ಕೆರೆಯಲ್ಲಿ ಈಜಲು ಹೋಗಿ ಮೂರು ಮಕ್ಕಳು ನೀರು ಪಾಲು
ಕೂಡ್ಲಿಗಿ: ಈಜಲು ಹೋದ ಮೂವರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಹೊಸಹಳ್ಳಿ ಹೋಬಳಿಯ ಜುಮ್ಮೋಬನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಮತಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹೊರವಲಯದ ಹರಿಯುತ್ತಿರುವ ಚಿನ್ನಹಗರಿ ಹಳ್ಳದಲ್ಲಿ ಈಜಾಡಲು ತೆರಳಿದ ಗ್ರಾಮದ ನಿವಾಸಿ ಜಯಣ್ಣ ಇವರ ಇಬ್ಬರು ಮಕ್ಕಳು ೫ನೇ ತರಗತಿ ಓದುತ್ತಿದ್ದ ವಿನಯ್ ಕುಮಾರ್(೧೧), ೮ನೇ ತರಗತಿಯ ಗುರು(೧೪) ಮತ್ತು ಸೋಮಣ್ಣ ಇವರ ಪುತ್ರನಾದ ಸಾಗರ(೧೪) ೮ನೇ ತರಗತಿ ಓದುತ್ತಿದ್ದು. ಕಳೆದ ದಿನಗಳಲ್ಲಿ ಸುರಿದ ಬಾರಿ ಮಳೆಗೆ ಚಿನ್ನಹಗರಿ ನದಿಯು ಹರಿಯುತ್ತಿದ್ದು, ಮಂಗಳವಾರ ಬೆಳಿಗ್ಗೆ:೧೧ಕ್ಕೆ ಸ್ನೇಹಿತರ ಜೊತೆಯಲ್ಲಿ ಈಜಲು ಹೋಗಿದ್ದಾರೆ. ಮಧ್ಯಾಹ್ನ ೩-೩೦ರ ಸಮಯದಲ್ಲಿ ಮೂವರ ವಿದ್ಯಾರ್ಥಿ ಶವಗಳು ನೀರಿನಲ್ಲಿ ತೇಲಾಡುತ್ತಿದ್ದು. ಇದನ್ನು ಕಂಡು ಕುರಿಗಾಯಿಗಳು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಶವಗಳನ್ನು ಹಗರಿಯ ದಡಕ್ಕೆ ಹಾಕಿದ್ದಾರೆ. ಕುಮತಿ ಗ್ರಾಮದ ಈ ಹೃದಯವಿದ್ರಾವಕ ಘಟನೆಯಿಂದಾಗಿ, ಊರಿಗೆ ಊರೇ ದುಃಖತಪ್ತವಾಗಿದೆ. ಶಾಲೆಗಳು ರಜೆ ಇರುವುದರಿಂದ, ಚಿನ್ನಹಗರಿ ನದಿಯು ವೇಗವಾಗಿ ಹರಿಯುವುದರಿಂದಲೂ, ಅಪಾಯ ಅರಿಯದ ಹುಡುಗರು ಈಜಾಡಲು ಹೋದಾಗ ಮಕ್ಕಳಿಗೆ ಅವಾಂತರವಾಗಿದೆ. ಇದರಿಂದ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳಾದ ಜಯಣ್ಣ, ಲಕ್ಷ್ಮೀ ಮತ್ತು ಸೋಮಣ್ಣ, ನಾಗಮ್ಮ ಇವರು ಅಕ್ರಂದನ ಮುಗಿಲು ಮುಟ್ಟುವಂತಿತ್ತು. ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ದುಃಖ ಭರಿಸುವ ಶಕ್ತಿ ಕುಟುಂಬಗಳಿಗೆ ಭಗವಂತ ನೀಡಲೆಂದು ಕಂಬನಿ ಮಿಡಿದಿದ್ದಾರೆ. ಕಾನಹೊಸಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.