For the best experience, open
https://m.samyuktakarnataka.in
on your mobile browser.

ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್​ ಮೊರೆ ಹೋದ ರಾಜ್ಯ ಸರ್ಕಾರ

04:33 PM Mar 23, 2024 IST | Samyukta Karnataka
ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್​ ಮೊರೆ ಹೋದ ರಾಜ್ಯ ಸರ್ಕಾರ

ರಾಜ್ಯಕ್ಕೆ NDRF ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಬಾಗಿಲು ಬಡಿದಿದ್ದೇವೆ

ಬೆಂಗಳೂರು: ರಾಜ್ಯಕ್ಕೆ NDRF ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಬಾಗಿಲು ಬಡಿದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರದಿಂದ ನಮ್ಮ ಪಾಲಿನ ಪರಿಹಾರ ಬರುತ್ತದೆ ಎಂದು ಕಾದು ಕಾದು ಸಾಕಾಗಿ ಸುಪ್ರೀಂಕೋರ್ಟ್ ಮೊರೆ ಹೋದೆವು. ಸಂವಿಧಾನದ ಪರಿಚ್ಛೇದ 32 ರ ಅಡಿಯಲ್ಲಿ ನಾವು ನಮ್ಮ ಕಾನೂನುಬದ್ದ ಹಕ್ಕನ್ನು ಚಲಾಯಿಸಿದ್ದೇವೆ ಎಂದು ವಿವರಿಸಿದರು.
ಬರದ ಸಂದರ್ಭದಲ್ಲಿ , ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತಾಗೆ ಸ್ಪಂದಿಸದ ಬೇಕು ಎನ್ನುವ ಉದ್ದೇಶದಿಂದಲೇ ವಿಪತ್ತು ನಿರ್ವಹಣಾ ಕಾನೂನು ಮಾಡಲಾಗಿದೆ ಆದರೆ ಇದುವರೆಗೂ ಕೇಂದ್ರ ಕಾನೂನು ಬದ್ದವಾಗಿ ನಮಗೆ ಬರಬೇಕಾದ ಹಣದಲ್ಲಿ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ ಎಂದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ರಾಜ್ಯದಲ್ಲಿ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಗಾಲ ಅಂತ ಘೋಷಿಸಿದ್ದೇವೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಬರೆದೆವು. ಇದುವರೆಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನಲ್ಲಿ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದರು.
ನಿಯಮವಾಳಿ ಪ್ರಕಾರ ರಾಜ್ಯ ಸರ್ಕಾರ ಮನವಿ ಮಾಡಿದ ವಾರದಲ್ಲಿ ಕೇಂದ್ರದ ತಂಡ ಬರಬೇಕು. ಆದರೆ, ಅಕ್ಟೋಬರ್ ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು‌ ಪರಿಶೀಲನೆ ನಡೆಸಿ ಕೇಂದ್ರಕ್ಕೆ IMCT ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ ಎಂದು NDRF ನಿಯಮಾವಳಿಗಳನ್ನು ಮಾಧ್ಯಮಗಳ ಎದುರಿಗೆ ಓದಿದರು.
ಕೇಂದ್ರ ತಂಡ ವರದಿ ಕೊಟ್ಟರೂ ನಮಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದಾಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರೂ ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ನಾನೇ ಡಿಸೆಂಬರ್ 20 ರಂದು ನಾನು ಮತ್ತು ಕೃಷ್ಣಬೈರೇಗೌಡ ಅವರು ಮತ್ತೆ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ ನಮಗೆ ಪರಿಹಾರ ಕೊಡಲಿಲ್ಲ. ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿಯವರನ್ನು‌ ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ. ಕೇಂದ್ರದಿಂದ ನಯಾಪೈಸೆ ಬಿಡುಗಡೆ ಆಗದಿದ್ದಾಗ 450 ಕೋಟಿ, ಕುಡಿಯುವ ನೀರಿಗೆ 870 ಕೋಟಿಬಿಡುಗಡೆ ಮಾಡಿದೆವು. ಡಿಸಿಗಳ ಬಳಿ ಇನ್ನೂ 800 ಕೋಟಿ ರೂಪಾಯಿ ಹಣ ಬರನಿರ್ವಹಣೆ ಉದ್ದೇಶಕ್ಕಾಗಿಯೇ ಮೀಸಲಿಡಲಾಗಿದೆ. ಬರ ನಿರ್ವಹಣೆ ಕುರಿತಾಗಿ ಅಧಿಕಾರಿಗಳಿಗೆ ಸ್ಪಷ್ಡ ಸೂಚನೆಗಳನ್ನು ನೀಡಲಾಗಿದೆ ಎಂದರು.