For the best experience, open
https://m.samyuktakarnataka.in
on your mobile browser.

ಕೇರಳ: ಮೃತರ ಸಂಖ್ಯೆ ೨೯೧ಕ್ಕೆ ಏರಿಕೆ

10:47 PM Aug 01, 2024 IST | Samyukta Karnataka
ಕೇರಳ  ಮೃತರ ಸಂಖ್ಯೆ ೨೯೧ಕ್ಕೆ ಏರಿಕೆ

ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯ ಚುರಲ್ಮಲಾ ಮತ್ತು ಮುಂಡಕೈನಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹಕ್ಕೆ ೨೯೧ ಜನ ಬಲಿಯಾಗಿದ್ದಾರೆ. ನಾಪತ್ತೆಯಾಗಿರುವವರ ೨೪೦ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಲಿಯಾರ್ ನದಿಯ ಇಕ್ಕೆಲಗಳಲ್ಲಿ ಉದ್ವಸ್ಥಗೊಂಡಿರುವ ಗ್ರಾಮಗಳಿಗೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಮೃತರ ಹುಡುಕಾಟಕ್ಕೆ ಶ್ವಾನದಳವನ್ನು ಬಳಸಿಕೊಳ್ಳಲಾಗಿದೆ. ಇಡುಕ್ಕಿ, ಪಾಲಕ್ಕಾಡ್, ಕೋಝಿಕ್ಕೋಡ್‌ಗಳ ಸಹ ಜಿಲ್ಲಾಧಿಕಾರಿಗಳನ್ನು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.
ಭದ್ರತಾ ಪಡೆಗಳ ೧೬೦೦ ಜನ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಮಾಜಸೇವಕರೂ ಕೈ ಜೋಡಿಸಿದ್ದಾರೆ. ಎಲ್ಲೆಡೆ ಆಹಾರ ಮತ್ತು ಬಟ್ಟೆಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸಲಾಗುತ್ತಿದೆ. ಹಗಲಿರುಳು ಶ್ರಮಿಸಿರುವ ಸೇನಾ ಸಿಬ್ಬಂದಿ ೨೪ ಟನ್ ತೂಕದ ಸೇತುವೆ ನಿರ್ಮಿಸಿದ್ದಾರೆ.
ಭಾರತೀಯ ವಾಯುಪಡೆಯ ಎಂಐ-೧೭ ಹೆಲಿಕಾಪ್ಟರ್ ಮೂಲಕ ಕಾಣೆಯಾದವರಿಗಾಗಿ ಶೋಧ, ನಡುಗಡ್ಡೆಗಳಲ್ಲಿ ಸಿಲುಕಿದವರಿಗೆ ಆಹಾರ, ನೀರು ಪೂರೈಕೆಯನ್ನು ಮಾಡುತ್ತಿದ್ದರೆ, ಸಿ-೧೭ ವಿಮಾನದ ಮೂಲಕ ಬೈಲಿ ಸೇತುವೆ(ತಾತ್ಕಾಲಿಕ ಉಕ್ಕಿನ ಸೇತುವೆ) ನಿರ್ಮಾಣಕ್ಕೆ ಬೇಕಾದಂಥ ವಸ್ತುಗಳನ್ನು ಸಾಗಿಸಲಾಗುತ್ತಿದೆ. ಪ್ರಧಾನಿ ಸೂಚನೆ ಮೇರೆಗೆ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಸ್ಥಳಕ್ಕೆ ಧಾವಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಡ್ರಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.