ಕೆಲವು ದಿನ ಕಾಡುವ ಕೆಂಪು ಕಣ್ಣು
ಮಾನವನಿಗೆ ತನ್ನ ದೇಹದ ಎಲ್ಲಾ ಅಂಗಗಳು ಮುಖ್ಯ ಹೌದು. ಅದರಲ್ಲಿ ಕಣ್ಣು ಸಹ ಒಂದು. ದೇಹದ ಸೂಕ್ಷ್ಮ ಅಂಗಾಂಗಗಳಲ್ಲಿ ಕಣ್ಣು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅಂತಹ ಕಣ್ಣಿಗೆ ತೊಂದರೆ ನೀಡುವಂತಹ ಸೋಂಕೆಂದರೆ "ಕಾಂಜಂಕ್ಟಿವಿಟಿಸ್".
ಇತ್ತೀಚೆಗೆ ಮಳೆ ಬೀಳುವುದು ಹೆಚ್ಚಾಗಿರುವುದರಿಂದ ಕಾಂಜಂಕ್ಟಿವಿಟಿಸ್ ಅಥವಾ ಕಣ್ಣು ನೋವು ಇನ್ನೂ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮದ್ರಾಸ್ ಐ ಸಮಸ್ಯೆ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಇದನ್ನು ಪಿಂಕ್ ಐ ಎಂತಲೂ ಕರೆಯುತ್ತಾರೆ. ನಿರಂತರ ಮಳೆ ಪ್ರವಾಹ ಹಾಗೂ ನದಿಗಳ ಪ್ರವಾಹದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಮದ್ರಾಸ್ ಐ ಎಂಬ ಸೋಂಕು ಸಮಸ್ಯೆಗಳು ಹೆಚ್ಚುತ್ತಿವೆ. ಇತ್ತೀಚಿಗೆ ಕಾಂಜಂಕ್ಟಿವಿಟಿಸ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಇನ್ನೂ ಮಳೆಗಾಲದ ಮಳೆ ಕಡಿಮೆಯಾಗದೆ ಇರುವುದರಿಂದ ವಾತಾವರಣ ತಂಪಾಗಿದೆ. ಈ ಕಾಲದಲ್ಲಿ ವೈರಾಣುಗಳು ಹೆಚ್ಚು ಸಕ್ರಿಯವಾಗಿರುತ್ತವೆ, ಗಾಳಿಯಲ್ಲಿ ವೇಗವಾಗಿ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಇದು ಕಣ್ಣಿಗೆ ವಿಪರೀತ ನೋವು ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ಮುಖ್ಯವಾಗಿ ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸೋಂಕು ಬೇಗ ಹರಡುತ್ತದೆ. ಒಬ್ಬರಿಗೆ ಸೋಂಕು ಕಾಣಿಸಿಕೊಂಡರೆ ಅವರಿಂದ ಮನೆಯವರೆಲ್ಲರೂ ಸೋಂಕಿಗೆ ಒಳಗಾಗುತ್ತಾರೆ, ಆದ್ದರಿಂದ ಸೋಂಕನ್ನು ಇತರರಿಗೆ ಹರಡುವುದನ್ನು ತಪ್ಪಿಸಲು ಈ ಸಮಸ್ಯೆ ಇದ್ದವರು ಶಾಲೆ, ಕೆಲಸ ಅಥವಾ ಇತರ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು. ಮನೆಯಿಂದ ಹೊರಗಡೆ ಎಲ್ಲೇ ಹೋದರೂ ಕನ್ನಡಕ ಧರಿಸಿ ಹೋಗಬೇಕು, ಸೂರ್ಯನ ಬಿಸಿಲಿಗೆ ಹಾಗೂ ಪ್ರಖರ ಬೆಳಕಿಗೆ ಕಣ್ಣನ್ನು ನೇರವಾಗಿ ಒಡ್ಡಬಾರದು. ಸಾಮಾನ್ಯವಾಗಿ ಸೋಂಕು ೫ ರಿಂದ ೭ ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ ೧೦ ದಿನಗಳವರೆಗೂ ಕಾಡುತ್ತದೆ. ಮೊದಲಿಗೆ ಒಂದು ಕಣ್ಣಿಗೆ ಬಂದು ನಂತರ ಇನ್ನೊಂದು ಕಣ್ಣಿಗೂ ಹರಡಬಹುದು. ಆದ್ದರಿಂದ ನಿರ್ಲಕ್ಷ್ಯ ಮಾಡದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
ಮುನ್ನೆಚ್ಚರಿಕೆ ಕ್ರಮಗಳು: ಕಣ್ಣು ನೋವು ಬಾರದಂತೆ ತಡೆಯಲು ಎಲ್ಲಕ್ಕಿಂತ ಮೊದಲು ವೈಯಕ್ತಿಕ ಶುಚಿತ್ವವನ್ನು ಕಾಪಾಡಬೇಕು. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆಯಿರಿ. ಹೊರಗಡೆ ಹೋಗಿ ಮನೆಗೆ ಬಂದ ಕೂಡಲೇ ಶುದ್ಧ ತಣ್ಣೀರನ್ನು ಎರಡು ನಿಮಿಷ ಎರಡು ಕಣ್ಣುಗಳಿಗೆ ಚಿಮುಕಿಸಿ ಶುದ್ಧ ಮಾಡಿ ಕೊಳ್ಳುವುದು. ಆದಷ್ಟು ಕಣ್ಣುಗಳನ್ನು ಮುಟ್ಟುವುದನ್ನು, ಗಟ್ಟಿಯಾಗಿ ಒರೆಸುವುದನ್ನು ತಪ್ಪಿಸಬೇಕು. ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕ ಕಡಿಮೆ ಮಾಡಬೇಕು.
ಹಾಗಾಗಿ ಕೈಗಳಿಂದ ಕಣ್ಣುಗಳ ಸ್ಪರ್ಶ ತಡೆಯಲು ಕನ್ನಡಕ ಬಳಸುವುದು ಅತಿ ಮುಖ್ಯ. ಮೊಬೈಲ್, ಟಿವಿ ವೀಕ್ಷಣೆಯನ್ನು ಆದಷ್ಟು ಕಡಿಮೆ ಮಾಡಬೇಕು. ತುಳಸಿ ಎಲೆಗಳನ್ನು ಬಿಸಿನೀರಲ್ಲಿ ನೆನೆಸಿ ಆ ನೀರಿನಲ್ಲಿ ಪದೇಪದೇ ಕಣ್ಣುಗಳನ್ನು ತೊಳೆದರೆ ಸೋಂಕು ಬೇಗನೇ ಕಡಿಮೆ ಆಗುತ್ತದೆ. ಕಣ್ಣುಗಳು ಕೆಂಪಾಗಿ ಉರಿಯುತ್ತಿದ್ದರೆ ಅಲೋವೆರಾ ಕಾಂಡದ ಜೆಲ್ ಅನ್ನು ರೆಪ್ಪೆಗಳ ಮೇಲೆ ಲೇಪಿಸಿ ೧೫ ನಿಮಿಷ ನಂತರ ನೀರಿನಿಂದ ತೊಳೆದರೆ ಪ್ರಯೋಜನವಿದೆ. ದನಿಯಾ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಸೇವಿಸಿ. ಎರಡು ಚಮಚ ಅರಿಶಿಣವನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ ಹತ್ತಿಯನ್ನು ಆ ನೀರಿನಲ್ಲಿ ಅದ್ದಿ ಕಣ್ಣುಗಳ ಮೇಲೆ ಇಟ್ಟರೆ ಕಣ್ಣಿನ ಸೋಂಕು ಕಡಿಮೆ ಆಗುತ್ತದೆ. ಬೆಟ್ಟದ ನೆಲ್ಲಿಕಾಯಿ ಜ್ಯೂಸ್‌ಗೆ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ತಣ್ಣೀರಿನಲ್ಲಿ ನೆನೆಸಿದ ಸೌತೇಕಾಯಿ ತುಂಡನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಪಾಲಕ್ ಮತ್ತು ಕ್ಯಾರೆಟ್ ಹಾಕಿ ಮಾಡಿದ ಜ್ಯೂಸನ್ನು ಪ್ರತಿದಿನ ಸೇವಿಸಿ.