ಕೋಮುವಾದಿ ಜಮೀರ್‌ನನ್ನು ಕೈಬಿಡದಿದ್ದರೆ ಹೋರಾಟ
ದಾವಣಗೆರೆ: ಡಿಜೆಹಳ್ಳಿ, ಕೆಜಿ ಹಳ್ಳಿಯ ಗಲಭೆ ಪ್ರಕರಣದ ರೂವಾರಿ ಜಮೀರ್ ಅಹಮದ್ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಈಗ ದೇವಸ್ಥಾನ, ಮಠಮಾನ್ಯ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗದವರ ಜಮೀನನ್ನು ವಕ್ಫ್ ಬೋರ್ಡ್‌ಗೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕೂಡಲೇ ಜಮೀರ್ ಅವರನ್ನು ಸಂಪುಟ ದಿಂದ ವಜಾಗೊಳಿಸಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ವಕ್ಫ್ ಬೋರ್ಡಿಗೆ ಹಿಂದುಗಳಿಗೆ ಸೇರಿದ ಜಮೀನು, ಮಠಮಾನ್ಯ, ದೇವಸ್ಥಾನ ಮತ್ತು ಪರಿಶಿಷ್ಟರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದು, ಕೋಮುವಾದಕ್ಕೆ ಪ್ರಚೋದನೆ ಕೊಡುತ್ತಿದ್ದಾರೆ. ಇಂಥವರನ್ನು ಸಚಿವ ಸಂಪುಟದಿಂದ ಕೂಡಲೇ ಕೈಬಿಡದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇವಸ್ಥಾನ, ಮಠಮಾನ್ಯ ಮತ್ತು ಪರಿಶಿಷ್ಟರ ಮತ್ತು ಹಿಂದುಳಿದ ವರ್ಗದವರ ಜಮೀನನ್ನು ವಕ್ಫ್ ಬೋರ್ಡ್‌ಗೆ ಸ್ವಾಧೀನಪಡಿಸಿಕೊಂಡು ಅಲ್ಪಸಂಖ್ಯಾತ ಮತಗಳ ತುಷ್ಟೀಕರಣಕ್ಕೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟ ಹಿನ್ನೆಲೆಯಲ್ಲಿ ಮತ್ತು ಮೂರು ಉಪ ಚುನಾವಣೆಯ ಮೇಲೆ ಪರಿಣಾಮ ಬೀರುವ ಕಾರಣ ಹೆದರಿಕೊಂಡು ಸಿದ್ದರಾಮಯ್ಯ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಸೂಚನೆ ನೀಡಿದ್ದಾರೆ ಎಂದರು.