ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕೋವಿಡ್ ತನಿಖೆಗೆ ಎಸ್‌ಐಟಿ ರಾಜಕೀಯ ದಾಳ ಆಗದಿರಲಿ

02:24 AM Nov 16, 2024 IST | Samyukta Karnataka

ನ್ಯಾ. ಮೈಕೆಲ್ ಡಿ.ಕುನ್ಹಾ ಆಯೋಗದ ಮಧ್ಯಂತರ ವರದಿ ಹಿನ್ನೆಲೆಯಲ್ಲಿ, ನಿಕಟಪೂರ್ವ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಕೊರೊನಾ ಹಗರಣ' ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿರುವ ಸರ್ಕಾರದ ಕ್ರಮ ಸರಿಯಾದುದಾಗಿದೆ. ಕೋವಿಡ್ ಅಕ್ರಮದ ಬಗ್ಗೆ ಸಾಕಷ್ಟು ಟೀಕೆ-ಪ್ರತಿ ಟೀಕೆಗಳು ಹಾಗೂ ಸಮರ್ಥನೆಗಳನ್ನು ಕೇಳಿರುವ ನಾಡಿಗೆ ಸತ್ಯವನ್ನು ತಿಳಿದುಕೊಳ್ಳುವ ಹಕ್ಕಿದೆ. ಈ ವಿಶ್ವ ಸಾಂಕ್ರಾಮಿಕ, ಪ್ಲೇಗ್ ನಂತರ ನಾಡು ಕಂಡು ಅನುಭವಿಸಿದ ಬಹುದೊಡ್ಡ ಮಾನವೀಯ ಆಘಾತ ಮತ್ತು ಆಧುನಿಕ ಸಮಾಜ ಸಾಕ್ಷಿಯಾದ ಅತ್ಯಂತ ಮಾರಕ ರೋಗವಾಗಿತ್ತು. ಕೊರೊನಾ ವೇಳೆ ಜನರ ಬದುಕಗಳೊಂದಿಗೆ ಯಾರೇ ಆಟವಾಡಿದರೂ ಅಕ್ಷಮ್ಯ. ಹೀಗಿರುವಾಗ ಅಂದಿನ ಆಡಳಿತಾರೂಢ ಸರ್ಕಾರದ ಮೇಲೆಯೇ ಭ್ರಷ್ಟಾಚಾರದ ಆರೋಪ ಎದುರಾಗಿರುವುದರಿಂದ ಖಂಡಿತ ತನಿಖೆ ಆಗಬೇಕಾದದ್ದೇ. ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಕುನ್ಹಾ ಆಯೋಗ ಮಧ್ಯಂತರ ವರದಿ ಸಲ್ಲಿಸಿ, ಅಕ್ರಮಗಳು ಆಗಿವೆ ಎಂಬುದನ್ನು ಬೆಳಕಿಗೆ ತರುತ್ತಿದ್ದಂತೆಯೇ ರಾಜ್ಯದಲ್ಲಿ ಸಾರ್ವಜನಿಕ ಚರ್ಚೆಗಳು ಆರಂಭವಾಗಿದ್ದವು. ಜೊತೆಗೆ ವರದಿಯ ಫಲಶ್ರುತಿ ಏನು ಎನ್ನುವ ಪ್ರಶ್ನೆಯೂ ಉದ್ಭವಿಸಿತ್ತು. ವರದಿ ಪರಿಶೀಲಿಸಿ ಮುಂದಿನ ಕ್ರಮದ ಶಿಫಾರಸು ಮಾಡುವುದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸರ್ಕಾರ ಸಂಪುಟ ಉಪ ಸಮಿತಿ ನೇಮಕ ಮಾಡಿತ್ತು. ಈ ಸಮಿತಿಯ ಸಲಹೆಯ ಅನ್ವಯ ಸರ್ಕಾರ ಈಗ ಎಸ್‌ಐಟಿ ತನಿಖೆಯ ನಿರ್ಧಾರ ಮಾಡಿರುವುದು ತಪ್ಪಿತಸ್ಥರ ವಿರುದ್ಧ ಕ್ರಮವಾಗುವ ನಿರೀಕ್ಷೆ ಮೂಡುವಂತೆ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಜನರಲ್ಲಿದ್ದ ಭಯವನ್ನೇ ಬಂಡವಾಳ ಮಾಡಿಕೊಳ್ಳಲಾಗಿತ್ತು. ಈ ಅಭದ್ರತೆಯನ್ನು ಕೆಲವರು ತಮಗೆ ಲಾಭದಾಯಕವನ್ನಾಗಿಸಿಕೊಂಡರು ಎಂಬುದಾಗಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹೇಳಿ, ತನಿಖೆ ನಡೆಸಲು ನಿರ್ಧರಿಸಿತ್ತು. ತಮ್ಮ ಸರ್ಕಾರದ್ದೇನೂ ತಪ್ಪಿಲ್ಲ; ಸಂಕಷ್ಟದ ಸಮಯದಲ್ಲಿ ಜನರ ಜೀವ ಉಳಿಸಿದ್ದೇವೆ ಎಂದು ಪ್ರತಿಪಕ್ಷ ಬಿಜೆಪಿ ಸವಾಲಿನ ರೂಪದ ಮಾತುಗಳನ್ನಾಡಿದೆ. ಹೀಗಿದ್ದ ಮೇಲೆ ಎಸ್‌ಐಟಿ ರಾಜಕೀಯಪ್ರೇರಿತ ಎಂಬ ಟೀಕೆ ಬದಿಗಿಟ್ಟು ಈಗ ವಾಸ್ತವವನ್ನು ಎದುರಿಸಬೇಕು. ಕೊರೊನಾ ಸಂದರ್ಭದಲ್ಲಿ ಪ್ರಾಣವಾಯು ದೊರೆಯದೇ ಸಾಕಷ್ಟು ಜನ ಮೃತಪಟ್ಟಿದ್ದರು. ಆಕ್ಸಿಜನ್ ಕಿಟ್‌ಗಳು, ವೆಂಟಿಲೇಟರ್ ಸಿಲಿಂಡರ್‌ಗಳು, ರೆಮಿಡಿಸ್ವಿಯರ್ ಸೇರಿದಂತೆ ಕೆಲ ಪ್ರಮುಖ ಔಷಧಗಳು ಹಾಗೂ ಪಿಪಿಇ ಕಿಟ್‌ಗಳಲ್ಲಿ ಬ್ರಹ್ಮಾಂಡ ಅವ್ಯವಹಾರ ನಡೆದಿರುವ ಟೀಕೆಗಳು ಆರಂಭದಿಂದಲೇ ಕೇಳಿಬರುತ್ತಿದ್ದವು. ಆಸ್ಪತ್ರೆಗಳಲ್ಲಿ ದಾಖಲಾಗಲು ಆಸ್ಪತ್ರೆಗಳು ದೊರೆಯದೇಬೆಡ್ ಬ್ಲಾಕಿಂಗ್ ದಂಧೆ' ನಡೆದಿತ್ತು. ಹಾಸಿಗೆ ಕೊಡಿಸುವ ದಲ್ಲಾಳಿಗಳು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಹುಟ್ಟಿಕೊಂಡಿದ್ದರು. ಕೊರೊನಾ ಸೋಂಕು ಪರೀಕ್ಷೆಯ ಪ್ರಯೋಗಾಲಯಗಳು ಮತ್ತು ವರದಿಗಳ ವಿಷಯದಲ್ಲಿ ಆರೋಪಗಳಿದ್ದವು. ಇದು ಸಾರ್ವಜನಿಕ ಆಕ್ರೋಶವನ್ನು ಭುಗಿಲೆಬ್ಬಿಸಿತ್ತು.
ಸಾರ್ವತ್ರಿಕ ಸಂಕಟಕ್ಕೆ ಇಂಬು ನೀಡುವಂತೆ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂಬುದಾಗಿ ನ್ಯಾ. ಮೈಕೆಲ್ ಡಿ.ಕುನ್ಹಾ ನೀಡಿರುವ ಮಧ್ಯಂತರ ವರದಿಯಲ್ಲಿ ಹೇಳಿದ್ದಾರೆ. ೧೮೧ ಕೋಟಿ ರೂಪಾಯಿ ವೆಚ್ಚದ ಮಲ್ಟಿ ಪ್ಯಾರಾ ಮೀಟರ್ ಖರೀದಿಯಲ್ಲಿ ೧೨೪.೭೮ ಕೋಟಿ; ಅತ್ಯುನ್ನತ ಶ್ರೇಣಿಯ ಮಾನಿಟರ್‌ಗಳ ಅನಗತ್ಯ ಖರೀದಿಯಲ್ಲಿ ೯೧.೮೭ ಕೋಟಿ; ಇದಲ್ಲದೇ ಕಳಪೆ ಮಾನಿಟರ್‌ಗಳ ಖರೀದಿಯಲ್ಲಿ ೧೯.೨೭ ಕೋಟಿ; ಉಪಕರಣ ಪೂರೈಕೆಯಲ್ಲಿ ವಿಳಂಬ ಮಾಡಿದ್ದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ದಂಡ ವಿಧಿಸದೇ ೧೩.೧೬ ಕೋಟಿ ಅಕ್ರಮ ನಡೆದಿದೆ ಎಂಬುದು ಮಧ್ಯಂತರ ವರದಿಯ ಪ್ರಮುಖ ಅಂಶಗಳಲ್ಲಿ ಒಂದು. ಇದಲ್ಲದೇ ೩೩೦ರಿಂದ ೪೦೦ ದರ ಬೆಲೆ ಬಾಳುವ ಪಿಪಿಇ ಕಿಟ್‌ಗಳ ಬದಲಿಗೆ ವಿದೇಶಿ ಕಂಪನಿಗಳಿಂದ ೨,೧೧೭ ರೂಪಾಯಿಗೆ ಪಿಪಿಇ ಕಿಟ್ ಖರೀದಿಸಲಾಗಿದೆ. ಮಾನ್ಯತೆಯೇ ಇಲ್ಲದ ನಾಲ್ಕು ಪ್ರಯೋಗಾಲಯಗಳಿಗೆ ೪.೨೮ ಕೋಟಿ ಅಕ್ರಮ ಪಾವತಿ ಮಾಡಲಾಗಿದೆ; ಸಾವಿನ ಲೆಕ್ಕಾಚಾರದಲ್ಲಿ ಅಪರಾ ತಪರಾ ಆಗಿದೆ ಎಂಬುದಾಗಿ ಆಯೋಗ ತಿಳಿಸಿತ್ತು.
ಹೀಗೆ ಇನ್ನೂ ಹಲವಾರು ಅಕ್ರಮಗಳ ಕುರಿತು ವರದಿಯಲ್ಲಿ ವಿವರಿಸಲಾಗಿದ್ದ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿ ಸಲಹೆ ನೀಡಿರುವುದರಿಂದ ಎಸ್‌ಐಟಿ ರಚನೆಯಾಗಿರುವುದು ಸೂಕ್ತವಾಗಿದೆ. ಪ್ರಕ್ರಿಯೆಯ ಪ್ರಕಾರ ದೂರು ದಾಖಲಿಸಿಕೊಂಡು ಎಸ್‌ಐಟಿ ತನಿಖೆ ಆರಂಭವಾಗಲಿರುವುದರಿಂದ ಕೋವಿಡ್ ಹಗರಣಗಳ ತನಿಖೆ ಕಾನೂನಾತ್ಮಕ ಚೌಕಟ್ಟಿನಲ್ಲಿ ಸಾಗಲು ದಾರಿಯಾದಂತಾಗಿದೆ.
ಆದರೆ ಎಸ್‌ಐಟಿ ತನಿಖೆಯು ಎದುರಾಳಿಗಳನ್ನು ಮೌನ'ವಾಗಿಸುವ ಅಸ್ತ್ರವಾಗದಿರಲಿ ಮತ್ತು ರಾಜಕೀಯ ದಾಳವಾಗಿ ಬಳಕೆ ಮಾಡುವ ಕಾರ್ಯ ನಡೆಯದಿರಲಿ.ಇಡಿ ಅಸ್ತ್ರಕ್ಕೆ ಎಸ್‌ಐಟಿ ಪ್ರತ್ಯಸ್ತ್ರ' ಎಂಬಂತೆ ಈ ಹೆಜ್ಜೆಯನ್ನು ಇರಿಸಿದ್ದರೆ ಜನತೆಗೆ ಇನ್ನಷ್ಟು ಆಘಾತವಾಗಲಿದೆ. ಇದೇ ರೀತಿ ತನ್ನಿಂದ ಸಾಧ್ಯವಿಲ್ಲ ಎಂಬುದಾಗಿ ಸಿಬಿಐ ತಿಳಿಸಿದ ಗಣಿ ಅಕ್ರಮ ಪ್ರಕರಣಗಳ ತನಿಖೆಗೂ ಎಸ್‌ಐಟಿ ರಚಿಸಲು ಸರ್ಕಾರ ನಿರ್ಧರಿಸಿರುವುದು ತಪ್ಪಲ್ಲ. ಆದರೆ ಇದೂ ಕೂಡ ರಾಜಕೀಯ ಬೇಟೆಯಾಗಬಾರದು. ಗಣಿ ಧೂಳಿನಲ್ಲಿ ನಾಡಿನ ರಾಜಕೀಯ ಈಗಾಗಲೇ ಸಾಕಷ್ಟು ಬೇಳೆ ಬೇಯಿಸಿಕೊಂಡಿದೆ. ಆದ್ದರಿಂದ ಪ್ರಸಕ್ತ ಎಸ್‌ಐಟಿ ತನಿಖೆ ಓರ್ವ ವ್ಯಕ್ತಿ ಅಥವಾ ಕೆಲವೇ ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಯದಿರಲಿ. ಜನಜೀವನ, ಪರಿಸರ ಮತ್ತು ಪ್ರಕೃತಿಯ ಆರೋಗ್ಯದ ಮೇಲೆ ಗಣಿ ಧೂಳು ಮಾಡಿರುವ ಹಾನಿಗೆ ಈ ತನಿಖೆ ಸಮಾಧಾನಕರ ಉತ್ತರ ನೀಡುವಂತಾಗಬೇಕಿದೆ.

Next Article