ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ
ಅಥಣಿ: ಪಟ್ಟಣದ ಹೊರವಲಯದ ತೋಟದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆಯಾಗಿದೆ.
ಅಥಣಿ ಪಟ್ಟಣದ ಮದಭಾವಿ ರಸ್ತೆಗೆ ಹೊಂದಿಕೊಂಡಿರುವ ಚೌಹಾಣ್ ತೋಟದ ನಾನಾಸಾಹೇಬ್ ಬಾಬು ಚೌವ್ಹಾಣ್(೫೮), ಜಯಶ್ರೀ ನಾನಾಸಾಹೇಬ್ ಚೌವ್ಹಾಣ್(೫೦) ಮೃತರು. ಇವರು ಸುಮಾರು ಐದಾರು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮನೆಯ ಸುತ್ತಲೂ ದುರ್ವಾಸನೆ ಬರುತ್ತಿದ್ದಂತೆ ಪಕ್ಕದ ಮನೆಯವರು ಗಮನಿಸಿ ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ಕಾರಣ: ಸ್ಥಳೀಯರ ಮಾಹಿತಿ ಪ್ರಕಾರ ದಂಪತಿಗೆ ಒಬ್ಬನೆ ಮಗನಿದ್ದು, ಆತನನ್ನು ಜಮಖಂಡಿ, ಸಂಕೇಶ್ವರ, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ೨೯ರಂದು ಬಂಧಿಸಿದ್ದಾರೆ. ಪುತ್ರ ದಿಲೀಪ್ ನಾನಾಸಾಹೇಬ್ ಚೌವ್ಹಾಣ್‌ನನ್ನು ಮನೆಯಲ್ಲಿಯೇ ಬಂಧಿಸಿ ಕರೆದುಕೊಂಡು ಹೋಗಿದ್ದರಿಂದ ದಂಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಸ್ಥಳಕ್ಕೆ ಆರೋಗ್ಯ ಅಧಿಕಾರಿ ಬಸನಗೌಡ ಕಾಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.