For the best experience, open
https://m.samyuktakarnataka.in
on your mobile browser.

ಕೊಟ್ಟ ಮಾತಿನಂತೆ ನಡೆದುಕೊಳ್ಳುವವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ

04:56 PM Mar 10, 2024 IST | Samyukta Karnataka
ಕೊಟ್ಟ ಮಾತಿನಂತೆ ನಡೆದುಕೊಳ್ಳುವವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ

ಮಂಡ್ಯ: ಕೊಟ್ಟ ಮಾತಿನಂತೆ ನಡೆದುಕೊಳ್ಳುವವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಲಾಗಿದ್ದ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳನ್ನು ನೀಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ನಿರೀಕ್ಷೆಯನ್ನೂ ಮೀರಿ ಆಶೀರ್ವಾದ ಮಾಡಿದ್ದಾರೆ. 136 ಸ್ಥಾನಗಳಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಕರ್ನಾಟಕದ ಜನ ಪ್ರಭುದ್ಧವಾದ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜನರೂ ಕೂಡ ಸುಳ್ಳು ಭರವಸೆ ನೀಡಿದ್ದರೂ, ದಾರಿ ತಪ್ಪಿಸುವ ಕೆಲಸ ಮಾಡಿದ್ದರೂ ಸರಿಯಾದ ತೀರ್ಮಾನವನ್ನೇ ಮಾಡಿದ್ದಾರೆ ಎಂದರು.
ಬಿಜೆಪಿ ಮೇಲೆ ಜೆಡಿಎಸ್ ಅವರಿಗೆ ಬಹಳ ಪ್ರೀತಿ ಉಂಟಾಗಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಾರೆ. ಜನರಿಗೆ ಸತ್ಯ ತಿಳಿಸದೆ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ನಿಮ್ಮ ಪರ ಇದ್ದೇವೆ. ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. 500 ಕೋಟಿ ರೂ.ಗಳನ್ನು ಜಿಲ್ಲೆಗೆ ನೀಡಲಾಗುತ್ತಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ವ್ಯವಸಾಯದ ಮೇಲೆ ಅವಲಂಬಿತ ಜನ ಹೆಚ್ಚಿದ್ದು, ಅಭಿವೃದ್ಧಿ ಮಾಡಲು ಪಣ ತೊಟ್ಟಿದ್ದೇವೆ. ಯಾರೂ ಏನೇ ಹೇಳಿದರೂ ಕೆಲಸ ಮಾಡಿದವರನ್ನು ಗೆಲ್ಲಿಸಬೇಕು ಎಂದರು.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ
ಮಂಡ್ಯದಲ್ಲಿ 4.57 ಕೋಟಿ ಮಹಿಳೆಯರು ಹಾಗೂ ಇಡೀ ರಾಜ್ಯದಲ್ಲಿ 170 ಕೋಟಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ಜನರನ್ನು ಸಂಪೂರ್ಣವಾಗಿ ಹಿಂದಿನ ಸರ್ಕಾರ ಮರೆತಿತ್ತು. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ರೈತಪರ , ಬಡವರಪರ ಎಂದು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೂ, ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಅವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲಿಲ್ಲ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ, ಬಿಜೆಪಿಯ ಯಡಿಯೂರಪ್ಪನವರು 17 ಶಾಸಕರನ್ನು ಕೊಂಡು ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಮಾಜಿ ಪ್ರಧಾನಿ ದೇವೇಗೌಡರು ಕೋಮುವಾದಿಗಳೊಂದಿಗೆ ಸೇರುವುದಿಲ್ಲ ಎಂದಿದ್ದವರು ,ಈಗ ಅವರನ್ನೇ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಸೋಲಿಸಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕೆಂದು ಜನರನ್ನು ಕೋರಿದರು.