For the best experience, open
https://m.samyuktakarnataka.in
on your mobile browser.

ಕೋಮುಗಲಭೆ ದಮನ ಸರ್ಕಾರದ ಕೆಲಸ

02:30 AM Sep 13, 2024 IST | Samyukta Karnataka
ಕೋಮುಗಲಭೆ ದಮನ ಸರ್ಕಾರದ ಕೆಲಸ

ಕೋಮುಗಲಭೆ ಎಂದೂ ಆಕಸ್ಮಿಕವಲ್ಲ. ಪೂರ್ವ ನಿಯೋಜಿತ. ಅದರಲ್ಲೂ ಸಮಾಜಘಾತುಕ ಶಕ್ತಿಗಳು ಮೊದಲೇ ಎಲ್ಲವನ್ನು ಸಿದ್ಧತೆ ಮಾಡಿಕೊಂಡಿರುತ್ತವೆ. ಈ ಶಕ್ತಿಗಳು ಸರ್ಕಾರದ ನಿಲುವನ್ನು ನೋಡುತ್ತವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ಗೊತ್ತಾದರೆ ಬಾಲ ಬಿಚ್ಚುವುದಿಲ್ಲ. ಪೊಲೀಸರು ಕೂಡ ಸರ್ಕಾರದ ಆಲೋಚನೆ ಹೇಗಿದೆ ಎಂಬುದನ್ನು ನೋಡುತ್ತಾರೆ. ಅದರಂತೆ ನಡೆದುಕೊಳ್ಳುತ್ತಾರೆ. ಪೊಲೀಸರಿಗೆ ಗಲಾಟೆ ಮಾಡುವವರ ಪೂರ್ವಾಪರ ತಿಳಿದಿರುತ್ತದೆ. ನಾಗಮಂಗಲ ಮತ್ತು ಬೀದರ್‌ನಲ್ಲಿ ನಡೆದ ಎರಡೂ ಗಲಭೆಗಳಿಗೆ ಪೂರ್ವ ಇತಿಹಾಸ ಇರುವುದು ಸ್ಪಷ್ಟ. ಸರ್ಕಾರ ಮೊದಲೇ ಸೂಚನೆ ನೀಡಿದ್ದರೆ ಇಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬಹುದಿತ್ತು. ಕಾನೂನು ರೀತ್ಯ ಮುನ್ನೆಚ್ಚರಿಕೆಯಾಗಿ ಕೆಲವರನ್ನು ಬಂಧಿಸಿದರೆ ಇಂಥ ಘಟನೆಗಳನ್ನು ತಪ್ಪಿಸಬಹುದು. ರಾಜ್ಯದಲ್ಲಿ ಕೆಲವು ಕಡೆ ಈ ರೀತಿ ಕೋಮು ಗಲಭೆ ನಡೆಸುವ ಕೆಲವು ವ್ಯಕ್ತಿಗಳು ಇರುತ್ತಾರೆ. ಅವರೇನೂ ಅಮಾಯಕರಲ್ಲ. ಅವರು ಪರಿಸ್ಥಿತಿ ನೋಡಿಕೊಂಡು ಗಲಭೆ ಎಬ್ಬಿಸುತ್ತಾರೆ. ಅವರನ್ನು ಮುನ್ನೆಚ್ಚರಿಕೆಯಾಗಿ ಬಂಧಿಸಿದರೆ ಶಾಂತಿಯುತವಾಗಿ ಗಣೇಶ ವಿಸರ್ಜನೆ ನಡೆಯುವಂತೆ ಮಾಡಬಹುದು. ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗಳು ಇಂಥ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಈಗ ಸರ್ಕಾರದ ಮರ್ಜಿಗೆ ತಕ್ಕಂತೆ ಕೆಲಸ ಮಾಡುವ ಕಾಲ ಬಂದಿದೆ.
ನಾಗಮಂಗಲದಲ್ಲಿ ೧೯೯೦, ೧೯೯೪, ೨೦೦೧ರಲ್ಲಿ ಈ ರೀತಿ ಗಲಭೆಗಳು ನಡೆದಿವೆ. ಅದರಿಂದ ಪೊಲೀಸರಿಗೆ ಈ ಗಲಭೆ ಹೊಸತೇನಲ್ಲ. ಗುಪ್ತಚರ ಇಲಾಖೆ ಬಳಿ ಎಲ್ಲ ವಿವರ ಇದ್ದೇ ಇರುತ್ತದೆ. ಪೊಲೀಸ್ ಅಧಿಕಾರಿಗಳು ಸ್ವಲ್ಪ ಎಚ್ಚರವಹಿಸಿದ್ದರೆ ಜನರಿಗಾದ ನೋವು ಮತ್ತು ನಷ್ಟವನ್ನು ತಪ್ಪಿಸಬಹುದಿತ್ತು. ನಾಗಮಂಗಲದಲ್ಲಿ ೨೫ ವರ್ಷಗಳಿಂದ ಇದ್ದ ಜವಳಿ ಅಂಗಡಿ ಈಗ ಬೆಂಕಿಗೆ ಬಲಿಯಾಗಿದೆ ಎಂದರೆ ಅದಕ್ಕೆ ಸ್ಥಳೀಯರೇ ಕಾರಣ ಎಂಬುದು ಸ್ಪಷ್ಟ. ಮೋಟಾರ್ ಬೈಕ್‌ಗಳನ್ನು ಸುಟ್ಟು ಹಾಕಲು ಇದೇ ಕಾರಣ. ನಾಗಮಂಗಲ ಮತ್ತು ಬೆಳ್ಳೂರು ಮೊದಲಿನಿಂದಲೂ ಅತ್ಯಂತ ಸೂಕ್ಷ್ಮ ಪ್ರದೇಶ. ಇದರಲ್ಲಿ ಏನೇ ಕಾರ್ಯಕ್ರಮ ನಡೆದರೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಕೋಮುಗಲಭೆ ನಡೆದರೆ ಆ ಜಿಲ್ಲೆಯ ಎಸ್‌ಪಿ ಮತ್ತು ಡಿಸಿ ಹೊಣೆಹೊರಬೇಕು ಎಂದು ಸರ್ಕಾರ ಹಲವು ಬಾರಿ ಹೇಳಿದೆ. ಆದರೆ ಮುನ್ನೆಚ್ಚರಿಕೆ ವಹಿಸಲು ಸ್ಥಳೀಯ ರಾಜಕಾರಣಿಗಳು ಮುತುವರ್ಜಿವಹಿಸಬೇಕು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ರೌಡಿಗಳಿಗೆ ಯಾವ ಪಕ್ಷವೂ ಇರುವುದಿಲ್ಲ. ಅವರು ತಮ್ಮ ಜಾತಿ, ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವುದು ಎಲ್ಲರಿಗೂ ತಿಳಿದ ಸಂಗತಿ. ಇಂಥ ಸಂದರ್ಭಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು. ಅವರು ಶಾಂತಿಭಂಗವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರಲ್ಲಿ ಹಿಂಜರಿಯುವುದಿಲ್ಲ. ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಓಲೈಸಿದರೆ ಇಂಥ ಘಟನೆಗಳು ನಡೆಯುವುದು ಸಹಜ. ಕಾನೂನು ಪರಿಪಾಲನೆ ಪ್ರಶ್ನೆ ಬಂದಾಗ ಯಾವ ರಿಯಾಯಿತಿಯೂ ಇರಬಾರದು. ಜನಪ್ರತಿನಿಧಿಗಳು ದೂರ ಉಳಿದರೆ ಸಾಕು ಪೊಲೀಸರು ಸನ್ನಿವೇಶವನ್ನು ಹತೋಟಿಗೆ ತೆಗೆದುಕೊಳ್ಳುತ್ತಾರೆ. ಅಮಾಯಕರನ್ನು ರಕ್ಷಿಸುತ್ತಾರೆ. ನಮ್ಮ ರಾಜಕಾರಣಿಗಳು ತೊಟ್ಟಿಲು ತೂಗುವ, ಮಗುವನ್ನು ಚಿವುಟುವ ಕೆಲಸ ಮಾಡಬಾರದು. ಕೋಮುಗಲಭೆ ನಿಲ್ಲಬೇಕು ಎಂದರೆ ಸ್ಥಳೀಯರಿಗೆ ಮುಕ್ತ ಅವಕಾಶನೀಡಬೇಕು. ಯಾವ ರಾಜಕೀಯ ಪಕ್ಷವೂ ಇದರಲ್ಲಿ ತಲೆ ಹಾಕಬಾರದು.. ಆಗ ತಂತಾನೇ ನಿಂತು ಹೋಗುತ್ತದೆ. ಈ ಮಾತು ಬೀದರ್‌ಗೂ ಅನ್ವಯಿಸುತ್ತದೆ. ಸುಶಿಕ್ಷಿತರ ಸಂಖ್ಯೆ ಹೆಚ್ಚಿದಂತೆ ಮತ್ತು ಹೊರಗಿನವರು ಬಂದು ನೆಲೆಸಿದಾಗ ಇಂಥ ಘಟನೆಗಳಿಗೆ ಅವಕಾಶ ಇರುವುದಿಲ್ಲ. ಗೂಂಡಾ ಕೃತ್ಯಗಳನ್ನು ದಮನಮಾಡಲು ಪ್ರತ್ಯೇಕ ಕಾಯ್ದೆ ಇದೆ. ಇದನ್ನು ಜಿಲ್ಲಾಧಿಕಾರಿಯೇ ಚಲಾಯಿಸಬಹುದು. ಜನಪ್ರತಿನಿಧಿಗಳು ಸಹಕರಿಸಿದರೆ ಇದು ಮರುಕಳಿಸದಂತೆ ಮಾಡುವುದು ಕಷ್ಟದ ಕೆಲಸವೇನಲ್ಲ. ಹಿಂದೆ ಇಂಥ ಘಟನೆಗಳು ನಡೆದಾಗ ನ್ಯಾಯಾಂಗ ತನಿಖೆ ನಡೆದಿವೆ. ಅವುಗಳ ವರದಿಗಳು ಸರ್ಕಾರದ ಕಡತದಲ್ಲಿ ಬಿದ್ದಿವೆ. ಅವುಗಳ ಆಧಾರದ ಮೇಲೆ ಕ್ರಮ ಕೈಗೊಂಡಿದ್ದರೆ ಈಗ ಇಂಥ ಘಟನೆಗಳು ನಡೆಯದಂತೆ ಮಾಡಲು ಅವಕಾಶವಿತ್ತು. ರಾಜಕೀಯ ಬೆಂಬಲ ವಿಲ್ಲದ ಯಾವ ಕೋಮು ಶಕ್ತಿಗಳು ಹೆಚ್ಚು ದಿನ ಉಳಿಯುವುದಿಲ್ಲ. ಪೊಲೀಸರಿಗೆ ಮುಕ್ತ ಅವಕಾಶ ನೀಡಿದರೆ ಗೂಂಡಾಗಳನ್ನು ಊರು ಬಿಡುವಂತೆ ಮಾಡಬಹುದು. ಒಮ್ಮೆ ಕೋಮು ತಂಡಗಳು ಚದುರಿ ಹೋದಲ್ಲಿ ಹೊಸ ತಂಡಗಳು ತಲೆಎತ್ತುವುದು ಕಷ್ಟ. ಇವುಗಳ ಆರ್ಥಿಕ ಮೂಲವೇ ರಾಜಕಾರಣ ಎಂಬುದನ್ನು ಮರೆಯಬಾರದು. ಉಗ್ರರನ್ನೇ ಸದೆಬಡಿಯುವಾಗ ಇಂಥ ಪುಡಿ ರೌಡಿಗಳನ್ನು ಮಣಿಸುವುದು ಪೊಲೀಸರಿಗೆ ಕಷ್ಟದ ಕೆಲಸವೇನಲ್ಲ. ಸರ್ಕಾರದ ರಾಜಕೀಯ ಇಚ್ಛಾಶಕ್ತಿ ಅಗತ್ಯ. ಸ್ಥಳೀಯ ನಾಯಕರು ಕೂಡ ಇಂಥ ಸಮಾಜ ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡಬಾರದು.
ಇಂಥ ಘಟನೆ ನಡೆಯುವ ಸ್ಥಳಗಳಲ್ಲಿ ಜನಪ್ರತಿನಿಧಿಗಳಾಗಿ ಬೇರೆಯವರು ಆಯ್ಕೆಗೊಂಡಲ್ಲಿ ನಿಂತುಹೋಗುವ ಸಂದರ್ಭಗಳೂ ಕಂಡು ಬಂದಿವೆ. ಹೊಸ ತಲೆಮಾರಿನ ಜನಪ್ರತಿನಿಧಿಗಳು ಇಂಥ ಶಕ್ತಿಗಳನ್ನು ಬೆಳೆಸುವುದರಲ್ಲಿ ವಿಶ್ವಾಸ ಹೊಂದಿಲ್ಲದೆ ಇರುವುದು ಶುಭ ಸೂಚನೆ.