ಸಮೀಕ್ಷೆಗಳ ಬಗ್ಗೆ ವಿಶ್ವಾಸವಿಲ್ಲ
ಯಾವುದೇ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯವಾಗಲು ನಮ್ಮ ಸರ್ಕಾರ, ಪಕ್ಷ ಬಿಡುವುದಿಲ್ಲ. ಇದನ್ನು ನಾನು ದೇವರ ಸನ್ನಿಧಿಯಲ್ಲಿ, ಸರ್ಕಾರದ ಪ್ರತಿನಿಧಿಯಾಗಿ, ಉಪಮುಖ್ಯಮಂತ್ರಿಯಾಗಿ, ಕಾಂಗ್ರೆಸ್ ಅಧ್ಯಕ್ಷನಾಗಿ ಹೇಳುತ್ತಿರುವುದಾಗಿ ತಿಳಿಸಿದರು
ಉಡುಪಿ: ಯಾವುದೇ ಎಕ್ಸಿಟ್ ಪೋಲ್, ಸಮೀಕ್ಷೆಗಳ ಬಗ್ಗೆ ನನಗೆ ವಿಶ್ವಾಸ ಇಲ್ಲ. ಕರ್ಮಣ್ಯೇವಾಧಿಕಾರಸ್ತೇ ಎಂಬ ಹಾಗೆ ನಮ್ಮೆಲ್ಲಾ ಪ್ರಯತ್ನ ಮಾಡಿದ್ದೇವೆ, ಮಾ ಫಲೇಶು ಕದಾಚನ. ದೇವರು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ. ಮತದಾರರು ಯಾರ ಮನಸ್ಸು, ಹೃದಯವನ್ನು ಗೆದ್ದಿದ್ದಾರೋ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಕರ್ನಾಟಕ, ಹರ್ಯಾಣಗಳ ಸಮೀಕ್ಷೆಗಳೇನಾಯಿತು? ಹಾಗಾಗಿ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ
ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಐದು ಗ್ಯಾರಂಟಿಗಳ ಭಾಗ್ಯ ಜನತೆಗೆ ಸಿಗಲಿ ಎಂದು ತಾಯಿ ಮೂಕಾಂಬಿಕೆಯಲ್ಲಿ ಪ್ರಾರ್ಥನೆ ಮಾಡಿದ್ದೆ, ಇಡಗುಂಜಿ ಶ್ರೀ ಮಹಾಗಣಪತಿ ದರ್ಶನ ಮಾಡುವುದಾಗಿಯೂ ಸಂಕಲ್ಪಿಸಿದ್ದೆ. ಹಾಗಾಗಿ ಸಪತ್ನೀಕನಾಗಿ ಆಗಮಿಸಿರುವುದಾಗಿ ತಿಳಿಸಿದ ಶಿವಕುಮಾರ್, ಮುರುಡೇಶ್ವರದಲ್ಲಿ ನಡೆಯುವ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ, ಮಹಾಶಿವನ ದರ್ಶನ ಪಡೆಯುವುದಾಗಿ ತಿಳಿಸಿದರು.
ಯಾವುದೇ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯವಾಗಲು ನಮ್ಮ ಸರ್ಕಾರ, ಪಕ್ಷ ಬಿಡುವುದಿಲ್ಲ. ಇದನ್ನು ನಾನು ದೇವರ ಸನ್ನಿಧಿಯಲ್ಲಿ, ಸರ್ಕಾರದ ಪ್ರತಿನಿಧಿಯಾಗಿ, ಉಪಮುಖ್ಯಮಂತ್ರಿಯಾಗಿ, ಕಾಂಗ್ರೆಸ್ ಅಧ್ಯಕ್ಷನಾಗಿ ಹೇಳುತ್ತಿರುವುದಾಗಿ ತಿಳಿಸಿದರು. ಯಾರ್ಯಾರ ಕಾರ್ಡು ವಜಾ ಮಾಡಲಾಗಿದೆಯೋ ಅವುಗಳ ವಿವರ ನೀಡುವಂತೆ ನಮ್ಮ ಮಂತ್ರಿಗಳು, ಅಧಿಕಾರಿಗಳಿಗೆ ಹೇಳಿದ್ದೇನೆ. ಅರ್ಹರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಮತ್ತೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪ್ರತೀ ತಾಲೂಕು ಹಾಗೂ ರಾಜ್ಯ ಮಟ್ಟದ ಸಮಿತಿ ಉಸ್ತುವಾರಿ ವಹಿಸಲಿದೆ.
ನಕ್ಸಲ ನಿಗ್ರಹ ಬಗ್ಗೆ ಪೊಲೀಸ್ ಇಲಾಖೆ, ಗೃಹಸಚಿವರು ಅವರವರ ಕೆಲಸ ಮಾಡುತ್ತಿದ್ದಾರೆ. ಜನತೆಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ಕರ್ನಾಟಕ, ಕೇರಳಗಳಲ್ಲಿ ನಕ್ಸಲರಿಗಾಗಿ ಮಾಡಲಾದ ಘೋಷಣೆಗಳ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ತಿಳಿಸಿದ್ದಾರೆ. ಪೊಲೀಸರು ಅವರ ಡ್ಯೂಟಿ ಮಾಡಿದ್ದಾರೆ. ಆ ಬಗ್ಗೆ ನಾನು ಹೆಚ್ಚೇನೂ ಮಾತನಾಡುವುದಿಲ್ಲ ಎಂದು ಡಿಕೆಶಿ ತಿಳಿಸಿದರು.
ಕೇಂದ್ರ ಸರ್ಕಾರದ 58 ಶೇ. ನಬಾರ್ಡ್ ಸಾಲ ಯೋಜನೆ ಕಡಿತಗೊಳಿಸಿರುವ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ, ವಿತ್ತ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರು.