For the best experience, open
https://m.samyuktakarnataka.in
on your mobile browser.

ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಗೊಂದಲ-ಅದಕ್ಷತೆಗೆ ದಿಕ್ಸೂಚಿ

02:00 AM Aug 29, 2024 IST | Samyukta Karnataka
ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಗೊಂದಲ ಅದಕ್ಷತೆಗೆ ದಿಕ್ಸೂಚಿ

ಕರ್ನಾಟಕ ಲೋಕಸೇವಾ ಆಯೋಗ ೩೮೪ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು ಹಲವು ಅವಾಂತರಗಳಿಗೆ ಕಾರಣವಾಗಿದೆ. ಇಂಗ್ಲೀಷ್‌ನಲ್ಲಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯನ್ನು ಕಂಪ್ಯೂಟಿರ್ ಸಾಫ್ಟ್ವೇರ್ ಬಳಸಿ ಅನುವಾದ ಮಾಡಿರುವುದು ಎದ್ದು ಕಾಣುತ್ತದೆ. ಇದರಲ್ಲಿ ಕನ್ನಡದ ಕೊಲೆಯಾಗಿದೆಯೇ ಹೊರತು ಕನ್ನಡದ ಕಂಪು ಕಂಡು ಬಂದಿಲ್ಲ. ಸರ್ಕಾರಿ ನೌಕರರು ಕನ್ನಡವನ್ನೇ ಬಳಸಬೇಕು ಎಂದು ನಿಯಮ ಹೇಳುತ್ತದೆ. ಆದರೆ ಕೆಪಿಎಸ್‌ಸಿ ಪ್ರಶ್ನೆಪತ್ರಿಕೆಯ ಕನ್ನಡವನ್ನು ನೋಡಿದರೆ ಈ ಕನ್ನಡವೇ ಬೇಡ ಎನ್ನುವಂತೆ ಇದೆ. ಇದಲ್ಲದೆ ಬೆಳಗಾವಿಯಲ್ಲಿ ಓಎಂಆರ್ ಶೀಟ್ ಅದಲು ಬದಲಾಗಿದೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಎಂದು ಪ್ರತಿಭಟಿಸಿದ ಮೇಲೆ ಜಿಲ್ಲಾಧಿಕಾರಿಯೇ ಬಂದು ಗೊಂದಲವನ್ನು ಬಗೆಹರಿಸಬೇಕಾಯಿತು. ಅಂದರೆ ಕೆಪಿಎಸ್‌ಸಿ ಅವಾಂತರಗಳನ್ನು ಬಗೆಹರಿಸುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಕೆಪಿಎಸ್‌ಸಿ ಸ್ವಾಯತ್ತ ಸಂಸ್ಥೆಯಾದರೂ ಇದಕ್ಕೆ ಉತ್ತರದಾಯಿತ್ವ ಯಾರದು ಎಂಬುದು ಸ್ಪಷ್ಟವಾಗಿಲ್ಲ.
ಕೆಪಿಎಸ್‌ಸಿ ಕಳೆದ ೧೦ ವರ್ಷಗಳಿಂದ ಯಾವುದೇ ಪರೀಕ್ಷೆ ನಡೆಸಿಲ್ಲ. ಈಗ ಪ್ರಶ್ನೆಪತ್ರಿಕೆಗಳಲ್ಲಿ ಲೋಪದೋಷ ಒಂದೊಂದು ಜಿಲ್ಲೆಯಲ್ಲಿ ಭಿನ್ನವಾಗಿದೆ. ಅಂದರೆ ಪ್ರಶ್ನೆಪತ್ರಿಕೆ ಇಡೀ ರಾಜ್ಯಕ್ಕೆ ಒಂದು ಇರುವುದಿಲ್ಲವೆ ಎಂಬ ಅನುಮಾನ ಬರುತ್ತದೆ. ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್‌ಸಿ ಪ್ರಶ್ನಾತೀತವಾಗಿರಬೇಕು. ಸೀಸರ್ ದೊರೆಯ ಹೆಂಡತಿ ಸಂಶಯಕ್ಕೆ ಒಳಗಾಗಬಾರದು ಎಂಬ ಗಾದೆಯನ್ನು ಉಲ್ಲೇಖಿಸಿ ಕೆಪಿಎಸ್‌ಸಿ ಯಾವುದೇ ರೀತಿಯಲ್ಲಿ ಸಂಶಯಕ್ಕೆ ಒಳಗಾಗಬಾರದು ಎಂದಿದ್ದರು. ಈಗ ಅದಕ್ಕೆ ತದ್ವಿರುದ್ಧವಾಗಿ ಆಯೋಗದ ಪ್ರತಿಯೊಂದು ಹೆಜ್ಜೆಯೂ ಸಂಶಯಕ್ಕೆ ಕಾರಣವಾಗುತ್ತಿದೆ. ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ಪ್ರವೇಶ ಅರ್ಜಿ ಕರೆಯುವುದರಿಂದ ಸಂಶಯ ಹುತ್ತ ಬೆಳೆಯುತ್ತ ಹೋಗುತ್ತಿದೆ. ಅರ್ಜಿಗಳನ್ನು ಕರೆಯುವುದು, ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಅದು ಸೋರಿಕೆ ಆಗದಂತೆ ನೋಡಿಕೊಳ್ಳುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಸರಿ ಉತ್ತರಗಳನ್ನು ಪ್ರಕಟಿಸುವುದು, ಲಿಖಿತ ಉತ್ತರ ಬರೆದ ಅಭ್ಯರ್ಥಿಗಳ ಅಂಕಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಎಲ್ಲ ಹಂತದಲ್ಲೂ ಆಯೋಗದ ಕ್ರಮಗಳು ಸಂಶಯಕ್ಕೆ ಕಾರಣವಾಗಿ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಹತ್ತುವುದು ಸಾಮಾನ್ಯ ಸಂಗತಿಯಾಗಿದೆ.
ಲೋಕಸೇವಾ ಆಯೋಗ ೧೯೫೦ ರಲ್ಲಿ ಸಂವಿಧಾನಬದ್ಧವಾಗಿ ರಚನೆಗೊಂಡಿರುವ ಸ್ವಾಯತ್ತ ಸಂಸ್ಥೆ. ಇದಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡುವುದಷ್ಟೇ ಸರ್ಕಾರದ ಕೆಲಸ. ರಾಜ್ಯಪಾಲರು ಪ್ರತಿಜ್ಞಾ ವಿಧಿ ಬೋಧಿಸುತ್ತಾರೆ. ಉಳಿದ ಎಲ್ಲ ಕೆಲಸಗಳನ್ನು ಆಯೋಗ ಸ್ವತಂತ್ರವಾಗಿ ನಿರ್ವಹಿಸಲು ಸಂವಿಧಾನಬದ್ಧವಾಗಿ ಅಧಿಕಾರ ನೀಡಲಾಗಿದೆ. ಸ್ವಾತಂತ್ರ್ಯ ಎಂದರೆ ಮನಬಂದಂತೆ ವರ್ತಿಸುವುದು ಎಂದರ್ಥ. ಕೆಪಿಎಸ್‌ಸಿಗೂ ನಿಯಮಗಳಿವೆ. ಅದರಂತೆ ಎಲ್ಲವೂ ನಡೆಯಬೇಕು. ಆದರೆ ನಿಯಮ ಮೀರಿ ಸಂಸ್ಥೆ ವರ್ತಿಸುತ್ತಿದೆ ಎಂದು ಅಭ್ಯರ್ಥಿಗಳು ದೂರಿರುವುದೇ ಅಲ್ಲದೆ ನ್ಯಾಯಾಲಯಗಳು ಛೀಮಾರಿ ಹಾಕಿದೆ.
ಆದರೂ ಆಯೋಗ ಪಾಠ ಕಲಿತಂತೆ ಕಂಡು ಬರುತ್ತಿಲ್ಲ. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಯುಗದಲ್ಲಿ ಪ್ರಶ್ನೆಪತ್ರಿಕೆಯನ್ನು ಅಲ್ಲೇ ಸಿದ್ಧಪಡಿಸಿ ಪರೀಕ್ಷಾ ಹಾಲ್‌ನಲ್ಲಿರುವವರಿಗೆ ಮಾತ್ರ ಪ್ರಶ್ನೆಪತ್ರಿಕೆಯನ್ನು ಜೆರಾಕ್ಸ್ ಅಲ್ಲೇ ಕೊಡಬಹುದು. ಆಗ ಪ್ರಶ್ನೆಪತ್ರಿಕೆ ಸೋರಿಕೆ ಆಗುವುದಕ್ಕೆ ಅವಕಾಶವಿಲ್ಲ. ಈಗ ಹಲವು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಕಟ್ಟುನಿಟ್ಟಾಗಿ ನಡೆಯುವಾಗ ಕೆಪಿಎಸ್‌ಸಿಗೆ ಅದು ಸಾಧ್ಯವಾಗುವುದಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅದೇರೀತಿ ಉತ್ತರ ಪತ್ರಿಕೆಗಳನ್ನು ತಕ್ಷಣವೇ ಮೌಲ್ಯಮಾಪನ ಮಾಡಲು ಅವಕಾಶವಿದೆ. ಮೌಲ್ಯಮಾಪಕರಿಗೆ ಕೇವಲ ಉತ್ತರ ಬರೆದಿರುವ ಪುಟಗಳು ಹೋಗುವಂತೆ ಮಾಡಬಹುದು. ಆಗ ಮೌಲ್ಯಮಾಪಕರಿಗೆ ಉತ್ತರ ಬರೆದವರ ವಿವರ ತಿಳಿದಿರುವುದಿಲ್ಲ. ಅದಲ್ಲದೆ ತಿಳಿದುಕೊಳ್ಳುವುದಕ್ಕೆ ಅವಕಾಶವೂ ಇರುವುದಿಲ್ಲ. ಕೆಪಿಎಸ್‌ಸಿ ಮೂಲಕ ಸಮರ್ಥ ಹೊಸ ಪೀಳಿಗೆಯನ್ನು ಬಳಸಿಕೊಳ್ಳುವ ಗುರುತರ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂಬುದನ್ನು ಮರೆಯಬಾರದು. ಯುವಕ-ಯುವತಿಯರು ಬಹಳ ಶ್ರಮವಹಿಸಿ ಪರೀಕ್ಷೆಗೆ ಸಿದ್ಧರಾಗಿ ಬಂದಿರುತ್ತಾರೆ.
ಅವರ ಪ್ರತಿಭೆಯನ್ನು ಗುರುತಿಸುವುದಕ್ಕೆ ಇದು ಮಾನದಂಡವಾಗಿ ಪರಿಗಣಿಸುವಂತೆ ಆಗಬೇಕು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ಮತ್ತು ಅದರ ಮೌಲ್ಯಮಾಪನ ಅತ್ಯಂತ ಜತನದಿಂದ ನಡೆಸುವುದು ಮುಖ್ಯ. ಕರ್ನಾಟಕದ ಕೆಪಿಎಸ್‌ಸಿ ಬೇರೆ ರಾಜ್ಯಗಳಿಗೆ ಮಾದರಿಯಾಗಬೇಕು.
ಕೆಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವುದು ಎಂದರೆ ಯುವ ಜನಾಂಗದ ಬುದ್ಧಿಮತ್ತೆಗೆ ಅಗ್ನಿಪರೀಕ್ಷೆಯಾಗಲಿದೆ ಎನ್ನುವಂತೆ ಇರಬೇಕು. ಅದನ್ನು ಬಿಟ್ಟು ಯುವಕರಲ್ಲಿ ಗೊಂದಲ ಮೂಡಿಸಿ ವಾಮ ಮಾರ್ಗ ಹುಡುಕುವಂತೆ ಮಾಡಬಾರದು. ಎಲ್ಲರೂ ರಾಷ್ಟ್ರೀಯ ಮಟ್ಟದಲ್ಲಿ ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ಹಾಗೆ ಕೆಪಿಎಸ್‌ಸಿ ಪರೀಕ್ಷೆಗಳು ವಿಶ್ವಾಸಾರ್ಹತೆಗಳಿಸಬೇಕು. ನಮ್ಮಲ್ಲಿ ಬೌದ್ಧಿಕ ದಾರಿದ್ರ್ಯಕ್ಕೆ ಅವಕಾಶವಿಲ್ಲ. ಇಡೀ ದೇಶದ ಯುವ ಜನಾಂಗ ಕೆಪಿಎಸ್‌ಸಿ ಪರೀಕ್ಷೆ ಗುಣಮಟ್ಟವನ್ನು ಗುರುತಿಸುವ ರೀತಿಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಕೊಡುವ ಶಿಕ್ಷಣ ತಜ್ಞರು ಇದ್ದಾರೆ. ಅಲ್ಲದೆ ಅತ್ಯಂತ ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡುವವರು ಇದ್ದಾರೆ. ಕೆಪಿಎಸ್‌ಸಿಯಲ್ಲಿರುವವರು ಗಮನ ಹರಿಸಿದರೆ ಇಂದಿನ ಸಮಸ್ಯೆ ಬಗೆಹರಿಸುವುದು ಕಷ್ಟದ ಕೆಲಸವೇನಲ್ಲ.