ಕೇಂದ್ರದ ಸೌರಶಕ್ತಿಗೆ ರಾಜ್ಯದ ಗ್ರಹಣ
ಕೇಂದ್ರ ಸರ್ಕಾರ ಸೌರ ವಿದ್ಯುತ್ ಬಳಸುವವರಿಗೆ ಹಲವು ರಿಯಾಯಿತಿ ಮತ್ತು ಸಬ್ಸಿಡಿಗಳನ್ನು ಘೋಷಿಸಿದರೂ ರಾಜ್ಯ ಸರ್ಕಾರ ಅವುಗಳನ್ನು ಜಾರಿಗೆ ತರುತ್ತಿಲ್ಲ. ಪ್ರತಿ ತಿಂಗಳೂ ೩೦೦ ಯೂನಿಟ್ ಮೇಲ್ಪಟ್ಟು ಸೌರ ವಿದ್ಯುತ್ ಉತ್ಪಾದಿಸಿ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಪ್ರತಿ ಕಿವ್ಯಾಟ್‌ಗೆ ೧೮ ಸಾವಿರ ರೂ. ನಿಂದ ೮೦ ಸಾವಿರ ರೂವರೆಗೆ ಸಬ್ಸಿಡಿ ಘೋಷಿಸಿದೆ. ಇವುಗಳನ್ನು ಜಾರಿಗೆ ತರಲು ಆಯಾ ರಾಜ್ಯದಲ್ಲಿರುವ ವಿದ್ಯುತ್ ವಿತರಣ ಕಂಪನಿಗಳನ್ನು ನೋಡಲ್ ಕೇಂದ್ರವಾಗಿ ಕೇಂದ್ರ ಇಂಧನ ಇಲಾಖೆ ನೇಮಿಸಿದೆ. ರಾಜ್ಯದಲ್ಲೂ ಈ ಯೋಜನೆಯನ್ನು ಬಹಳ ವಿಜೃಂಭಣೆಯಿಂದ ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಈ ಉತ್ಸಾಹ ಕಂಡು ಬರುತ್ತಿಲ್ಲ. ಗ್ರಾಹಕರಿಗೆ ಈ ಯೋಜನೆಯ ಮಾಹಿತಿ ನೀಡಿ ಅವರನ್ನು ತಮ್ಮ ಮನೆ ಮೇಲೆ ಸೌರಫಲಕ ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತಿಲ್ಲ. ಇದರಿಂದ ಗ್ರಾಹಕರಿಗೆ ಸರಿಯಾದ ಮಾಹಿತಿ ಲಭಿಸುತ್ತಿಲ್ಲ. ಪಾವಗಡದಲ್ಲಿರುವ ಸೌರವಿದ್ಯುತ್ ಕೇಂದ್ರ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಲಭಿಸುತ್ತಿದೆ. ಅದನ್ನು ಖರೀದಿಸುವುದರಲ್ಲಿ ವಿತರಣ ಕಂಪನಿಗಳಿಗೆ ಇರುವ ಉತ್ಸಾಹ ಗ್ರಾಹಕರೇ ತಮ್ಮ ಮನೆ ಮೇಲೆ ಸೌರ ಫಲಕ ಅಳವಡಿಸಿಕೊಳ್ಳುವಂತೆ ಮಾಡುವುದರಲ್ಲಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಮೊದಲಿನಿಂದಲೂ ವಿದ್ಯುತ್ ವಿತರಣ ಕಂಪನಿಗಳು ಸೌರ ವಿದ್ಯುತ್ ಉತ್ಪಾದನೆ ಅಧಿಕಗೊಳ್ಳುವುದನ್ನು ಬಯಸುವುದಿಲ್ಲ. ಗ್ರಾಹಕರು ನೇರವಾಗಿ ತಮ್ಮ ಮನೆ ಮೇಲೆ ಸೌರ ಫಲಕ ಅಳವಡಿಸಿ ವಿದ್ಯುತ್ ಬಳಸಿದರೆ ಕಂಪನಿಗೆ ಬರುವ ಆದಾಯ ಇಳಿಮುಖಗೊಳ್ಳುತ್ತದೆ. ಈಗ ಸರ್ಕಾರ ೨೦೦ ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಅದರಿಂದ ಅವರಿಗೆ ಬಿಲ್ ಕೊಟ್ಟರೂ ಹಣ ಬರುವುದಿಲ್ಲ. ಸರ್ಕಾರ ೩ ಅಥವಾ ೬ ತಿಂಗಳಿಗೊಮ್ಮೆ ಪಾವತಿ ಮಾಡುತ್ತದೆ. ಈಗ ಪ್ರತಿ ತಿಂಗಳೂ ೨೦೦ಕ್ಕಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಮಾಸಿಕ ಬಿಲ್ ನೀಡಲಾಗುತ್ತಿದೆ. ಒಂದು ವೇಳೆ ಈ ಗ್ರಾಹಕರು ಕೇಂದ್ರದ ಸಬ್ಸಿಡಿ ಪಡೆದು ೩೦೦ಕ್ಕಿಂತ ಹೆಚ್ಚು ಸೋಲಾರ್‌ನಿಂದ ಪಡೆದುಕೊಂಡಲ್ಲಿ ವಿದ್ಯುತ್ ಕಂಪನಿಗಳಿಗೆ ಅವರಿಂದಲೂ ಹಣ ಬರುವುದಿಲ್ಲ. ಹಣ ಬರಲಿಲ್ಲ ಎಂದರೆ ವಿದ್ಯುತ್ ಕಂಪನಿ ನೌಕರರಿಗೆ ಸಂಬಳ ಇರುವುದಿಲ್ಲ. ಇದು ಅಸಲಿ ಕಾರಣ.
ಕೇಂದ್ರ ಸರ್ಕಾರ ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶುದ್ಧ ವಿದ್ಯುತ್ ಬಳಸುತ್ತಿರುವ ದೇಶ ಎಂಬ ಪ್ರಶಂಸೆ ಪಡೆಯಲು ಉತ್ಸಾಹ ತೋರುತ್ತಿದ್ದರೆ ರಾಜ್ಯದ ವಿದ್ಯುತ್ ವಿತರಣ ಕಂಪನಿಗಳು ಅದಕ್ಕೆ ತಣ್ಣೀರು ಹಾಕುವ ಕೆಲಸದಲ್ಲಿ ನಿರತವಾಗಿವೆ. ಇದು ಸೋಲಾರ್ ಒಂದೇ ಅಲ್ಲ. ಕೇಂದ್ರದ ಹಲವು ಯೋಜನೆಗಳಿಗೂ ಅನ್ವಯವಾಗುತ್ತಿದೆ. ಏಪ್ರಿಲ್ ೧ ರಿಂದ ಬೆಳಗ್ಗೆ ಸೋಲಾರ್ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ೧೦ ಕೆವಿಗಿಂತ ಹೆಚ್ಚು ವಿದ್ಯುತ್ ಬಳಸುವ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದರದಲ್ಲಿ ಶೇ.೧೦-೨೦ ರಷ್ಟು ರಿಯಾಯಿತಿ ನೀಡಬೇಕು. ರಾತ್ರಿ ವೇಳೆ ಅದೇ ವಿದ್ಯುತ್‌ಗೆ ಹೆಚ್ಚಿನ ದರ ವಿಧಿಸಬೇಕು ಎಂದು ಕೇಂದ್ರ ಆದೇಶ ಹೊರಡಿಸಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಮೌನವಹಿಸಿದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೂ ಈ ರಿಯಾಯಿತಿ ಬಗ್ಗೆ ಮಾಹಿತಿ ಇಲ್ಲ. ಕೆಇಆರ್‌ಸಿ ಹೊಸ ದರ ನೀಡಿದ ಮೇಲೆ ಗೃಹ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ೫.೯೦ ರೂ. ಏಕರೂಪ ದರ ನಿಗದಿಪಡಿಸಿದೆ. ಇದರಿಂದ ಪ್ರಿಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಸುಲಭ. ಆಗ ಗ್ರಾಹಕರು ಮೊಬೈಲ್ ಕರೆನ್ಸಿ ಖರೀದಿ ಮಾಡಿದರೆ ವಿದ್ಯುತ್ ಖರೀದಿ ಮಾಡಬಹುದು. ಪ್ರತಿ ತಿಂಗಳೂ ವಿದ್ಯುತ್ ಬಿಲ್ ಕಟ್ಟುವ ಸಮಸ್ಯೆ ಬರುವುದಿಲ್ಲ. ಪ್ರಿಪೇಯ್ಡ್ ಮೀಟರ್ ಬಳಕೆ ಬಂದಲ್ಲಿ ವಿದ್ಯುತ್ ವಿತರಣ ಕಂಪನಿಗಳಿಗೆ ಕೆಲಸವೇ ಇರುವುದಿಲ್ಲ. ಈ ಮೀಟರ್ ಅಳವಡಿಸಿಕೊಂಡವರಿಗೆ ಮಾಸಿಕ ಬಿಲ್ ಕೊಡುವ ಸಮಸ್ಯೆ ಬರುವುದಿಲ್ಲ. ಅಲ್ಲದೆ ಅವರು ಮಾಸಿಕ ಬಿಲ್ ಪಾವತಿ ಮಾಡಿಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ತೆಗೆಯುವ ಕೆಲಸವೂ ಇರುವುದಿಲ್ಲ. ಹೀಗಾಗಿ ವಿದ್ಯುತ್ ಕಂಪನಿಗಳ ಕೈನಿಂದ ಗ್ರಾಹಕ ದೂರ ಉಳಿಯುತ್ತಾನೆ. ಅದರಿಂದ ಕಂಪನಿಗಳು ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಳ್ಳಲು ಗ್ರಾಹಕರು ಮುಂದೆ ಬಂದರೂ ಅವರಿಗೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿಲ್ಲ. ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಪ್ರಿಪೇಯ್ಡ್ ಮೀಟರ್ ಯಾರು ಬೇಕಾದರೂ ಪಡೆಯಬಹುದು ಎಂದು ತಿಳಿಸಿದೆ. ಅಲ್ಲದೆ ಕಂಪನಿಗಳು ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಆದರೂ ಅಧಿಕಾರಿಗಳು ಜನರಿಗೆ ಇದರ ಬಗ್ಗೆ ಯಾವುದೇ ಬಗೆಯ ಮಾಹಿತಿ ನೀಡುತ್ತಿಲ್ಲ.
ಪ್ರಿಪೇಯ್ಡ್ ಮೀಟರ್‌ನಿಂದ ಹಲವು ಅನುಕೂಲಗಳಿವೆ. ಅದರಲ್ಲಿ ಒಂದೇ ದರ ನಮೂದಾಗಿರುತ್ತದೆ. ಗ್ರಾಹಕರು ೫೦೦, ೧೦೦೦ರೂ ವಿದ್ಯುತ್ ಕರೆನ್ಸಿ ಹಾಕಿಸಿಕೊಂಡು ಬಳಸಬಹುದು. ಮೀಟರ್‌ನಲ್ಲಿ ಕೊನೆಯ ೫೦ ರೂ. ಇರುವಾಗ ಸಂದೇಶ ಕೂಡ ಬರುತ್ತದೆ. ಅಲ್ಲದೆ ನಿಮ್ಮ ಮೊಬೈಲ್‌ನಲ್ಲೇ ಎಲ್ಲ ವಿವರ ಪಡೆಯಬಹುದು. ಮೀಟರ್‌ಗೆ ಪಾಸ್‌ವರ್ಡ್ ಕೂಡ ಇರುತ್ತದೆ. ಹೊರಗಿನಿಂದ ಮನೆ ಮೀಟರ್ ಲಾಕ್ ಮಾಡಬಹುದು. ಇದರಿಂದ ಕಂಪನಿಗಳಿಗೆ ಗ್ರಾಹಕರ ಸಂಪರ್ಕ ಕಡಿದು ಹೋಗುತ್ತದೆ. ಗ್ರಾಹಕ ವಿದ್ಯುತ್ ಕಂಪನಿಗಳಿಗೆ ಹೋಗುವ ಸಂದರ್ಭವೇ ಬರುವುದಿಲ್ಲ. ಇದರ ಬಗ್ಗೆ ಕೆಇಆರ್‌ಸಿ ಹಲವು ಬಾರಿ ಆದೇಶಗಳನ್ನು ಹೊರಡಿಸಿದ್ದರೂ ಯಾವುದೂ ಜಾರಿಗೆ ಬರುತ್ತಿಲ್ಲ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಈ ಯೋಜನೆ ನನೆಗುದಿಗೆ ಬೀಳುತ್ತಿದೆ. ಇದೇರೀತಿ ಈಗ ಹೊಸದಾಗಿ ಕೇಂದ್ರ ಸರ್ಕಾರ ಪ್ರೊಸ್ಯುಮರ್ ಎಂಬ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಯಾವುದೇ ಗ್ರಾಹಕ ತನ್ನ ಮನೆ ಮೇಲೆ ಸೌರ ಫಲಕ ಅಳವಡಿಸಿ ಅದನ್ನೇ ಬೇರೆ ಗ್ರಾಹಕನಿಗೆ ಮಾರಾಟ ಮಾಡಬಹುದು. ಇದಕ್ಕೆ ಬೇಕಾದ ನಿಯಮಗಳನ್ನು ಕೆಇಆರ್‌ಸಿ ಅಥವಾ ರಾಜ್ಯ ಸರ್ಕಾರ ರಚಿಸಿಲ್ಲ. ಹೊಸ ನಿಯಮಗಳನ್ನು ರಚಿಸದೆ ಗ್ರಾಹಕರು ಇದರ ಲಾಭ ಪಡೆಯಲು ಬರುವುದಿಲ್ಲ.
ಅದೇರೀತಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಏಪ್ರಿಲ್ ೧ ರಿಂದ ಟಿಒಡಿ ಮೀಟರ್‌ನಲ್ಲಿ ಬೆಳಗ್ಗೆ ಶೇಕಡ೧೦-೨೦ ರಿಯಾಯಿತಿ ನೀಡಬೇಕೆಂದು ನಿಯಮ ಹೇಳುತ್ತದೆ. ಇದರ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೂ ಇದರ ಬಗ್ಗೆ ಅರಿವಿಲ್ಲ. ಹೀಗಾಗಿ ವಿದ್ಯುತ್ ರಂಗದಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಅದು ಜಾರಿಗೆ ಬರುತ್ತಿಲ್ಲ.