For the best experience, open
https://m.samyuktakarnataka.in
on your mobile browser.

ಕೆಎಲ್‌ಇ ತಾಂತ್ರಿಕ ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾದ ಸಾಧಕರ ಹೆಜ್ಜೆ

02:58 AM Nov 16, 2024 IST | Samyukta Karnataka
ಕೆಎಲ್‌ಇ ತಾಂತ್ರಿಕ ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾದ ಸಾಧಕರ ಹೆಜ್ಜೆ

ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಹೆಗ್ಗಳಿಕೆ ಹೊಂದಿರುವ ಪ್ರತಿಷ್ಠಿತ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ೬ನೇ ಘಟಿಕೋತ್ಸವ ನ. ೧೬ರಂದು ನಡೆಯಲಿದೆ.
ಏರೋಸ್ಪೇಸ್ ಮತ್ತು ಗ್ರಾಹಕ ಸರಕುಗಳ ಉತ್ಪಾದನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಏಕಸ್ ಸಂಸ್ಥೆಯ ಸಿಇಓ ಅರವಿಂದ ಮೆಳ್ಳಿಗೇರಿ ಹಾಗೂ ಕೈಗಾರಿಕೆ, ಕೃಷಿ ಮತ್ತು ಸಾರ್ವಜನಿಕ ಸೇವೆಗಾಗಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ವಿಶ್ವವಿದ್ಯಾಲಯ `ಗೌರವ ಡಾಕ್ಟರೇಟ್' ನೀಡಿ ಗೌರವಿಸಲಿದೆ. ಗೌರವ ಡಾಕ್ಟರೇಟ್‌ಗೆ ಭಾಜನರಾದ ಇಬ್ಬರೂ ಸಾಧಕರ ಕಿರು ಪರಿಚಯ ಈ ಕೆಳಗಿನಂತಿದೆ.
ಏಕಸ್ ಸಂಸ್ಥೆಯ ಸಿಇಓ ಅರವಿಂದ ಮೆಳ್ಳಿಗೇರಿ ಪರಿಚಯ:
ಏಕಸ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಮೆಳ್ಳಿಗೇರಿ ಅವರು ಭಾರತದ ಉತ್ಪಾದನಾ ವಲಯವನ್ನು ಮರುವ್ಯಾಖ್ಯಾನಿಸಿದ್ದಾರೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ್ದಾರೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸಿದ್ದಾರೆ. ಎನ್‌ಐಟಿ ಕರ್ನಾಟಕ ಮತ್ತು ಪೆನ್ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾದ ಮೆಳ್ಳಿಗೇರಿ ಅವರು, ಏರೋಸ್ಪೇಸ್‌ನಲ್ಲಿ ಭಾರತದ ಮೊದಲ ನಿಖರ ಎಂಜಿನಿಯರಿಂಗ್ ಎಸ್‌ಇಝಡ್ ಅನ್ನು ಸ್ಥಾಪಿಸಿದರು. ಇದು ಜಾಗತಿಕವಾಗಿ ಗುರುತಿಸಲ್ಪಟ್ಟ ಯೋಜನೆಯಾಗಿದ್ದು, ೨೦೧೬ರಲ್ಲಿ ಏರ್‌ಬಸ್ ಇನ್ನೋವೇಶನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
೨೦೧೬ರಲ್ಲಿ ಮೆಳ್ಳಿಗೇರಿಯವರು ಕೊಪ್ಪಳದಲ್ಲಿ ೪೦೦ ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್‌ನಿಂದ ಆಟಿಕೆ ಉತ್ಪಾದನಾ ಘಟಕ ಸ್ಥಾಪನೆ, ಹುಬ್ಬಳ್ಳಿಯಲ್ಲಿ ಭಾರತದ ಮೊದಲ ಗ್ರಾಹಕ ಸರಕು ಮತ್ತು ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ಸ್ಥಾಪನೆ ಮಾಡಿದ ಹೆಗ್ಗಳಿಕೆ ಹೊಂದಿದ್ದರು.
ಸದ್ಯ ಮೆಳ್ಳಿಗೇರಿ ಅವರ ಸಾರಥ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ ಏಕಸ್ ಸಂಸ್ಥೆ, ಏರೋಸ್ಪೇಸ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸೂಪರ್ ಎಂಟರ್‌ಪ್ರೆನಿಯರ್ ಪ್ರಶಸ್ತಿ, ನ್ಯೂಸ್ ೧೮ ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಮೆಳ್ಳಿಗೇರಿ ಅವರಿಗೆ ಸಂದಿವೆ.
ಉದ್ಯಮಿ, ಮಾಜಿ ಸಚಿವ ಮುರುಗೇಶ ನಿರಾಣಿ ಪರಿಚಯ:
ನಿರಾಣಿ ಸಮೂಹ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಕೈಗಾರಿಕೆ, ಕೃಷಿ ಮತ್ತು ಸಾರ್ವಜನಿಕರ ಅವಿರತ ಸೇವೆಯನ್ನು ಮನಗಂಡು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.
ಜೂನ್ ೧, ೧೯೬೫ ರಂದು ಬಾಗಲಕೋಟೆ ಜಿಲ್ಲೆಯ ಬಸವ ಹಂಚಿನಾಳದಲ್ಲಿ ಜನಿಸಿದ ನಿರಾಣಿ ಅವರು, ಸಾಧಾರಣ ಕೃಷಿ ಕುಟುಂಬದಿಂದ ಪ್ರಮುಖ ಕೈಗಾರಿಕೋದ್ಯಮಿಗೆ ಪ್ರಯಾಣ ಬೆಳೆಸಿದ್ದು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರ್ ವ್ಯಾಸಂಗ, ಪುಣೆಯ ಫರ್ಗುಸನ್ ಕಾಲೇಜ್‌ನಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.
೧೯೯೬ರಲ್ಲಿ ಟ್ರಾಕ್ಟರ್ ಟ್ರೈಲರ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದರು. ನಂತರ ೧೯೯೭ರಲ್ಲಿ ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿದರು. ೭೦,೦೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸಿದರು ಮತ್ತು ೩೦೦,೦೦೦ ಕಬ್ಬು ಬೆಳೆಗಾರರು ಇಂದಿಗೂ ಲಾಭ ಪಡೆಯುತ್ತಿದ್ದಾರೆ. ಕೈಗಾರಿಕೋದ್ಯಮಿಯಾಗಿ, ನಿರಾಣಿ ಅವರು ನಿರಾಣಿ ಸಮೂಹವನ್ನು ವಿದ್ಯುತ್ ಉತ್ಪಾದನೆ, ಬಟ್ಟಿ ಇಳಿಸುವಿಕೆ, ಜೈವಿಕ ಇಂಧನಗಳು ಮತ್ತು ಸಿಮೆಂಟ್ ಉದ್ಯಮವನ್ನು ವಿಸ್ತರಿಸಿದರು. ಹೊಸ ಕೈಗಾರಿಕಾ ನೀತಿ ಮತ್ತು ಎರಡು ಜಾಗತಿಕ ಹೂಡಿಕೆದಾರರ ಸಭೆಗಳು ಸೇರಿದಂತೆ ಕರ್ನಾಟಕದ ಕೈಗಾರಿಕಾ ಸಚಿವರಾಗಿ ಅವರ ಕಾರ್ಯ ಶ್ಲಾಘನೀಯ.