For the best experience, open
https://m.samyuktakarnataka.in
on your mobile browser.

ಕೋಮಾದಲ್ಲಿ ರಾಜ್ಯ ಸರಕಾರ

07:31 PM Aug 28, 2024 IST | Samyukta Karnataka
ಕೋಮಾದಲ್ಲಿ ರಾಜ್ಯ ಸರಕಾರ

ಮಂಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಸರ್ಕಾರ ಕೋಮಾ ಸ್ಥಿತಿಗೆ ತಲುಪಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ರಚಿಸಿರುವ ಸರ್ಕಾರ, ಅವರಿಗೆ ಗೌರವಧನ ನೀಡುವ ಮೂಲಕ ಜನರ ಹಣವನ್ನು ಪೋಲು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ, ಜನಪರ ಕಾರ್ಯಕ್ರಮಗಳು, ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅವೈಜ್ಞಾನಿಕ ಪಂಚಗ್ಯಾರಂಟಿಗಳ ಹೊರೆ ತಾಳಲಾರದೆ ಬೆಲೆ ಏರಿಕೆ, ತೆರಿಗೆಯ ಬರೆಯನ್ನು ಸರಕಾರ ಜನರ ಮೇಲೆ ಹಾಕುತ್ತಿದೆ ಎಂದರು.
ಪಂಚ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದೆ. ಈ ಮೂಲಕ ರಾಜ್ಯಾಧ್ಯಕ್ಷ- ಉಪಾಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ. ಜಿಲ್ಲಾಮಟ್ಟದಲ್ಲಿ ಅಧ್ಯಕ್ಷರಿಗೆ ೪೦ ಸಾವಿರೂ. ರೂ., ತಾಲೂಕು ಅಧ್ಯಕ್ಷರಿಗೆ ೨೫ ಸಾವಿರ ರೂ., ಸದಸ್ಯರಿಗೆ ಇಂತಿಷ್ಟು ಗೌರವಧನ ನಿಗದಿಪಡಿಸಲಾಗಿದ್ದು, ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಜಿಪಂ, ತಾಪಂ, ಗ್ರಾಪಂ ಎಂದು ಅನುಷ್ಠಾನಗೊಳಿಸಲು ಬೇಕಾದ ಸ್ಥಳೀಯ ಸಂಸ್ಥೆಗಳಿವೆ. ಹಾಗಿರುವಾಗ ಜನರ ತೆರಿಗೆ ದುಡ್ಡಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ವ್ಯವಸ್ಥೆ ಮಾಡುವ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.
ತೆರೆ ಮರೆಯಲ್ಲಿ ಸಿಎಂ ಸ್ಥಾನದ ಚರ್ಚೆ
ಒಂದರ ಹಿಂದೆ ಒಂದರಂತೆ ರಾಜ್ಯ ಸರಕಾರದ ಹಗರಣಗಳ ಬೆಳಕಿಗೆ ಬರುತ್ತಿದ್ದು, ಮುಖ್ಯಮಂತ್ರಿಗಳು ಮುಡಾ ಹಗರಣ ವಿಚಾರವಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ. ಈ ಹಗರಣ ಈಗ ನಿರ್ಣಾಯಕ ಹಂತಕ್ಕೆ ಬಂದಿದ್ದು, ಮುಖ್ಯಮಂತ್ರಿ ಸ್ಥಾನದ ಅಸ್ಥಿರತೆ ಅವರ ನಡವಳಿಕೆಯಿಂದ ವ್ಯಕ್ತವಾಗುತ್ತಿದೆ. ಸಚಿವರು, ಶಾಸಕರು ಸಿಎಂಗೆ ಬೆಂಬಲ ನೀಡುವ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಮುಂದಿನ ಸಿಎಂ ಯಾರಾಗಬೇಕು ಎನ್ನುವ ಪ್ರಯತ್ನ ತೆರೆಯ ಹಿಂದೆ ನಡಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಜೈಲುಗಳು ರೆಸಾರ್ಟ್‌ಗಳಾಗಿ ಬದಲಾಗಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಮೂರು ತಿಂಗಳಿಂದ ಗೌರವಧನವೇ ಸಿಕಿಲ್ಲ. ಸರಕಾರದಿಂದಲೇ ೧೧೦ ಕೋ.ರೂ. ನೀರಿನ ಬಿಲ್ ಬಾಕಿಯಿದ್ದು, ಸಾರಿಗೆ ನಿಗಮದಿಂದ ೪.೫ ಸಾವಿರ ಕೋ.ರೂ. ಕೆಎಸ್ಸಾರ್ಟಿಸಿಗೆ ಬಾಕಿ ಇದೆ. ಪಾಲಿಕೆ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ಬರ-ಪ್ರವಾಸ ಸಂತ್ರಸ್ತರಿಗೆ ಪರಿಹಾರ ಇನ್ನೂ ತಲುಪಿಲ್ಲ ಎಂದರು.
ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಖಜಾಂಚಿ ಸಂಜಯ್ ಪ್ರಭು, ಮುಖಂಡರಾದ ವಿಕಾಸ್ ಪುತ್ತೂರು, ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.

Tags :