ಮನೆಯಿಂದಲೇ ಮತ ಚಲಾಯಿಸಿದ ವಿಕಲಚೇತನರು
ಹುಬ್ಬಳ್ಳಿ : ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಇಂದಿನ ಬೆಳಿಗ್ಗೆ 7 ಗಂಟೆಯಿಂದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಮನೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹಳೆ ಹುಬ್ಬಳ್ಳಿ ನವ ಅಯೊಧ್ಯನಗರದ ಆತ್ಮಾರಾವ್ ಯಾದವಾಡ ಅವರ ಒಂದೇ ಮನೆಯಲ್ಲಿ ನವ ಮತದಾರರಾದ ಇಬ್ಬರು ವಿಕಲಚೇತನರು ಮತ್ತು 85 ವರ್ಷ ಮೇಲ್ಪಟ್ಟ ಒರ್ವ ಹಿರಿಯ ನಾಗರಿಕರು ಇಂದು ಬೆಳಿಗ್ಗೆ ತಮ್ಮ ಮನೆಯಿಂದಲೇ ಮತ ಚಲಾಯಿಸಿ, ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗಕ್ಕೆ ಧನ್ಯವಾದ ಸಲ್ಲಿಸಿದರು.
ಧಾರವಾಡ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಅಜಯ ಗುಪ್ತಾ ಅವರು ಈ ಮನೆಗೆ ಭೇಟಿ ನೀಡಿ, ನವ ಹಾಗೂ ಹಿರಿಯ ಮತದಾರರನ್ನು ಅಭಿನಂದಿಸಿ, ಸಂತಸ ವ್ಯಕ್ತಪಡಿಸಿದರು.
ಕುಷ್ಟಗಿ: ದೇವರ ಹೆಸರಿನಲ್ಲಿ 85 ವರ್ಷ ಮೇಲ್ಪಟ್ಟ ಮುಸ್ಲಿಂ ಸಮುದಾಯದ ಮಹಿಳೆ ಮನೆಯಿಂದಲೇ ಮತದಾನ ಮಾಡಿದ್ದು ವಿಶೇಷವಾಗಿತ್ತು. ಕುಷ್ಟಗಿಯ ಶರೀಫ್ ನಗರದ ನಿವಾಸಿ ಆಗಿರುವಂತಹ ಮಹಿಬೂಬಲಿ ರಾಜಿಸಾಬ ಕಾಟವಾಡಿ ಮನೆಗೆ ಚುನಾವಣಾ ಮತದಾನದ ಅಧಿಕಾರಿಗಳು ತೆರಳಿ ಮತದಾನ ಮತ ಪೆಟ್ಟಿಗೆಗೆ ಮತ ಹಾಕುವ ವೇಳೆಯಲ್ಲಿ ಯಾ ಅಲ್ಲಾ,ಅಲ್ಲಾ ಹು ಅಕ್ಬರ್ ಅಲ್ಲಾ ದೇವರನ್ನು ನೆನೆದು ಮತ ಹಾಕಿದ್ದು ವಿಶೇಷವಾಗಿ ಕಂಡು ಬಂತು. ಸೆಕ್ಟರ್ ಅಧಿಕಾರಿ ಭೀಮಶೇನ್ ವಜ್ರಬಂಡಿ ಹಾಗೂ ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.