For the best experience, open
https://m.samyuktakarnataka.in
on your mobile browser.

ಕೊಲೆ ಯತ್ನ ಆರೋಪಿಗಳಿಗೆ ಸಜೆ

08:50 PM Nov 07, 2023 IST | Samyukta Karnataka
ಕೊಲೆ ಯತ್ನ ಆರೋಪಿಗಳಿಗೆ ಸಜೆ

ಮಂಗಳೂರು: ನಗರದ ಅಳಕೆ ಮಾರ್ಕೆಟ್ ಮುಂದೆ 2015ರಲ್ಲಿ ನಡೆದ ಕುದ್ರೋಳಿಯ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಕೊಲೆಯತ್ನ ಪ್ರಕರಣದ ೫ ಮಂದಿ ಆರೋಪಿಗಳಿಗೆ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಮುಲ್ಕಿ ನಿವಾಸಿಗಳಾದ ರವಿಚಂದ್ರ ಯಾನೆ ವಿಕ್ಕಿ ಪೂಜಾರಿ(32), ಆತನ ಸಹೋದರ ಶಶಿ ಪೂಜಾರಿ(30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್(28) ಮತ್ತು ರಾಜೇಶ್(30) ಶಿಕ್ಷೆಗೊಳಗಾದ ಆರೋಪಿಗಳು. ಇನ್ನೋರ್ವ ಆರೋಪಿ ಗಣೇಶ್(28) ತಲೆಮರೆಸಿಕೊಂಡಿದ್ದಾನೆ.
2015ರ ಜು. 27ರಂದು ಸಂಜೆ 6:30ಕ್ಕೆ ಕುದ್ರೋಳಿಯ ಅಳಕೆ ಮಾರ್ಕೆಟ್ ಎದುರು ಲತೀಶ್ ನಾಯಕ್ ಮತ್ತು ಇಂದ್ರಜಿತ್‌ನ ಕೊಲೆಯತ್ನ ನಡೆದಿತ್ತು. ಈ ಬಗ್ಗೆ ಅಂದಿನ ಇನ್ಸ್‌ಪೆಕ್ಟರ್‌ಗಳಾದ ಟಿ.ಡಿ. ನಾಗರಾಜ್ ಮತ್ತು ಭಜಂತ್ರಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ವಾದಿಸಿದ್ದರು.
ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ ೧೪೩ರಡಿ ೩ ತಿಂಗಳ ಸಾದಾ ಸಜೆ, ೧,೦೦೦ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 15 ದಿನ ಹೆಚ್ಚುವರಿ ಸಾದಾ ಸಜೆ, ಕಲಂ ೧೪೯ರಡಿ ೨ ವರ್ಷ ಸಾದಾ ಸಜೆ, ೧,೦೦೦ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ೩ ತಿಂಗಳು ಸಾದಾ ಸಜೆ, ಕಲಂ ೩೦೭ರಡಿ ಲತೇಶ್ ಕೊಲೆ ಯತ್ನಕ್ಕೆ ೪ ವರ್ಷ ಶಿಕ್ಷೆ, ೫,೦೦೦ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ೩ ತಿಂಗಳು ಹೆಚ್ಚುವರಿ ಸಾದಾ ಸಜೆ, ಇಂದ್ರಜಿತ್ ಕೊಲೆಯತ್ನಕ್ಕೆ ೪ ವರ್ಷ ಶಿಕ್ಷೆ, ೨,೫೦೦ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ೩ ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತ ೧.೬೦ ಲ.ರೂ.ವನ್ನು ಇಂದ್ರಜಿತ್ನ ತಾಯಿಗೆ ನೀಡಬೇಕು. ಅಲ್ಲದೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಇಂದ್ರಜಿತ್ ತಾಯಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.