ಕೋಯ್ನಾ ಜಲಾಶಯದಿಂದ ೧೦,೫೯೬ ಕ್ಯೂಸೆಕ್ ನೀರು ಬಿಡುಗಡೆ
ಯಕ್ಸಂಬಾ: ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಜೊತೆಗೆ ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದರಿಂದ ತಾಲೂಕಿನ ಪಂಚನದಿಗಳಿಗೆ ೨೮,೮೫೫ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿ, ವೇದಗಂಗಾ ನದಿಯ ಕುನ್ನುರ-ಬಾರವಾಡ ಬ್ಯಾರೇಜ್ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ದೂಧಗಂಗಾ ನದಿಗೆ ಸುಳಕುಡ ಬ್ಯಾರೇಜ ಮುಖಾಂತರ ೫,೯೮೦ ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ ಮುಖಾಂತರ ೨೨೮೭೫, ಹೀಗೆ ಒಟ್ಟು ೨೮,೮೫೫ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ರಾಜ್ಯದ ಗಡಿಭಾಗದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆ ಸುರಿಯುತ್ತಿರುವದರಿಂದ ಹಾಗೂ ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ದೂಧಗಂಗಾ ಮತ್ತು ಕೃಷ್ಣಾ ಸೇರಿದಂತೆ ಉಪನದಿಗೆ ಒಳಹರಿವು ಹೆಚ್ಚಾಗಿದ್ದರಿಂದ ನದಿ ತೀರದ ಜನತೆಯಲ್ಲಿ ಅತಂಕ ಹೆಚ್ಚಿಸಿದೆ.
ಇಂದು ಬಾರವಾಡ-ಬಾರವಾಡ ಬ್ಯಾರೇಜ್ ಜಲಾವೃತಗೊಂಡಿದ್ದು, ಸಿದ್ನಾಳ-ಹುನ್ನರಗಿ, ಭೋಜ-ಶಿವಾಪೂರವಾಡಿ ಮತ್ತು ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಬ್ಯಾರೇಜಗಳು ಇನ್ನು ಮುಳುಗಡೆಯಾಗಿಲ್ಲಾ, ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ಥವೆಸ್ಥಗೊಂಡಿದೆ, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಕೋಯ್ನಾ ಜಲಾಶಯದಿಂದ ೧೦,೫೯೬ ಕ್ಯೂಸೆಕ್ ನೀರು ಬಿಡುಗಡೆ:
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೋಯ್ನಾ ಜಲಾಶಯದಿಂದ ಇಂದು ಮುಂಜಾನೆ ೫ ಗಂಟೆಗೆ ೧೦,೫೯೬ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಕೋಯ್ನಾ ಜಲಾಶಯದ ಅಭಿಯಂತರರಾದ ಅರುಣ ಯಲಗುದ್ರಿ ತಿಳಿಸಿದ್ದಾರೆ.