ಕೇಜ್ರಿವಾಲ್ ರಾಜಧರ್ಮದ ಮಾರ್ಗದಲ್ಲಿ ತಪ್ಪು ಹೆಜ್ಜೆ
ಜವಾಬ್ದಾರಿಯುತ ರಾಜಕೀಯ ಮುಖಂಡರಾಗಿ ಕೇಜ್ರಿವಾಲ್ ಅವರು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು ಎಂಬುದು ಜನರ ಅಪೇಕ್ಷೆ. ಸಮನ್ಸ್ ನೀಡಿಕೆಯಲ್ಲಿ ದೋಷಗಳಿದ್ದರೆ ಅದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸುವ ಮಾರ್ಗವನ್ನು ಅನುಸರಿಸಿದ್ದರೆ ಯಾರ ತಕರಾರೂ ಇರುತ್ತಿರಲಿಲ್ಲ
ರಾಜ್ಯಾಂಗಬದ್ಧವಾಗಿ ಸ್ಥಾಪನೆಯಾಗಿರುವ ಸಂಸ್ಥೆಗಳ ನಿರ್ಣಾಯಕ ಜಾಗದಲ್ಲಿ ಪ್ರಮಾಣವಚನದ ಮೂಲಕ ಅಧಿಕಾರ ವಹಿಸಿಕೊಳ್ಳುವ ಮುಖ್ಯಮಂತ್ರಿಗಳು ಹಾಗೂ ಮತ್ತಿತರರು ಜನತೆಗೆ ಕೊಡುವ ವಚನವೆಂದರೆ ಕಾನೂನಿನ ಆಡಳಿತವನ್ನು ಪರಿಪಾಲಿಸುವ ಆಶ್ವಾಸನೆ. ಯಾವುದೇ ಕಾರಣಕ್ಕೆ ಕಾನೂನಿಗೆ ಅಪಚಾರವಾಗುವಂತಹ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಘೋಷಿಸಿ ಕನಿಷ್ಠ ಪಕ್ಷ ಸಾರ್ವಜನಿಕ ಬದುಕಿನಲ್ಲಿ ಹಾಗೆಯೇ ನಡೆದುಕೊಳ್ಳುವುದು ಭಾರತದ ರಾಜಕಾರಣಿಗಳ ಪರಿಪಾಠ. ಇದು ಒಂದು ರೀತಿಯ ರಾಜಧರ್ಮ. ಆದರೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಮೂರು ಬಾರಿ ಸಮನ್ಸ್ ಬಂದರೂ, ವಿಚಾರಣೆಗೆ ಹಾಜರಾಗದೇ ಕಾರಣಗಳನ್ನು ಕೊಡುತ್ತಿರುವುದು ಕಾನೂನು ಆಡಳಿತದ ಸ್ಪಷ್ಟ ಉಲ್ಲಂಘನೆ. ರಾಜ್ಯಾಂಗದ ೩೫೬ನೇಯ ವಿಧಿಯ ಅನ್ವಯ ಕಾನೂನಿನ ಆಡಳಿತವನ್ನು ಮೀರಿ ನಡೆಯುವ ಮುಖ್ಯಮಂತ್ರಿಗಳನ್ನಾಗಲೀ ಅಥವಾ ಅವರ ನೇತೃತ್ವದ ಸರ್ಕಾರವನ್ನಾಗಲೀ ಉಚ್ಚಾಟಿಸಲು ರಾಜ್ಯಪಾಲರಿಗೆ ಮುಕ್ತ ಅವಕಾಶವುಂಟು. ಇಷ್ಟೆಲ್ಲಾ ಕಾನೂನಿನ ಅರಿವಿದ್ದರೂ, ಕೇಜ್ರಿವಾಲ್ ಅವರು ಯಾವ ಆಧಾರದ ಮೇರೆಗೆ ವಿಚಾರಣೆಯಿಂದ ದೂರ ಉಳಿಯುತ್ತಿದ್ದಾರೆ ಎಂಬುದು ನಿಜಕ್ಕೂ ನಿಗೂಢ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳನ್ನು ದೋಷಿಸುವುದು ಸರಿಯಲ್ಲ. ಯಾಕೆಂದರೆ ವ್ಯವಸ್ಥೆಯ ಭಾಗವಾಗಿರುವ ಇಡಿ ಅಧಿಕಾರಿಗಳು ಮುಖ್ಯಮಂತ್ರಿಗಳಿಂದ ಹಿಡಿದು ಹಲವಾರು ಮಂದಿಯನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುವ ಬೆಳವಣಿಗೆ ನಮ್ಮ ಕಣ್ಣೆದುರಿಗೆ ಇದೆ. ಜವಾಬ್ದಾರಿಯುತ ರಾಜಕೀಯ ಮುಖಂಡರಾಗಿ ಕೇಜ್ರಿವಾಲ್ ಅವರು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು ಎಂಬುದು ಜನರ ಅಪೇಕ್ಷೆ. ಹಾಗೊಮ್ಮೆ ಸಮನ್ಸ್ ನೀಡಿಕೆಯಲ್ಲಿ ದೋಷಗಳಿದ್ದರೆ ಅದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸುವ ಮಾರ್ಗವನ್ನು ಅನುಸರಿಸಿದ್ದರೆ ಯಾರ ತಕರಾರೂ ಇರುತ್ತಿರಲಿಲ್ಲ. ಸಾಮಾನ್ಯ ಪ್ರಜೆಯೊಬ್ಬನಿಗೆ ಇಡಿ ಸಮನ್ಸ್ ಬಂದಾಗ ವಿಚಾರಣೆಗೆ ಗೈರು ಹಾಜರಾಗುವ ದುಸ್ಸಾಹಸಕ್ಕೆ ಕೈ ಹಾಕಿದ್ದರೆ ಏನು ಆಗುತ್ತಿತ್ತು ಎಂಬುದನ್ನು ಕೇಜ್ರಿವಾಲ್ ಅವರು ಆಲೋಚಿಸಬೇಕು. ಶಾಸನಗಳ ಜಾರಿಯಲ್ಲಿ ಮೇಲು ಕೀಳು ಎಂಬುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ. ಆದರೆ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಕೇಜ್ರಿವಾಲ್ ಅವರು ದೇಶಕ್ಕೆ ಯಾವ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂಬ ಬಗ್ಗೆ ಆಲೋಚಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೇನೋ?
ರಾಜ್ಯಾಂಗಬದ್ಧ ಸಂಸ್ಥೆಯಾದ ಇಡಿಗೆ ಕೇಜ್ರಿವಾಲ್ ಗೈರು ಹಾಜರಿಯಿಂದಾಗಿ ಕೊಂಚ ಮಟ್ಟಿಗೆ ಇರಸುಮುರಸು ಆಗಿರಲಿಕ್ಕೂ ಸಾಕು. ಇಂತಹ ಇಳಿಜಾರಿನ ಪರಿಸ್ಥಿತಿಯಲ್ಲಿ ಅಕ್ರಮವನ್ನು ಬಯಲಿಗೆಳೆಯುವ ಜವಾಬ್ದಾರಿ ಹೊತ್ತಿರುವ ಇಡಿ ಸಂಸ್ಥೆ ಕಾನೂನಿನ ಮೂಲಕ ಕೇಜ್ರಿವಾಲ್ ಅವರಿಗೆ ಪರಿಸ್ಥಿತಿಯ ಗಾಂಭೀರ್ಯ ಅರ್ಥವಾಗುವಂತೆ ಮಾಡಬೇಕು. ತಟಸ್ಥ ಧೋರಣೆಯನ್ನು ಇಡಿ ಸಂಸ್ಥೆ ಅನುಸರಿಸಿದರೆ ಮುಂಬರುವ ದಿನಗಳಲ್ಲಿ ಅದು ಸಾರ್ವಜನಿಕರಿಗೆ ಹಾಗೂ ಬೇರೆ ಮುಖಂಡರಿಗೆ ಕೊಡುವ ಸಮನ್ಸ್‌ಗಳಿಗೆ ಚಿಕ್ಕಕಾಸಿನ ಬೆಲೆಯೂ ಇರುವುದಿಲ್ಲ. ವಿಚಾರಣೆ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರಿಗೂ ಕಾರಣ ಇದ್ದೇ ಇರುತ್ತದೆ-ಹಾಗೊಮ್ಮೆ ಇಲ್ಲದವರು ಕಾರಣಗಳನ್ನು ಸೃಷ್ಟಿಸಿಕೊಳ್ಳಬಲ್ಲರು ಕೂಡಾ. ಕಾನೂನಿನ ಆಡಳಿತ ಸುಸೂತ್ರವಾಗಿ ನಡೆಯಬೇಕಾದರೆ ಎಲ್ಲರೂ ಸರಿಸಮಾನ ಎಂಬ ರೀತಿಯಲ್ಲಿ ಇಡಿ ಸಂಸ್ಥೆ ನಡೆದುಕೊಳ್ಳಬೇಕು. ಹಾಗೆಯೇ ಕೇಜ್ರಿವಾಲ್ ಕೂಡಾ ರಾಜ್ಯಾಂಗಬದ್ಧವಾಗಿ ಸಮನ್ಸ್ಗೆ ಗೌರವ ಕೊಡುವ ಮಾರ್ಗವನ್ನು ಅನುಸರಿಸಬೇಕು. ವಾದದ ಮಟ್ಟಿಗೆ ಒಪ್ಪಿಕೊಳ್ಳುವುದಾದರೇ ಕೇಜ್ರಿವಾಲ್ ಪ್ರಸ್ತಾಪಿಸಿರುವ ಆಕ್ಷೇಪಗಳಲ್ಲಿ ಸತ್ವ ಇರಬಹುದು. ಆದರೆ ಅದರ ಸತ್ವ ಮತ್ತು ಸತ್ಯ ಗೊತ್ತಾಗುವುದು ವಿಚಾರಣೆಗೆ ಹಾಜರಾದ ನಂತರ ಇಲ್ಲವೇ ಇದಕ್ಕೆ ಸಮಾನಾಂತರವಾಗಿ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಂಡ ನಂತರ. ಅದು ಬಿಟ್ಟು ರಾಜಕೀಯ ಧಾಟಿಯಲ್ಲಿ ದೋಷಾರೋಪ ಮಾಡಿ ತೆಪ್ಪಗಿರುವ ಧೋರಣೆ ನಿಜವಾದ ಅರ್ಥದಲ್ಲಿ ಪರಂಪರಾಗತವಾಗಿ ಪಾಲಿಸಿಕೊಂಡು ಬಂದಿರುವ ರಾಜಧರ್ಮದ ಸ್ಪಷ್ಟ ಉಲ್ಲಂಘನೆ.
ಭಾರತದ ರಾಜಕಾರಣದಲ್ಲಿ ಪ್ರಮುಖ ಮುಖಂಡರಾಗಿರುವ ಕೇಜ್ರಿವಾಲ್ ಕೈಗೊಳ್ಳುವ ನಿರ್ಧಾರ ಉಳಿದ ರಾಜಕೀಯ ಮುಖಂಡರಿಗೆ ಒಂದು ರೀತಿಯಲ್ಲಿ ಮಾದರಿಯೂ ಆಗುತ್ತದೆ ಇನ್ನೊಂದು ರೀತಿಯಲ್ಲಿ ಎಚ್ಚರಿಕೆಯ ಗಂಟೆಯೂ ಆಗುತ್ತದೆ. ರಾಜಧರ್ಮದ ವಿಚಾರದಲ್ಲಿ ಸರಸವಾಡುವುದು ಜವಾಬ್ದಾರಿಯುತ ರಾಜಕಾರಣಿಗೆ ಒಪ್ಪುವ ಮಾತಲ್ಲ. ಜನರೂ ಕೂಡಾ ಇಂತಹ ನಡೆಯನ್ನು ಮೆಚ್ಚಲಾರರು. ಗೋಡೆಯ ಮೇಲಿನ ಬರಹದಂತಿರುವ ಈ ಸ್ಥಿತಿ ಮುಂದಿನ ಕ್ರಮಕ್ಕೆ ಮಾರ್ಗಸೂಚಿಯಾಗಬೇಕು.