`ಕೇಂದ್ರಕ್ಕೆ ಬಿಸಿ ಮುಟ್ಟಿಸಿದ್ದೇವೆ'
ನವದೆಹಲಿ: ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಪ್ರತಿಭಟನೆ ನಡೆದಿದೆ. ರಾಜ್ಯದ ಜನರಿಗೆ ನಿರಂತರವಾಗಿ ಆಗಿದ್ದ ಅನ್ಯಾಯದ ಧ್ವನಿಯನ್ನು ಕೇಂದ್ರಕ್ಕೆ ತಲುಪಿಸುವ ನಮ್ಮ ಉದ್ದೇಶ ಸಫಲವಾಗಿದೆ. ರಾಷ್ಟ್ರದ ರಾಜಧಾನಿಯಲ್ಲಿಯೇ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಇದು ಒಂದು ಪಕ್ಷದ ವಿರುದ್ಧ ನಡೆಯುತ್ತಿರುವ ಹೋರಾಟ ಅಲ್ಲ. ಬದಲಿಗೆ ಅನ್ಯಾಯ ಎಸಗುತ್ತಿರುವ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟ ಎಂದು ಮೇಲ್ಮನೆ ಸದಸ್ಯರಾದ ಯು.ಬಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ 'ನನ್ನ ತೆರಿಗೆ ನನ್ನ ಹಕ್ಕು' ಅಭಿಯಾನದಡಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಮಾತನಾಡಿ ಬಿಜೆಪಿಯವರು ಇಷ್ಟು ದಿನ ಏನು ಕಡ್ಲೆಕಾಯಿ ತಿನ್ನುತ್ತಿದ್ದರೇ? ಹೈಕಮಾಂಡ್ ಮೆಚ್ಚಿಸಲು ಇಂದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಪ್ರತಿಭಟಿಸುವ ಯಾವುದೇ ನೈತಿಕ ಹಕ್ಕಿಲ್ಲ. ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೫೦೦೦ ಕೋಟಿಗೂ ಅಧಿಕ ಅನುದಾನ ಘೋಷಿಸಿದ್ದರೂ ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಇದು ರಾಜ್ಯಕ್ಕೆ ಮಾಡಿರುವ ಅನ್ಯಾಯವಲ್ಲವೇ? ಎಂದು ವೆಂಕಟೇಶ್ ಕಟುವಾಗಿ ಪ್ರಶ್ನಿಸಿದರು.
ಕೇಂದ್ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತದೆಯೋ ಇಲ್ಲವೋ ಅನ್ನುವುದು ಮುಖ್ಯವಲ್ಲ. ಆದರೆ ರಾಜ್ಯದ ಜನರಿಗೆ ಆಗಿರುವ ನೋವು ಹಾಗೂ ಅನ್ಯಾಯದ ಧ್ವನಿಯನ್ನು ದೆಹಲಿಯಲ್ಲಿಯೇ ದೊಡ್ಡಮಟ್ಟದಲ್ಲಿ ಎತ್ತಿದ್ದೇವೆ. ಒಕ್ಕೂಟದ ವ್ಯವಸ್ಥೆಯಲ್ಲಿ ನಮಗಾಗಿರುವ ಆರ್ಥಿಕ ಅನ್ಯಾಯಕ್ಕೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡೋಣ ಎಂದರು.