ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪ ಹುರುಳಿಲ್ಲದ್ದು
ಹುಬ್ಬಳ್ಳಿ : ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಕಾರಣಕ್ಕಾಗಿ ಕೈಗಾರಿಕೋದ್ಯಮಿಗಳು ಉದ್ಯಮ ಸ್ಥಾಪನೆಗೆ ಬರುತ್ತಿಲ್ಲ. ಇರುವ ಉದ್ಯಮಿಗಳೂ ಬೇರೆ ಕಡೆ ಸ್ಥಳಾಂತರ ಆಗುತ್ತಿದ್ದಾರೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪ ಹುರುಳಿಲ್ಲದ್ದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸರಿಯಾಗಿಯೇ ಇದೆ. ಕೈ ಮೀರಿ, ಹತೋಟಿ ಮೀರಿದ ಸಂದರ್ಭಗಳಿಲ್ಲ. ಸ್ವಾಭಾವಿಕ ಘಟನೆಗಳನ್ನು ಬಿಟ್ಟರೆ ಕೇಂದ್ರ ಹಣಕಾಸು ಸಚಿವರು ಹೇಳುವಂತಹ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ ಎಂದು ಹೇಳಿದರು.
ರಾಜ್ಯದಿಂದ ಯಾವ ಕೈಗಾರಿಕೋದ್ಯಮಿಗಳೂ ಹೊರಗಡೆ ಹೋಗುತ್ತಿಲ್ಲ. ಹೊಸದಾಗಿ ನಮ್ಮ ರಾಜ್ಯಕ್ಕೆ ಬರುತ್ತಿರುವ ಕೈಗಾರಿಕೋದ್ಯಮಿಗಳೂ ಸಹ ಕಾನೂನಿ ಸುವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸಚಿವರು ನೀಡಿರುವ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾದುದು ಎಂದು ಡಾ.ಪರಮೇಶ್ವರ ಸ್ಪಷ್ಟಪಡಿಸಿದರು.
ಕೊಲೆ, ಕಳ್ಳತನ, ಡ್ರಗ್ಸ್ ದಂಧೆ ಇರುವುದು ನಿಜ. ಇಂತಹ ಕೃತ್ಯಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಆಡಳುತ ಅವಧಿ ಅಂದರೆ 2020-21, 21-22 ರ ಅವಧಿಯಲ್ಲಿನ ಘಟನಾವಳಿಗಳಿಗೆ ಹೋಲಿಸಿದರೆ ಬಹಳ ಕಡಿಮೆ ಎಂದು ಹೇಳಿದರು.
ಗಣೇಶ ಚತುರ್ಥಿ, ರಂಜಾನ್ ಹಬ್ಬ ಸೇರಿದಂತೆ ಎಲ್ಲ ಹಬ್ಬ, ಆಚರಣೆ ಸಂದರ್ಭದಲ್ಲೂ ಯಾವುದೇ ಅಹಿತಕರ ಘಟನದ ಆಗದಂತೆ ನಿಗಾ ವಹಿಸಿಕೊಂಡು ಬರಲಾಗಿದೆ. ಅದ್ಯಾವ ಆಧಾರದ ಮೇಲೆ ಕೇಂದ್ರ ಸಚಿವರು ಈ ರೀತಿ ಹೇಳಿಕೆ ನೀಡಿದರೊ ಗೊತ್ತಿಲ್ಲ. ಒಬ್ಬ ಕೇಂದ್ರ ಸಚಿವೆಯಾಗಿ ಈ ರೀತಿ ಬೇಜವ್ದಾರಿ ಹೇಳಿಕೆ ನೀಡಬಾರದು ಎಂದು ಹೇಳಲು ಬಯಸುತ್ತೇನೆ ಎಂದರು.
ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಲಾಗುತ್ತಿದೆ. 'ಕರ್ನಾಟಕ ಅಗೆನಸ್ಟ್ ಡ್ರಗ್ಸ್ ' ಎಂಬ ಅಭಿಯಾನದಡಿ ಸಾವಿರಾರು ಕೋಟಿ ರೂಗಳ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳನ್ನು ಪತ್ತೆ ಮಾಡಿ ಸುಟ್ಟು ಹಾಕಲಾಗಿದೆ. ಡ್ರಗ್ಸ್ ಪೆಡ್ಲರ್ ಗಳನ್ನು ಮಟ್ಟ ಹಾಕಲು ಎಲ್ಲ ಕ್ರಮ ಜರುಗಿಸಲಾಗಿದೆ. ಸೈಬರ್ ಕ್ರೈಂ ಅಪರಾ಼ ಕೃತ್ಯ ತಡೆಯಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ 43 ಸೈಬರ್ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ.ಪ್ರಕರಣ ದಾಖಲು ಸಂಖ್ಯೆ ಜಾಸ್ತಿಯಾಗಿದೆ. ಸೈಬರ್ ವಂಚಕರ ಕೃತ್ಯ ತಡೆಗೆ ಶಕ್ತಿ ಮೀರಿ ಇಲಾಖೆ ಪ್ರಯತ್ನಿಸುತ್ತಿದೆ. ಸಾರ್ವಜನಿಕರಿಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಎಸ್ ಸಿ ಎಸ್ ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಆ ಸಮುದಾಯದವರಿಗೆ ವಿವಿಧ ಯೋಜನೆಗಳಡಿ ಬಳಕೆ ಮಾಡಿದೆ. ಅ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ ಎಂಬ ಬಿಜೆಪಿಯವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಡಾ ಹಗರಣ ಕುರಿತಂತೆ ಮುಖ್ಯಮಂತ್ರಿಗಳೆ ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ದಾಖಲೆ ಸಮೇತ ವಿವರ ನೀಡಿದ್ದಾರೆ. ಅಲ್ಲದೇ ನಿವೃತ್ತ ನ್ಯಾಯಾಧೀಶರಾದ ದೇಸಾಯಿ ಅವರ ಏಕ ಸದಸ್ಯ ಅಯೋಗ ರಚನೆ ಮಾಡಿದ್ದಾರೆ. ಇಷ್ಟೆಲ್ಲ ಆದರೂ ಬಿಜೆಪಿಯವರು ಆರೋಪ ನಿಲ್ಲಿಸಿಲ್ಲ ಎಂದು ತಿಳಿಸಿದರು.
ವಾಲ್ಮೀಕಿ ನಿಗಮ ಹಗರಣ ವಿಷಯದಲ್ಲಿ ಸರ್ಕಾರವೇ ಮೊದಲು ಎಸ್ ಐಟಿ ರಚನೆ ಮಾಡಿ ತನಿಖೆಗೆ ಅದೇಶಿಸಿದ್ದು. ನಂತರ ಸಿಬಿಐ, ಇಡಿಯವರು ತನಿಖೆಗೆ ಮುಂದಾದವು. ಆರೋಪ ಬಂದ ತಕ್ಷಣವೇ ನಾಗೇಂದ್ರ ಅವರಿಂದ ಸಚಿವ ಸ್ಥಾನದ ರಾಜೀನಾಮೆ ಪಡೆಯಲಾಗಿದೆ. ನಿಷ್ಪಕ್ಷಪಾತವಾಗಿ ತನಿಖೆಗೆ ಆದೇಶಿಸಲಾಗಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಯತ್ನ ಸರ್ಕಾರ ಮಾಡುತ್ತಿಲ್ಲ ಎಂದು ಗೃಹ ಸಚಿವರು ಹೇಳಿದರು.