For the best experience, open
https://m.samyuktakarnataka.in
on your mobile browser.

ಕೆ. ಶಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಮೋಹನ ಹೆಗಡೆ ಆಯ್ಕೆ

07:29 PM Aug 02, 2024 IST | Samyukta Karnataka
ಕೆ  ಶಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಮೋಹನ ಹೆಗಡೆ ಆಯ್ಕೆ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ೨೦೨೪ನೇ ಸಾಲಿನ ಕೆ.ಶಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ ಹೆಗಡೆ ಭಾಜನರಾಗಿದ್ದಾರೆ.
ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಮೋಹನ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ ೪ ದಶಕಗಳಿಂದ ಸಕ್ರಿಯ ಪತ್ರಕರ್ತರಾಗಿರುವ ಹೆಗಡೆ ಅವರು ಪ್ರಸ್ತುತ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಮನೆಯವರಾದ ಅವರು ಕಾರವಾರದಲ್ಲಿ ಜಿಲ್ಲಾ ವರದಿಗಾರರಾಗಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ್ದಾರೆ. ೧೯೮೫ ರಿಂದ ೨೦೧೧ರ ವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕ, ವರದಿಗಾರ, ಮುಖ್ಯ ವರದಿಗಾರ, ಸುದ್ದಿ ಸಂಪಾದಕ ಹಾಗೂ ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
೨೦೧೧ ರಿಂದ ೨೦೨೦ರ ವರೆಗೆ ವಿಜಯವಾಣಿ ದಿನಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕರಾಗಿದ್ದರು. ೨೦೨೧ ರಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ `ಜನಾಶಯ' ಅಂಕಣ ಅಪಾರ ಜನಪ್ರಿಯತೆ ಗಳಿಸುವುದರ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಲವು ಸಮಸ್ಯೆಗಳನ್ನು ಅಧ್ಯಯನ ನಡೆಸಿ ನಾಡಿಗೆ ತಿಳಿಸಿ ಪರಿಹಾರ ಕೊಡಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ.
ನಾಲ್ಕು ದಶಕಗಳ ಪತ್ರಿಕಾ ವೃತ್ತಿಯಲ್ಲಿ ಮೋಹನ ಹೆಗಡೆ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಧೀಮಂತ ಪತ್ರಕರ್ತ ಪ್ರಶಸ್ತಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ, ಸ್ಪಂದನಾ ಸಾಮಾಜಿಕ ಸಂಸ್ಥೆಯಿAದ ಸ್ಪಂದನಾ ಪುರಸ್ಕಾರ, ಸಂಗೊಳ್ಳಿ ರಾಯಣ್ಣ ಮಾಧ್ಯಮ ಪ್ರಶಸ್ತಿ, ಡಾ. ಜಿ.ಆರ್. ಪಾಂಡೇಶ್ವರ ಪ್ರಶಸ್ತಿ, ಕೆಯುಡಬ್ಲ್ಯುಜೆ ಇಂದ ಕೊಡಮಾಡುವ ಎಸ್.ವಿ. ಜಯಶೀಲರಾವ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
ಡಿಸೆಂಬರ್‌ನಲ್ಲಿ ಆಯೋಜಿಸಲಾಗಿರುವ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮೋಹನ ಹೆಗಡೆ ಅವರಿಗೆ ಕೆ. ಶಾಮರಾವ್ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags :