತ್ತಿದೆ. ಆದರೆ ನಂದಿನಿ ಅಕ್ವಾ ಅದಕ್ಕಿಂತ ೧೮ ವರ್ಷಗಳ ಮೊದಲೇ ಇದೇ ಹೆಸರು ಚಿಹ್ನೆ ಬಳಸುತ್ತ ಬಂದಿರುವುದರಿಂದ ಕೆಎಂಎಫ್‌ಗೆ ಇದರ ಮೇಲೆ ಹಕ್ಕಿಲ್ಲ. ಹೀಗಾಗಿ ೨೦೧೮ರಲ್ಲಿಯೇ ಕೆಎಂಎಫ್ ವಿರುದ್ಧ ಇದೇ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ಬಾಕಿ ಇದ್ದರೂ ಕೆಎಂಎಫ್
ಕಳೆದ ತಿಂಗಳು ಬಹಿರಂಗ ಜಾಹೀರಾತು ನೀಡಿ, ನಂದಿನಿ ಹೆಸರಿನಲ್ಲೇ ಖನಿಜಯುಕ್ತ ನೀರಿನ ಬಾಟಲ್ ತಯಾರಿಕೆಗೆ ಟೆಂಡರ್ ಆಹ್ವಾನ ನೀಡಿದೆ. ಹೀಗಾಗಿ ನ್ಯಾಯಾಲಯ ನಂದಿನಿ ಹೆಸರು ಮತ್ತು ಚಿಹ್ನೆ ಬಳಕೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕಂಪನಿಯ ಪರ ವಕೀಲರು ವಾದ ಮಂಡಿಸಿದ್ದರು.
ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ನಂದಿನಿ ಹೆಸರು ಮತ್ತು ಚಿಹ್ನೆ ಬಳಕೆಗೆ ಕೆಲವು ಷರತ್ತುಗಳನ್ನು ವಿಧಿಸಿ ಮಧ್ಯಂತರ ತಡೆ ನೀಡಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಮೊಕದ್ದಮೆಯಲ್ಲಿ ಅರ್ಜಿದಾರರು ವಿಫಲರಾದರೆ ಪ್ರತಿವಾದಿಗೆ ಪರಿಹಾರ ನೀಡುವ ಬಗೆಗೆ ಮುಚ್ಚಳಿಕೆ ಬರೆದು ಕೊಡಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದ್ದು, ಪ್ರತಿವಾದಿ ಕೆಎಂಎಫ್‌ಗೆ ಫೆಬ್ರವರಿ ೧೩ರೊಳಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದೆ.