For the best experience, open
https://m.samyuktakarnataka.in
on your mobile browser.

ಕೇರಳದಲ್ಲಿ ನಮ್ಮ ವಿರುದ್ಧ ಶತ್ರು ಭೈರವಿ ಯಾಗ

04:27 AM May 31, 2024 IST | Samyukta Karnataka
ಕೇರಳದಲ್ಲಿ ನಮ್ಮ ವಿರುದ್ಧ ಶತ್ರು ಭೈರವಿ ಯಾಗ

ಬೆಂಗಳೂರು: ನನ್ನ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಕೇರಳದಲ್ಲಿ ಅಘೋರಿ ಮತ್ತು ತಂತ್ರಿಗಳನ್ನು ಬಳಸಿಕೊಂಡು "ಶತ್ರು ಭೈರವಿ ಯಾಗ" ಪ್ರಯೋಗ ನಡೆಸಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಹೊರಹಾಕಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಶಕ್ತಿ, ದೇವರು ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಅವರು, ಕೇರಳದಲ್ಲಿ ನನ್ನ, ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ "ರಾಜಕಂಟಕ" "ಮಾರಣ ಮೋಹನ ಸ್ತಂಭನ" ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ ಎಂದ ಡಿಕೆಶಿ, ಪ್ರಾಯೋಜಕರು ಯಾರೆಂದು ನೀವೇ ಊಹಿಸಿಕೊಳ್ಳಿ ಎಂದರು.
೪೨ ಕುರಿ, ಮೇಕೆಗಳ ಬಲಿ
ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಇದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದ್ದು, ಕೆಂಪು ಬಣ್ಣದ ೨೧ ಮೇಕೆ, ೩ ಎಮ್ಮೆ, ಕಪ್ಪು ಬಣ್ಣದ ೨೧ ಕುರಿ ಹಾಗೂ ೫ ಹಂದಿಗಳನ್ನು ಬಲಿ ಕೊಡುವ ಮೂಲಕ ಈ ಮಾಂತ್ರಿಕಯಾಗ ನಡೆಸಲಾಗುತ್ತಿದೆ. ಅವರ ಪ್ರಯತ್ನ ಮಾಡಲಿ, ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆ. ನಮ್ಮ ಮೇಲೆ ಯಾರು ಏನೇ ಪ್ರಯೋಗ ಮಾಡಿದರೂ ನಾವು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ ಎಂದು ತಿಳಿಸಿದರು.
ಸಕ್ರಿಯತೆ ಸಹಿಸದ ಶಕ್ತಿಗಳು
ಈ ಪ್ರಯೋಗ ಬಿಜೆಪಿ ಅಥವಾ ಜೆಡಿಎಸ್‌ನವರು ಮಾಡಿಸುತ್ತಿದ್ದಾರಾ? ಎಂದು ಪ್ರಶ್ನಗೆ ಯಾರು ಮಾಡಿಸುತ್ತಿದ್ದಾರೆಂಬುದು ನಮಗೆ ಗೊತ್ತಿದೆ ಎಂದರು. "ನಿಂಬೆ ಹಣ್ಣು ನಿಪುಣರು" ರೂವಾರಿಗಳೇ ಎಂಬ ಮಾಧ್ಯಮಗಳು ಕೇಳಿದಾಗ, ನನ್ನ ಬಾಯಿಂದ ಹೇಳಿಸುವುದರ ಬದಲು ನೀವೇ ಈ ಬಗ್ಗೆ ತನಿಖಾ ವರದಿ ಮಾಡಿ ಎಂದರು. ನಿಮ್ಮನ್ನೇ ಏಕೆ ಗುರಿ ಮಾಡಲಾಗುತ್ತಿದೆ, ರಕ್ಷಣೆಗಾಗಿ ನಿಮ್ಮಿಂದಲೂ ಇಂತಹ ಪ್ರಯತ್ನ ನಡೆಯಲಿದೆಯಾ? ಎಂದು ಕೇಳಿದ್ದಕ್ಕೆ ನಾನು ಅಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲ. ರಾಜಕೀಯವಾಗಿ ಸದಾ ಚಟುವಟಿಕೆಯಿಂದ ಇರುವವರು ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗುತ್ತಾರೆ. ನನ್ನ ರಕ್ಷಣೆಗೆ ದೇವರನ್ನು ಮಾತ್ರ ನಂಬಿದ್ದೇನೆ ಎಂದರು.