For the best experience, open
https://m.samyuktakarnataka.in
on your mobile browser.

ಕೊರೊನಾ ಅವ್ಯವಹಾರ ತಪ್ಪಿತಸ್ಥರಿಗೆ ಶಿಕ್ಷೆ ಅಗತ್ಯ

02:30 AM Sep 03, 2024 IST | Samyukta Karnataka
ಕೊರೊನಾ ಅವ್ಯವಹಾರ ತಪ್ಪಿತಸ್ಥರಿಗೆ ಶಿಕ್ಷೆ ಅಗತ್ಯ

ಕೊರೊನಾ ಕಾಲದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವುದರಲ್ಲಿ ತುರ್ತು ವ್ಯವಸ್ಥೆ ಮಾಡುವುದು ಅನಿವಾರ್ಯವಾಯಿತು. ಕೇಂದ್ರ ಸರ್ಕಾರ ಸಾಕಷ್ಟು ಉದಾರ ನೆರವು ನೀಡಿತು. ಆದರೆ ರಾಜ್ಯ ಸರ್ಕಾರ ಇವುಗಳನ್ನು ಬಳಸಿಕೊಳ್ಳುವಾಗ ಅವ್ಯವಹಾರಗಳು ನಡೆದಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿಯನ್ನು ವಿಚಾರಣೆಗೆ ನೇಮಿಸಲಾಯಿತು. ಈಗ ಆಯೋಗದ ವರದಿ ಬಂದಿದೆ. ಇದನ್ನು ಕೇವಲ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಯಾರೇ ತಪ್ಪು ಮಾಡಿರಲಿ ತನಿಖೆ ನಡೆದು ಶಿಕ್ಷೆ ಆಗಲೇಬೇಕು. ರಾಜಕೀಯ ಕೆಸರು ಎರಚಾಟಕ್ಕೆ ಇದು ಬಳಕೆಯಾಗಬಾರದು.
ಕೊರೊನಾ ಕಾಲ ತಮ್ಮ ದೇಶ ಕಂಡ ಅತ್ಯಂತ ಕೆಟ್ಟಕಾಲ. ಆದರೂ ಜನ ಆತ್ಮವಿಶ್ವಾಸ ಕಳೆದುಕೊಳ್ಳದೆ ಸೋಂಕು ರೋಗವನ್ನು ಎದುರಿಸಿದರು. ಕಡು ಬಡವರು ಆರ್ಥಿಕವಾಗಿ ಸಾಕಷ್ಟು ಕಷ್ಟನಷ್ಟಗಳನ್ನು ಕಂಡರು. ಅದರಲ್ಲೂ ದಿನಗೂಲಿ ನೌಕರರು ನಗರಗಳನ್ನು ತ್ಯಜಿಸಿ ಹಳ್ಳಿಗಳನ್ನು ಸೇರಿದರು. ಕೈಗಾರಿಕೆಗಳು ನೆಲಕಚ್ಚಿದವು. ಕೇಂದ್ರ ಸರ್ಕಾರ ಉದಾರ ನೆರವು ನೀಡಿತು. ಅದರಲ್ಲೂ ಆಸ್ಪತ್ರೆಗಳಿಗೆ ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಔಷಧಿಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾದವು. ಹೆಚ್ಚಿನ ಬೆಲೆಯಲ್ಲಿ ಖರೀದಿಗಳು ನಡೆದವು. ಕೆಲವು ಕಡೆ ಅಕ್ರಮ ನಡೆದವು. ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೇ ೨೦೨೧ರಲ್ಲಿ ಆಮ್ಲಜನಕ ಸರಬರಾಜು ಸ್ಥಗಿತಗೊಂಡಿದ್ದರಿಂದ ೨೪ ಜನ ಸತ್ತು, ಒಟ್ಟು ಆಸ್ಪತ್ರೆಯಲ್ಲಿ ೬೨ ಜನ ಸಾವನ್ನಪ್ಪಿದರು. ಈ ಘಟನೆಯ ಬಗ್ಗೆ ಸರಿಯಾದ ತನಿಖೆಯೇ ನಡೆಯಲಿಲ್ಲ. ಯಾರಿಗೂ ಶಿಕ್ಷೆ ಆಗಲೇ ಇಲ್ಲ. ಆಸ್ಪತ್ರೆಗಳಿಗೆ ಹೊಸದಾಗಿ ವೆಂಟಿಲೇಟರ್‌ಗಳನ್ನು ಒದಗಿಸಲಾಯಿತು. ಅವುಗಳು ಅತ್ಯಂತ ಕಳಪೆಮಟ್ಟದ್ದು ಎಂಬ ದೂರು ಬಂದರೂ ಸರ್ಕಾರ ನಿಗಾವಹಿಸಲಿಲ್ಲ. ಖಾಸಗಿ ಆಸ್ಪತ್ರೆಯವರು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿದ್ದು ನಿಜ. ಸರ್ಕಾರಕ್ಕೆ ಈ ಆಸ್ಪತ್ರೆಗಳ ಮೇಲೆ ಹಿಡಿತ ಇರಲಿಲ್ಲ. ಅದೇ ರೀತಿ ಔಷಧಿ ವಿತರಣೆ ಕೂಡ ದುರುಪಯೋಗವಾಯಿತು. ವೈದ್ಯರಿಗೆ ಪಿಪಿಇ ಕಿಟ್ ಬಹಳ ಅಗತ್ಯವಾಗಿತ್ತು. ಇದನ್ನು ಸರ್ಕಾರ ಒದಗಿಸಿತು. ಇವುಗಳು ಕಳಪೆ ಗುಣಮಟ್ಟದ್ದು ಎಂದು ಅದನ್ನು ಒದಗಿಸಿದವರೇ ವೈದ್ಯರಿಗೆ ತಿಳಿಸಿದರು. ವೈದ್ಯರು ತಮ್ಮ ಕೈನಿಂದ ೨ ಸಾವಿರ ರೂ. ವೆಚ್ಚ ಮಾಡಿ ಉತ್ತಮ ಪಿಪಿಇ ಕಿಟ್ ಖರೀದಿ ಮಾಡಿದರು. ಸರ್ಕಾರ ನೀಡಿದ ಪಿಪಿಇ ಕಿಟ್ ಮೂಲೆಗೆ ಹೋಯಿತು. ವೈದ್ಯರು ಹವಾನಿಯಂತ್ರಣ ಇಲ್ಲದೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡಬೇಕಾಗಿ ಬಂದಿತು. ಕೊರೊನಾದಿಂದ ಸತ್ತವರ ಮುಖವನ್ನೂ ನೋಡಲು ಅವರ ಆಪ್ತರಿಗೆ ಅವಕಾಶ ನೀಡಲು ಸಾಧ್ಯವಾಗಲಿಲ್ಲ. ಜನ ಸರ್ಕಾರದ ಅನುಕಂಪದಲ್ಲಿ ಬದುಕುವುದು ಅನಿವಾರ್ಯವಾಯಿತು. ಇಂಥ ದುರ್ಬರ ಸ್ಥಿತಿಯಲ್ಲಿ ಜನರ ಶೋಷಣೆ ನಡೆದದ್ದಂತೂ ನಿಜ. ಆಗ ಮಾಡಿದ ವೆಚ್ಚವನ್ನು ಪ್ರಶ್ನಿಸುವುದಕ್ಕೆ ಅವಕಾಶವಿರಲಿಲ್ಲ. ಕೊರೊನಾ ಹೋದ ಮೇಲೆ ಅದಕ್ಕೆ ಮಾಡಿದ ವೆಚ್ಚದ ಬಗ್ಗೆ ಪರಾಮರ್ಶೆ ನಡೆಯಿತು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಏನೋ ತನ್ನ ವರದಿಯನ್ನು ಸಲ್ಲಿಸಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಿತು. ಇದರ ವರದಿ ಈಗ ರಾಜಕೀಯ ಸೇಡಿಗೆ ಬಳಕೆಯಾಗುತ್ತಿದೆ. ರಾಜಕಾರಣಿಗಳ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಈ ವರದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಕೂಡಲೇ ನಿಲ್ಲಬೇಕು. ಆಗಿನ ಸಂದರ್ಭವನ್ನು ಯಾರು ಯಾರು ದುರುಪಯೋಗಪಡಿಸಿಕೊಂಡರೋ ಅವರನ್ನು ಪತ್ತೆಹಚ್ಚಿ ಶಿಕ್ಷೆ ವಿಧಿಸಬೇಕು. ಸರ್ಕಾರ ಬದಲಾದವು ಎಂದು ಅಕ್ರಮಗಳನ್ನು ಮುಚ್ಚಿ ಹಾಕುವುದು ಸರಿಯಲ್ಲ. ಜನರ ತೆರಿಗೆ ಹಣ ದುರುಪಯೋಗವಾಗಿರುವುದಂತೂ ನಿಜ. ಅದರ ಆಧಾರದ ಮೇಲೆ ಅಂದು ಕೆಲಸ ಮಾಡಿದ ಪ್ರತಿಯೊಬ್ಬರ ಜವಾಬ್ದಾರಿ ಏನು ಎಂಬುದು ನಿಗದಿ ಮಾಡಿ ಸೂಕ್ತ ಶಿಕ್ಷೆ ವಿಧಿಸಬೇಕು. ಬೇರೆ ದೇಶಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದ್ದಾಗಿತ್ತು ಎಂದು ಸಮಜಾಯಿಷಿ ನೀಡುವುದು ಸರಿಯಲ್ಲ. ಕುಂಟು ನೆಪಗಳು ಉಪಯೋಗಕ್ಕೆ ಬರುವುದಿಲ್ಲ. ಜನಸಾಮಾನ್ಯರಿಗೆ ಸಾವು ನೋವುಗಳಿಗೆ ಕಾರಣರಾದವರನ್ನು ಗುರುತಿಸಿ ಅವರಿಗೆ ಶಿಕ್ಷೆ ವಿಧಿಸಿದಾಗಲೇ ಸಾರ್ವಜನಿಕ ಬದುಕಿನಲ್ಲಿ ಸರ್ಕಾರದ ಪಾತ್ರ ಏನು ಎಂಬುದು ತಿಳಿಯುತ್ತದೆ. ಕೊರೊನಾಗೆ ಲಸಿಕೆ ಸುಲಭ ದರದಲ್ಲಿ ದೊರಕಿದ್ದರಿಂದ ಲಕ್ಷಾಂತರ ಜನರ ಪ್ರಾಣ ಉಳಿಯಿತು. ಆದರೆ ಅದೇ ಸಂದರ್ಭ ಜನರ ಹಣವನ್ನು ಲೂಟಿ ಮಾಡಿದವರನ್ನು ಕೈಬಿಡುವುದು ಸರಿಯಲ್ಲ. ಇದರಲ್ಲಿ ಪಕ್ಷ-ವ್ಯಕ್ತಿಗಳು ಪರಿಗಣನೆಗೆ ಬರಬಾರದು. ತಪ್ಪು ಯಾರೇ ಮಾಡಿರಲಿ ಶಿಕ್ಷೆ ಆಗಲೇಬೇಕು. ಇದು ಸಮಯಸಾಧಕರಿಗೆ ಪಾಠ ಕಲಿಸಬೇಕಾದ ಕಾಲ. ಜನರ ದುಃಖದುಮ್ಮಾನಗಳ ನಡುವೆಯೂ ಕೆಲವರು ಹಣ ಗಳಿಕೆಗೆ ಕೈಹಾಕಿದ್ದರು ಎಂಬುದು ಕ್ರೂರತೆಯ ಪರಮಾವಧಿ. ಇಂಥ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು.