ಕೇಂದ್ರದ ಅಂಗಳಕ್ಕೆ ಸಂಗಣ್ಣ ಟಿಕೆಟ್ ಚೆಂಡು
ಕೊಪ್ಪಳ: ಸಂಗಣ್ಣ ಕರಡಿಯವರಿಗೆ ಟಿಕೆಟ್ ತಪ್ಪಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭೆಯ ಬಿಜೆಪಿ ಟಿಕೆಟ್ ಪುನರ್ ಪರಿಶೀಲಿಸಿ ಸಂಗಣ್ಣರಿಗೆ ನೀಡುವ ಪ್ರಸ್ತಾಪದ ಚೆಂಡು ಕೇಂದ್ರದ ಹೈಕಮಾಂಡ್ ಅಂಗಳಕ್ಕೆ ಬಿದ್ದಂತಾಗಿದೆ.
ಸಂಗಣ್ಣ ಕರಡಿಯವರ ಬೆಂಬಲಿಗರು ಮತ್ತು ಅಭಿಮಾನಿಗಳ ಒತ್ತಾಸೆಗೆ ರಾಜ್ಯ ಬಿಜೆಪಿ ಸ್ಕ್ರೀನಿಂಗ್ ಕಮಿಟಿಯ ಸದಸ್ಯರು ಕೇಂದ್ರ ಸಂಸದೀಯ ಮಂಡಳಿಯ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಹೈಕಮಾಂಡ್ ನಾಯಕರು ಒಂದು ವೇಳೆ ಟಿಕೆಟ್ ಬದಲಾವಣೆ ಮಾಡಲು ಒಪ್ಪದಿದ್ದಲ್ಲಿ ಪಕ್ಷದ ನಿರ್ಣಯಕ್ಕೆ ಬದ್ಧರಾಗಿ, ಪ್ರಾಮಾಣಿಕವಾಗಿ ಸಂಘಟನೆಗೆ ಮುಂದಾಗಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಮತ್ತು ಶಾಸಕ ಅರವಿಂದ್ ಬೆಲ್ಲದ ಅವರು ಸಂಗಣ್ಣರ ನಿವಾಸಕ್ಕೆ ಆಗಮಿಸಿ, ವರಿಷ್ಠರನ್ನು ಭೇಟಿಯಾಗಿ, ಮಾತನಾಡುವಂತೆ ಆಹ್ವಾನಿಸಿದ್ದರು. ಅದರಂತೆ ಮಾ. ೨೫ರಂದು ಬೆಂಗಳೂರಿಗೆ ೨೦೦ ಬೆಂಬಲಿಗರು, ಅಭಿಮಾನಿಗಳೊಂದಿಗೆ ತೆರಳಿದ ಸಂಗಣ್ಣನವರು ತಮ್ಮ ಅಭಿಪ್ರಾಯ ತಿಳಿಸಿದ್ದು, ಇದನ್ನು ವರಿಷ್ಠರು ಆಲಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, 'ನಿಮಗೆ ನೋವಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಟಿಕೆಟ್ ಬದಲಾವಣೆ ಮಾಡುವ ಬಗ್ಗೆ ಸಂಸದೀಯ ಮಂಡಳಿಗೂ ತಿಳಿಸುತ್ತೇವೆ. ಹೈಕಮಾಂಡ್ ಒಂದು ವೇಳೆ ಒಪ್ಪದಿದ್ದರೆ ಸಂಘಟನೆ ಮಾಡಬೇಕು ಎಂದು ಮನವೊಲಿಸುವ ಪ್ರಯತ್ನ ಮಾಡಿದರು.