ಕೆಎಸ್‌ಆರ್‌ಟಿಸಿ ಡಿಸಿ ಮೇಲೆ ಚಾಕುವಿನಿಂದ ದಾಳಿ
ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಡಿಸಿ ಮೇಲೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೇ ಚಾಕುವಿನಿಂದ ಇರಿಯಲು ಯತ್ನಿಸಿರುವ ಘಟನೆ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಡಿಸಿ ಕೈ ಬೆರಳಿಗೆ ಗಾಯವಾಗಿದೆ
ಜಗದೀಶ್ ಕುಮಾರ್ ಗಾಯಗೊಂಡಿರುವ ಕೆಎಸ್‌ಆರ್‌ಟಿಸಿ ಡಿಸಿ. ಕೆಎಸ್‌ಆರ್‌ಟಿಸಿ ಜೂನಿಯರ್ ಅಸಿಸ್ಟೆಂಟ್ ರಿತೇಶ್ ಚಾಕುವಿನಿಂದ ಹಲ್ಲೆ ನಡೆಸಿರುವ ಆರೋಪಿ. ಗುರುವಾರ ರಾತ್ರಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ರಿತೇಶ್ ಏಕಾಏಕಿ ಕೆಎಸ್‌ಆರ್‌ಟಿಸಿ ಡಿಸಿ ಜಗದೀಶ್ ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಬೇರೆ ಜಗದೀಶ್ ಕುಮಾರ್ ಕೈಯನ್ನು ಅಡ್ಡ ಹಿಡಿದಿದ್ದರಿಂದಾಗಿ ಬೆರಳುಗಳಿಗೆ ಗಾಯವಾಗಿದೆ. ಚಾಕುವಿನಿಂದ ದಾಳಿ ನಡೆಸಿದ ರಿತೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.
ರಿತೇಶ್ ನಡೆಸಿದ ದಾಳಿಯಿಂದ ಗಾಯಗೊಂಡಿರುವ ಜಗದೀಶ್ ಕುಮಾರ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿತೇಶ್ ಕುಮಾರ್ ಹಾಜರಾತಿ ಸರಿ ಇಲ್ಲ ಎನ್ನುವ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಡಿಸಿ ಜಗದೀಶ್ ಕುಮಾರ್ ಅವರು ರಿತೇಶ್ ಕುಟುಂಬಸ್ಥರನ್ನು ಕರೆಸಿ ಕೌನ್ಸಲಿಂಗ್ ನಡೆಸಿದರು. ಕುಟುಂಬದವರ ಮನವಿ ಮೇರೆಗೆ ರಿತೇಶ್‌ನನ್ನು ಬೇಲೂರಿಗೆ ವರ್ಗಾವಣೆ ಮಾಡಿದ್ದರು.
ಇದರಿಂದ ರಿತೇಶ್ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಇದೇ ಕಾರಣದಿಂದಲೇ ರಿತೇಶ್ ಕೆಎಸ್‌ಆರ್‌ಟಿಸಿ ಡಿಸಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರ ತನಿಖೆಯಿಂದಷ್ಟೇ ಘಟನೆಗೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.