For the best experience, open
https://m.samyuktakarnataka.in
on your mobile browser.

ಕೆಪಿಎಸ್‌ಸಿ ಕುರುಕ್ಷೇತ್ರ

02:30 AM Feb 07, 2024 IST | Samyukta Karnataka
ಕೆಪಿಎಸ್‌ಸಿ ಕುರುಕ್ಷೇತ್ರ

ಶಾಸನಬದ್ಧವಾಗಿ ಸ್ಥಾಪನೆಯಾಗಿರುವ ಸಂಸ್ಥೆಗಳು ಕಾನೂನು ಹಾಗೂ ಸಂಪ್ರದಾಯಬದ್ಧವಾಗಿ ನಡೆದುಕೊಳ್ಳಬೇಕು ಎಂಬುದು ಸಾರ್ವತ್ರಿಕ ಅಪೇಕ್ಷೆಯಷ್ಟೆ ಅಲ್ಲ. ರಾಜ್ಯಾಂಗದ ಷರತ್ತು ಕೂಡಾ. ಆದರೆ, ಹಲವಾರು ಸಂದರ್ಭಗಳಲ್ಲಿ ಇಂತಹ ಶಾಸನಬದ್ಧ ಸಂಸ್ಥೆಗಳಲ್ಲಿ ಕುರುಕ್ಷೇತ್ರದ ರೀತಿಯ ಬೆಳವಣಿಗೆಗಳು ಜರುಗುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ವ್ಯಕ್ತಿ ಪ್ರತಿಷ್ಠೆಯಿಂದಲೋ ಅಥವಾ ಕಾನೂನಿನ ಜಿಜ್ಞಾಸೆಯಿಂದಲೋ ಇಂತಹ ಕುರುಕ್ಷೇತ್ರದ ಬೆಳವಣಿಗೆಗಳು ನಡೆಯುತ್ತಿರುವುದರ ಪರಿಣಾಮವೆಂದರೆ ಸಾರ್ವಜನಿಕ ಹಿತಕ್ಕೆ ಧಕ್ಕೆ ಎಂಬುದಕ್ಕೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಂತರಿಕ ಬಿಕ್ಕಟ್ಟು ಈಗ ಬೀದಿ ನಾಟಕಕ್ಕೆ ತಿರುಗಿರುವುದು ಒಂದು ದೃಷ್ಟಾಂತ. ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರು ಹಾಗೂ ಕಾರ್ಯದರ್ಶಿ ನಡುವಣ ಸಮರ ದಿನದಿಂದ ದಿನಕ್ಕೆ ಹೊಸರೂಪ ಪಡೆಯುತ್ತಿರುವ ಪರಿಣಾಮ ಉದ್ಯೋಗದ ಆಸೆ ಹೊತ್ತ ಸಾವಿರಾರು ವಿದ್ಯಾವಂತ ಯುವಕರಿಗೆ ಪ್ರಾಣ ಸಂಕಟದ ಸ್ಥಿತಿ. ಇಂತಹ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಲ್ಲವೇ ರಾಜ್ಯಪಾಲರು ಮಧ್ಯಪ್ರವೇಶಿಸುವ ಅಗತ್ಯವಿದ್ದರೂ ನಿರ್ಣಯಾತ್ಮಕ ರೂಪದಲ್ಲಿ ಯಾವುದೇ ಬೆಳವಣಿಗೆಗಳು ಇಲ್ಲವೇ ದೂರುಗಳು ಬಾರದೇ ಇರುವ ಪರಿಣಾಮ ಈಗ ಕುರುಕ್ಷೇತ್ರದ ಜೊತೆಗೆ ಕಾನೂನಿನ ಸಮರಕ್ಕೆ ಎರಡೂ ಬಣಗಳು ಮುಂದಾಗುತ್ತಿರುವುದು ಯಾವುದೇ ದೃಷ್ಟಿಕೋನದಿಂದಲೂ ಒಳ್ಳೆಯ ಬೆಳವಣಿಗೆಯಲ್ಲ.
ಶಾಸನಬದ್ಧ ಸಂಸ್ಥೆಗಳಲ್ಲಿ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರ ನಿಲುವು ನಿರ್ಣಾಯಕವೇ. ಆದರೆ, ಈ ನಿರ್ಣಾಯಕ ನಿಲುವುಗಳು ಸರ್ಕಾರದ ನಿಯಮಾವಳಿಯ ಚೌಕಟ್ಟಿನಲ್ಲಿ ಇರಲೇಬೇಕು ಎಂಬ ಷರತ್ತು ಪರಿಪಾಲನೆಯಾಗಬೇಕು. ಈ ಚೌಕಟ್ಟಿನ ಪರಿಪಾಲನೆ ಉಸ್ತುವಾರಿ ನೋಡಿಕೊಳ್ಳುವ ಹೊಣೆ ಹೊತ್ತವರು ಕೆಪಿಎಸ್‌ಸಿ ಕಾರ್ಯದರ್ಶಿ. ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ಕೈಗೊಂಡ ನಿರ್ಣಯಗಳು ನಿಯಮಾಳಿಗೆ ಬದ್ಧವಾಗಿಲ್ಲ ಎಂಬ ನಿಲುವಿಗೆ ಕಾರ್ಯದರ್ಶಿಗಳು ಬಂದ ಮೇಲೆ ಸರ್ಕಾರ ಮಧ್ಯಪ್ರವೇಶಿಸಿ ಇದನ್ನು ಸರಿಪಡಿಸಬೇಕಾದದ್ದು ನಿರೀಕ್ಷಿತ ಬೆಳವಣಿಗೆ. ಆದರೆ, ಇದುವರೆಗೆ ಅಂತಹ ಯಾವುದೇ ಮಧ್ಯಪ್ರವೇಶದ ಸುಳಿವು ಕಾಣುತ್ತಿಲ್ಲ. ಅಧ್ಯಕ್ಷರು ಈ ಬೆಳವಣಿಗೆಗಳಿಂದ ರೋಸಿ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರ ಜೊತೆ ಕಾನೂನು ಸಮರದ ಬಗ್ಗೆ ಸಮಾಲೋಚಿಸಿರುವ ವರದಿಗಳು ನಿಜವಾಗಿದ್ದರೆ ನಿಜಕ್ಕೂ ಇದು ಗಂಭೀರ ವಿಚಾರ. ಇದಕ್ಕೆ ಸಮಾನಾಂತರವಾಗಿ ಕಾರ್ಯದರ್ಶಿಗಳು ಅಧ್ಯಕ್ಷರ ನೇತೃತ್ವದ ಸದಸ್ಯರ ನಿರ್ಣಯಗಳನ್ನು ಜಾರಿ ಮಾಡಲು ಹಿಂದೇಟು ಹಾಕುವ ಹಾಗೂ ಯಾರ ಗಮನಕ್ಕೂ ತಾರದೆ ನೇಮಕಾತಿ ಆದೇಶಗಳಿಗೆ ಸಹಿ ಹಾಕಿರುವ ಬೆಳವಣಿಗೆಗಳು ನಿಜವೇ ಆಗಿದ್ದರೆ ಅದೂ ಕೂಡಾ ಕರ್ತವ್ಯ ಲೋಪವೇ.
ಹಾಗೆ ನೋಡಿದರೆ, ಈ ಬಿಕ್ಕಟ್ಟಿನ ಹಿಂದಿರುವುದು ಅಸಲಿ ರಾಜಕೀಯ. ನೇಮಕಗೊಂಡ ಸದಸ್ಯರ ಪೈಕಿ ಕೆಲವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಗೆ ಸೇರಿದವರು. ಇನ್ನು ಕೆಲವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕಗೊಂಡವರು. ಅಧ್ಯಕ್ಷರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡವರು. ಈ ನೇಮಕಗೊಂಡ ಸದಸ್ಯರ ನಡುವೆಯೇ ಆಡಳಿತಾತ್ಮಕ ವಿಚಾರಗಳಲ್ಲಿ ಭಿನ್ನಮತ ಇರುವುದನ್ನು ನಿರಾಕರಿಸುವುದು ಕಷ್ಟ. ಇನ್ನು ಈ ಎರಡೂ ಬಣಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಆಯೋಗದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಕಾರ್ಯದರ್ಶಿ ಆದವರಿಗೆ ಯಾವತ್ತಿಗೂ ದೊಡ್ಡ ಸವಾಲು. ಇಂತಹ ಗತ್ಯಂತರ ಸಂದರ್ಭದಲ್ಲಿ ಸವಾಲು-ಜವಾಬುಗಳ ಸಂಸ್ಕೃತಿ ತಲೆದೋರುವುದು ಸ್ವಾಭಾವಿಕವೇ. ಈಗ ಕೆಪಿಎಸ್‌ಸಿಯಲ್ಲಿ ಆಗುತ್ತಿರುವುದು ಕೂಡಾ ಅದೇ.
ಹಿಂದೆಯೂ ಕೂಡಾ ಕೆಪಿಎಸ್‌ಸಿಯಲ್ಲಿ ಬಿಕ್ಕಟ್ಟು ತಲೆದೋರಿತ್ತು. ಆದರೆ, ಈ ಪ್ರಮಾಣದ ಬಿಕ್ಕಟ್ಟು ಕಾಣಿಸಿಕೊಂಡಿರುವುದು ಇದೇ ಮೊದಲು. ರಾಜಕೀಯ ಹಿನ್ನೆಲೆಯ ಇಲ್ಲವೇ ರಾಜಕೀಯ ಉದ್ದೇಶಗಳಿಗಾಗಿಯೇ ಸದಸ್ಯರನ್ನು ನೇಮಿಸಿದಾಗ ಇಂತಹ ಬಿಕ್ಕಟ್ಟುಗಳು ತಲೆದೋರುವುದು ಸಹಜವೇ. ಬೇವು ಬಿತ್ತಿ ಮಾವನ್ನು ನಿರೀಕ್ಷಿಸುವುದಾದರೂ ಹೇಗೆ? ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈಗ ಗರಿಬಿಚ್ಚಿಕೊಂಡಿರುವ ಚಟುವಟಿಕೆ ವಾಸ್ತವವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಂಬಂಧಿಸಿದ್ದು. ಇದರ ನಡುವೆ ಸಿಕ್ಕಿಬಿದ್ದಿರುವವರು ಕಾರ್ಯದರ್ಶಿ. ಹಾಗೆಯೇ, ಕಾರ್ಯದರ್ಶಿಯಾದವರು ಸರ್ಕಾರದ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸಬೇಕೇ ವಿನಃ ಶೌರ್ಯದ ನಿಲುವನ್ನು ಪ್ರದರ್ಶಿಸಲು ಹೋಗಬಾರದು. ಈ ಸಂಸ್ಥೆ ಸ್ಥಾಪನೆಯಾಗಿರುವುದು ನಿರುದ್ಯೋಗಿಗಳ ಬವಣೆ ನಿವಾರಿಸುವ ಸಲುವಾಗಿ. ಆದರೆ, ಈಗ ಆಯೋಗದ ಪದಾಧಿಕಾರಿಗಳ ಬವಣೆ ನಿವಾರಿಸುವ ಹೊಣೆ ಹೊರುವ ಜವಾಬ್ದಾರಿಯನ್ನು ಯಾರು ಹೊರಬೇಕು ಎಂಬುದು ಕಾನೂನಿನ ಜಿಜ್ಞಾಸೆ. ಏಕೆಂದರೆ, ಕೆಪಿಎಸ್‌ಸಿ ಶಾಸನಾತ್ಮಕವಾಗಿ ಸ್ಥಾಪನೆಗೊಂಡಿರುವ ಸಂಸ್ಥೆ. ಸರ್ಕಾರ ನೇರವಾಗಿ ಮಧ್ಯಪ್ರವೇಶಿಸಲು ಮುಕ್ತ ಅವಕಾಶಗಳಿಲ್ಲ. ದೂರುಗಳಿದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶ. ಹಾಗಿದ್ದರೆ ಇದಕ್ಕೆ ಪರಿಹಾರವನ್ನು ಸರ್ಕಾರವೇ ಹುಡುಕಿ ನಿರುದ್ಯೋಗಿಗಳ ಬವಣೆ ನಿವಾರಿಸಬೇಕಾದದ್ದು ಧರ್ಮ.