For the best experience, open
https://m.samyuktakarnataka.in
on your mobile browser.

ಕೋಮು ಸೌಹಾರ್ದತೆ ಕದಡುವ ಕೆಲಸವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ

04:12 PM Sep 12, 2024 IST | Samyukta Karnataka
ಕೋಮು ಸೌಹಾರ್ದತೆ ಕದಡುವ ಕೆಲಸವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ

ನಾಗಮಂಗಲ: ನಿನ್ನೆ ರಾತ್ರಿ ನಾಗಮಂಗಲ ಪಟ್ಟಣದಲ್ಲಿ ನಡೆದ ಘಟನಾ ಸ್ಥಳಕ್ಕೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರು ಭೇಟಿ ನೀಡಿ, ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು..
ಪ್ರತ್ಯಕ್ಷದರ್ಶಿಗಳು, ಅಂಗಡಿ ಮುಂಗಟ್ಟುಗಳು ಹಾಗೂ ಗ್ಯಾರೇಜ್‌ಗಳ ಮಾಲಿಕರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸಲಾಗುವುದು. ಈ ಘಟನೆ ನಡೆದಿರುವುದು ದುರದೃಷ್ಟಕರ. ಆಕಸ್ಮಿಕವಾಗಿ ನಡೆದ ಘಟನೆ, ನಂತರ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿದೆ ಎಂದು ಚಲುವರಾಯಸ್ವಾಮಿಯವರು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 54ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಪಾಲ್ಗೊಳ್ಳದ ಅಮಾಯಕರ ಬಂಧನವಾಗಿದ್ದಲ್ಲಿ ಸಿಸಿಟಿವಿ ಪರಿಶೀಲಿಸಿ, ಖಚಿತಪಡಿಸಿಕೊಂಡು ಬಿಡುಗಡೆ ಮಾಡಲು ಸೂಚಿಸಲಾಗಿದೆ. ನೈಜ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಸಚಿವರು ತಿಳಿಸಿದರು. ಕೋಮು ಸೌಹಾರ್ದತೆಯನ್ನು ಕದಡುವ ಕೆಲಸವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ಜನರಿಗೆ ಶಾಂತಿ ಸೌಹಾರ್ದತೆಯಿಂದ ಬದುಕುವ ವಾತಾವರಣ ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಘಟನೆಯಲ್ಲಿ ಹಾನಿಗೊಳಗಾದ ಅಂಗಡಿಗಳು ಹಾಗೂ ಮನೆಗಳ ನಷ್ಟವನ್ನು ಅಂದಾಜಿಸಲಾಗುತ್ತಿದೆ. ಅವುಗಳ ಮಾಲೀಕರಿಗೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು. ಇದು ನನ್ನ ಸ್ವ ಕ್ಷೇತ್ರ, ನಷ್ಟ ಅನುಭವಿಸಿದವರಿಗೆ ವೈಯಕ್ತಿಕವಾಗಿಯೂ ಪರಿಹಾರ ಒದಗಿಸುವುದಾಗಿ ಕೃಷಿ ಸಚಿವರು ತಿಳಿಸಿದರು. ಮುಂದಿನ ಎರಡು ದಿನಗಳಲ್ಲಿ ಮಂಡ್ಯ ಜಿಲ್ಲಾಧಿಕಾರಿ, ಹಾಗೂ ಎಸ್.ಪಿ. ನೇತ್ರತ್ವದಲ್ಲಿ ಶಾಂತಿ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಈ ಘಟನೆಯನ್ನು ರಾಜಕೀಯವಾಗಿ ಬಳಸದೇ ವಿರೋಧ ಪಕ್ಷಗಳು ಸಹ ಜವಾಬ್ದಾರಿಯಿಂದ ವರ್ತಿಸಬೇಕು. ಹಾಗೆಯೇ, ಮಾಧ್ಯಮಗಳು ನಮ್ಮೊಂದಿಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು‌‌‌‌. ಅಮಾಯಕರನ್ನು ಬಂಧಿಸಲಾಗಿದೆ ಬಿಡುಗಡೆಗೊಳಿಸಿ ಎಂದು ನಾಗಮಂಗಲ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಎರಡೂ ಕೋಮಿನ ಜನರನ್ನು ಭೇಟಿ ಮಾಡಿ ಮಾತನಾಡಿದ ಸಚಿವರು. ಈ ವರಗೆ 54 ಮಂದಿ ಬಂಧಿಸಲಾಗಿದೆ . ನೈಜ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆ ಇಲ್ಲ ಅದರೆ ಘಟನೆಯಲ್ಲಿ ಪಾಲ್ಗೊಳದ ಅಮಾಯಕರ ಬಂಧನವಾಗಿದ್ದಲ್ಲಿ ಸಿ.ಸಿ ಟಿ.ವಿ ಪರಿಶೀಲಿಸಿ ಖಚಿತ ಪಡಿಸಿಕೊಂಡು ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು

Tags :