For the best experience, open
https://m.samyuktakarnataka.in
on your mobile browser.

ಕೆಪಿಎಸ್‌ಸಿ ನೇಮಕಾತಿ ವಿಳಂಬ ವಿರುದ್ಧ ಆಕ್ರೋಶ

11:27 PM Jan 30, 2024 IST | Samyukta Karnataka
ಕೆಪಿಎಸ್‌ಸಿ ನೇಮಕಾತಿ ವಿಳಂಬ ವಿರುದ್ಧ ಆಕ್ರೋಶ

ಬೆಂಗಳೂರು: ವಿವಿಧ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದಿಂದ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶಾಸಕ ಸುರೇಶ್‌ಕುಮಾರ್ ನೇತೃತ್ವದಲ್ಲಿ ಕೆಪಿಎಸ್‌ಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮತ್ತು ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸುವಲ್ಲಿ ಕೆಪಿಎಸ್‌ಸಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಆಯೋಗದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ನಡುವಿನ ಸಂಘರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಖುದ್ದಾಗಿ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿದ್ದೇನೆ. ಇದುವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಂಪರ್ಕಿಸಿ ಕೆಪಿಎಸ್‌ಸಿಯಿಂದಾಗುತ್ತಿರುವ ಸಮಸ್ಯೆ ಕುರಿತು ವಿವರಿಸಿದ್ದೇನೆ ಎಂದು ಶಾಸಕ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಕಡೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳು ನೇಮಕಾತಿ, ಅಧಿಸೂಚನಾ ಪತ್ರ ಹಿಡಿದು ಕೆಪಿಎಸ್‌ಸಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ವಿಕೋಪಕ್ಕೆ ತೆರಳುತ್ತಿದ್ದಂತೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಸಂವಿಧಾನ ಬದ್ಧವಾಗಿ ರಚನೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ವೈಯಕ್ತಿಕ ಜಗಳದಿಂದಾಗಿ ಲಕ್ಷಾಂತರ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಉದ್ಯೋಗ ಆಕಾಂಕ್ಷಿ ಪ್ರತಿಭಟನಾಕಾರರು ಆರೋಪಿಸಿದರು.
ಆಯೋಗ ಕೈಗೊಂಡಿರುವ ವಿವಿಧ ಇಲಾಖೆ ಪರೀಕ್ಷೆ ಬರೆದು ಎರಡು ವರ್ಷ ಮುಕ್ತಾಯಗೊಂಡಿದೆ. ಮುಂದಿನ ಆಯ್ಕೆ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಎಂಬುದು ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಕೇಳಿದರೆ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಾಗುವುದು ಎಂದು ಹೇಳುತ್ತಾರೆ. ಆದರೆ, ಎರಡ್ಮೂರು ವರ್ಷ ಕಳೆದರೂ ನೇಮಕಾತಿಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆಯುತ್ತಿಲ್ಲ.
ರಾಜ್ಯ ಸರ್ಕಾರ ಈಗಿರುವ ಕೆಪಿಎಸ್ಸಿ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಹೊಸ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರನ್ನು ನಿಯೋಜಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.