ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಕ್ಷಣ ರಾಜೀನಾಮೆ ನೀಡಲಿ
ಗದಗ: ಬಿಜೆಪಿ ಸರಕಾರದಲ್ಲಿ ನಡೆದಿರುವ ಕೋವಿಡ್ ಖರೀದಿ ಹಗರಣದ ಬಗ್ಗೆ ತನಿಖೆ ನಡೆಸಲು ರಚಿಸಲಾಗಿರುವ ನ್ಯಾಯಮೂರ್ತಿ ಜಾನ್ ಮೈಕೇಲ್ ಕುನ್ಹಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾನೂನು ಸಚಿವ ಡಾ.ಎಚ್.ಕೆ. ಪಾಟೀಲ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಎತ್ತಿ ಹಿಡಿಯುವ ನ್ಯಾಯಾಂಗದ ಬಗ್ಗೆ ಲಘುವಾಗಿ ಮಾತನಾಡಬಾರದು. ನ್ಯಾಯಾಂಗದ ಬಗ್ಗೆ ಗೌರವದಿಂದ ಇರಬೇಕಾಗಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನ್ಯಾ.ಮೂ.ಕುನ್ಹಾ ಬಗ್ಗೆ ಏಜೆಂಟ್ ಎಂದು ಹೀಯಾಳಿಸಿದ್ದು ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಚಾರವಾಗಿದೆಯೆಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನ್ಯಾ.ಮೂ.ಕುನ್ಹಾ ಕ್ಷಮೆಯಾಚಿಸಬೇಕು. ಕಳೆದ ಕೆಲ ದಿನಗಳಿಂದ ಉನ್ನತ ಹಾಗೂ ಎತ್ತರದ ಸ್ಥಾನಗಳಲ್ಲಿರುವ ವ್ಯಕ್ತಿಗಳು ತಮ್ಮ ಸ್ಥಾನದ ಗೌರವ ಮರೆತು ಮಾತನಾಡುತ್ತಿದ್ದಾರೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯಮೂರ್ತಿಗಳು, ತನಿಖಾ ಸಂಸ್ಥೆಯ ನೇತೃತ್ವ ಹೊಂದಿರುವ ಆಯೋಗಗಳಿಗೂ ಮನಬಂದಂತೆ ಮಾತನಾಡುವದು ಅಪರಾಧವಾಗಿದೆಯೆಂದು ಹೇಳಿದರು.
ರಾಜ್ಯದ ತನಿಖಾ ಆಯೋಗಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡಲೇ ಪ್ರಲ್ಹಾದ್ ಜೋಶಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ರಾಷ್ಟ್ರಪತಿಗಳು ಕಾನೂನು ಕ್ರಮ ಜರುಗಿಸುವ ಮುನ್ನವೇ ಪ್ರಲ್ಹಾದ್ ಜೋಶಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.