ಕೆಪಿಎಸ್‌ಸಿ ಮರು ಪರೀಕ್ಷೆ ಆಗಲಿ ಮತ್ತೆ ಮತ್ತೆ ಬೇಡ
ಕೆಪಿಎಸ್‌ಸಿ ೩೮೪ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೂ ಈ ರೀತಿ ಮರು ಪರೀಕ್ಷೆ ನಡೆಸುವ ಪ್ರವೃತ್ತಿ ಸರಿಯಲ್ಲ. ಮೊದಲು ನಡೆಸಿದ ಪರೀಕ್ಷೆ ಹಲವು ಗೊಂದಲಗಳಿಗೆ ಕಾರಣವಾಯಿತು. ಅದರಲ್ಲೂ ಕನ್ನಡ ಪ್ರಶ್ನೆಪತ್ರಿಕೆಯಂತೂ ಇಡೀ ನಾಡು ತಲೆತಗ್ಗಿಸುವಂತಾಯಿತು. ಕೆಪಿಎಸ್‌ಸಿ ಎಂದರೆ ಭ್ರಷ್ಟಾಚಾರದ ಕೂಪ ಎಂಬುದು ಎಲ್ಲರಿಗೂ ಗೊತ್ತು. ಆದರೆ ಒಂದು ಸರಿಯಾದ ಪ್ರಶ್ನಪತ್ರಿಕೆ ಸಿದ್ಧಪಡಿಸುವ ಬೌದ್ಧಿಕ ಮಟ್ಟವೂ ಇಲ್ಲವೊ ಎಂಬುದು ನಾಚಿಕೆಗೇಡಿನ ಸಂಗತಿ. ಬೌದ್ಧಿಕ ದ್ರಾರಿದ್ಯವೂ ಇಲ್ಲಿ ಮನೆಮಾಡಿದೆ ಎಂಬುದು ನಿಜಕ್ಕೂ ದುರಂತದ ಸಂಗತಿ. ಕರ್ನಾಟಕದಲ್ಲಿ ಪ್ರೌಢಿಮೆಗೇನೂ ಕೊರತೆ ಬಂದಿಲ್ಲ. ದಕ್ಷರು, ಬುದ್ಧಿವಂತರು ಈ ಸಂಸ್ಥೆಯ ಅಕ್ರಮಗಳನ್ನು ನೋಡಿ ದೂರ ಉಳಿದಿದ್ದಾರೆ. ಹಣದಿಂದ ಎಲ್ಲವನ್ನೂ ಖರೀದಿ ಮಾಡಬಹುದು ಎಂಬುದು ಕೇವಲ ಭ್ರಮೆ. ಭಾರತೀಯ ವಿಜ್ಞಾನ ಮಂದಿರ(ಐಐಎಸ್‌ಸಿ) ಇಡೀ ದೇಶದಲ್ಲಿ ಅತ್ಯುತ್ತಮ ಸಂಸ್ಥೆ ಎಂಬ ಹೆಸರು ಗಳಿಸಿದೆ. ಅದೂ ಬೆಂಗಳೂರಿನಲ್ಲೇ ಇದೆ ಎಂಬುದನ್ನು ನೆನಪಿಡಬೇಕು. ಕರ್ನಾಟಕ ಈಗಲಾದರೂ ಎಚ್ಚರವಹಿಸಿ ದಕ್ಷರು, ಪ್ರತಿಭಾವಂತರನ್ನು ನೇಮಕ ಮಾಡಿದರೆ ಕೆಪಿಎಸ್‌ಸಿ ಪರೀಕ್ಷೆಗಳಿಗೆ ಘನತೆ ಗೌರವ ತರಬಹುದು. ಐಎಎಸ್‌ನಲ್ಲೂ ದಕ್ಷರು ಇದ್ದಾರೆ. ಬೆಂಗಳೂರು ಬಿಟ್ಟು ಹೋಗಲು ಇಚ್ಛೆ ಪಡದ ಐಎಎಸ್ ಅಧಿಕಾರಿಗಳಿಗೆ ಕೆಲಕಾಲ ವಿಶ್ರಾಂತಿ ಪಡೆಯಲು ಕೆಪಿಎಸ್‌ಸಿ ತಾಣವಾಗಬಾರದು.
ಈಗಲಾದರೂ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಯಬೇಕು. ಈಗಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಪ್ಪಿಸಬಹುದು. ಕೆಪಿಎಸ್‌ಸಿ ಪರೀಕ್ಷೆ ನಡೆಸುವ ಮೂಲ ಉದ್ದೇಶ ಪ್ರತಿಭಾವಂತರನ್ನು ಗುರುತಿಸಿ ಸರ್ಕಾರಿ ಸೇವೆಯ ಕಾರ್ಯವೈಖರಿಯನ್ನು ಉತ್ತಮ ಪಡಿಸುವುದು. ಅದಕ್ಕಾಗಿ ನಡೆಸುವ ಪರೀಕ್ಷೆಯಲ್ಲೇ ದೋಷವಿದ್ದರೆ ಉತ್ತಮರು ಸರ್ಕಾರಿ ಸೇವೆ ಬರುವುದಿಲ್ಲ. ಈಗ ಮತ್ತೆ ೨.೩ ಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆ ತೆಗೆದುಕೊಳ್ಳಬೇಕಾಗಿ ಬಂದಿದೆ. ಒಮ್ಮೆ ಪರೀಕ್ಷೆ ನಡೆಸಲು ೪ ಕೋಟಿ ರೂ. ವೆಚ್ಚ. ಪರೀಕ್ಷೆ ನಡೆಸುವುದರಲ್ಲಿ ಲೋಪವಿದ್ದಲ್ಲಿ ಈ ವೆಚ್ಚವನ್ನು ಯಾರು ಭರಿಸುತ್ತಾರೆ. ಇದನ್ನು ತೆರಿಗೆದಾರರ ಮೇಲೆ ಹಾಕುವುದು ಎಷ್ಟರಮಟ್ಟಿಗೆ ಸರಿ. ಕೆಪಿಎಸ್‌ಸಿ ಅವ್ಯವಸ್ಥೆಯನ್ನು ನೋಡಿ ಪ್ರತಿಭಾವಂತರು ದೂರ ಉಳಿಯುತ್ತಾರೆ. ಖಾಸಗಿ ಕಂಪನಿಗಳಿಗೆ ಇದರಿಂದ ಅನುಕೂಲವಾಗುತ್ತದೆ. ಇದೇ ಸರ್ಕಾರಿ ಇಲಾಖೆಗಳು ಅದೇ ಯುವಕರನ್ನು ಖಾಸಗಿ ಕಂಪನಿಗಳ ಮೂಲಕ ಹೊರಗುತ್ತಿಗೆ ರೂಪದಲ್ಲಿ ನೇಮಕ ಮಾಡಿಕೊಳ್ಳುತ್ತದೆ. ಇದೊಂದು ವಿಷಚಕ್ರ. ಈ ವಿಷಚಕ್ರಕ್ಕೆ ಕೊಡಲಿಪೆಟ್ಟು ಬೀಳಬೇಕು ಎಂದರೆ ಸರ್ಕಾರ ದಕ್ಷರು, ಪ್ರಾಮಾಣಿಕರನ್ನು ಕೆಪಿಎಸ್‌ಸಿಗೆ ನೇಮಿಸಿ ಸ್ವಾತಂತ್ರ ನೀಡಿ ಇಡೀ ಸಂಸ್ಥೆಯನ್ನು ಸ್ವಚ್ಛಗೊಳಿಸಲು ಅವಕಾಶ ನೀಡಬೇಕು. ಸಂಸ್ಥೆ ಭ್ರಷ್ಟಾಚಾರದಿಂದ ಕೊಳೆತು ನಾರಲು ರಾಜಕೀಯ ಹಸ್ತಕ್ಷೇಪ ಕಾರಣ ಎಂದು ಬಹಿರಂಗವಾಗಿ ಹೇಳುವ ಅಗತ್ಯವಿಲ್ಲ. ಅಧಿಕಾರಕ್ಕೆ ಬಂದವರೆಲ್ಲರೂ ಈ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡವರೇ ಹೊರತು ಇದರ ಪ್ರಗತಿಯ ಬಗ್ಗೆ ಯಾರೂ ಚಿಂತಿಸಿದವರಲ್ಲ. ಸರ್ಕಾರಿ ಸೇವೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆ ಕಾಣಬೇಕು ಎಂದರೆ ಕೆಪಿಎಸ್‌ಸಿ ಉತ್ತಮವಾಗಿರಬೇಕು. ಆಗ ದಕ್ಷರೂ, ಪ್ರಾಮಾಣಿಕರನ್ನು ಆಯ್ಕೆ ಮಾಡಲು ಸಾಧ್ಯ. ಈಗ ದುಡ್ಡಕೊಟ್ಟು ಕೆಪಿಎಸ್‌ಸಿ ಪಾಸಾದವರು ಕೆಲಸಕ್ಕೆ ಸೇರಿದ ಮೊದಲ ದಿನವೇ ಲಂಚ ಹೊಡೆಯಲು ಆರಂಭಿಸುತ್ತಾರೆ. ಮೊದಲ ದಿನವೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಉದಾಹರಣೆಗಳಿವೆ. ಇಂಥ ಪರಿಸ್ಥಿತಿ ತಲೆ ಎತ್ತಲು ಕೆಪಿಎಸ್‌ಸಿ ಸಂಸ್ಥೆಯ ಹೀನಾಯ ಸ್ಥಿತಿ ಕಾರಣ ಎಂದು ಹೇಳುವ ಅಗತ್ಯವಿಲ್ಲ.
ಸರ್ಕಾರಿ ಇಲಾಖೆಗಳ ದಿನನಿತ್ಯದ ವ್ಯವಹಾರದ ಮೇಲೆ ಲಕ್ಷಾಂತರ ಜನರ ಬದುಕು ಅವಲಂಬಿಸಿರುತ್ತದೆ. ಅಲ್ಲಿ ಲಂಚದ ಹಾವಳಿಗಿಂತ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಕೊಡಲಿ ಪೆಟ್ಟು ಬಿದ್ದರೆ ಅರಾಜಕತೆಗೆ ಕಾರಣವಾಗುತ್ತದೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಕಷ್ಟವಾದರೂ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದು ಅಗತ್ಯ. ಕೆಪಿಎಸ್‌ಸಿ ಪರೀಕ್ಷೆ ಇದಕ್ಕೆ ತಳಪಾಯ. ಇದು ಅಚ್ಚುಕಟ್ಟಾಗಿ ನಡೆದರೆ ಉತ್ತಮರನ್ನು ಸರ್ಕಾರಿ ಸೇವೆಗೆ ಬಳಸಿಕೊಳ್ಳಬಹುದು. ಈ ದೂರದೃಷ್ಟಿಯಿದ್ದಲ್ಲಿ ಕೆಪಿಎಸ್‌ಸಿ ಕೆಡದಂತೆ ನೋಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗುತ್ತದೆ. ಇದಕ್ಕಾಗಿ ಕೆಪಿಎಸ್‌ಸಿಗೆ ಸಂವಿಧಾನದತ್ತ ಅಧಿಕಾರ ನೀಡಿದ್ದೇವೆ. ಕೆಪಿಎಸ್‌ಸಿ ಅಧ್ಯಕ್ಷರಿಗೆ ಎಲ್ಲ ಅಧಿಕಾರವನ್ನು ನೀಡಿದ್ದೇವೆ. ಆದರೆ ಈ ಅಧಿಕಾರ ದುರುಪಯೋಗವಾದಲ್ಲಿ ಇದಕ್ಕೆ ಸೂಕ್ತ ಶಸ್ತ್ರಚಿಕಿತ್ಸೆ ನಡೆಸುವುದು ಸಂವಿಧಾನ ಬದ್ಧ ಕರ್ತವ್ಯವೂ ಹೌದು. ಅದನ್ನು ಸರ್ಕಾರವೇ ಮಾಡಬೇಕು. ಪರೀಕ್ಷೆ ನಡೆಸುವುದಷ್ಟೇ ಮುಖ್ಯವಲ್ಲ. ದಕ್ಷರು ಆಯ್ಕೆಗೊಳ್ಳುವಂತೆ ನೋಡಿಕೊಳ್ಳಬೇಕು. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಸರ್ಕಾರ ಕೂಡ ಕೆಪಿಎಸ್‌ಸಿಗೆ ಆಯ್ಕೆ ಮಾಡುವಾಗ ಎಚ್ಚರವಹಿಸುವುದು ಅಗತ್ಯ. ಹಣ ಮತ್ತು ಜಾತಿಯ ಪ್ರಭಾವ ಮೀರಿ ನೇಮಕಾತಿ ನಡೆದರೆ ಮಾತ್ರ ಬದಲಾವಣೆ ಬರಲು ಸಾಧ್ಯ.