For the best experience, open
https://m.samyuktakarnataka.in
on your mobile browser.

ಕೋವಿಡ್ ರೂಪಾಂತರಿ ತಳಿ ಜೆಎನ್ ೧ ಅಪಾಯಕಾರಿಯಲ್ಲ

07:52 PM Dec 22, 2023 IST | Samyukta Karnataka
ಕೋವಿಡ್ ರೂಪಾಂತರಿ ತಳಿ ಜೆಎನ್ ೧ ಅಪಾಯಕಾರಿಯಲ್ಲ

ಮಂಗಳೂರು: ಕೋವಿಡ್ ರೂಪಾಂತರಿ ತಳಿ ಜೆಎನ್ ೧ ಅಪಾಯಕಾರಿಯಲ್ಲ. ಯಾರಿಗೂ ಹೆಚ್ಚಿನ ಅಪಾಯವಿಲ್ಲ. ಈ ಬಗ್ಗೆ ಮೆಡಿಕಲ್ ತಾಂತ್ರಿಕ ಸಮಿತಿಗಳು ಈಗಾಗಲೇ ಹೇಳಿಕೆ ನೀಡಿದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಒಳಿತು. ಸಂಪುಟ ಉಪಸಮಿತಿ ತಜ್ಞರ ವರದಿ ಪಡೆದು ನಿರ್ಧಾರ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದ.ಕ. ಜಿಲ್ಲೆಯ ಕೋವಿಡ್ ಸ್ಥಿತಿಗತಿ ಪರಿಶೀಲಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿ, ಯಾವುದೇ ಸಂದರ್ಭ ಎದುರಾದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಕ್ಯಾಬಿನೆಟ್ ಉಪಸಮಿತಿ ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಲಿದೆ. ಕೇಂದ್ರ ಹಾಗೂ ಬೇರೆ ರಾಜ್ಯಗಳ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಲಿದ್ದೇವೆ. ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸುವ ನಿರ್ಧಾರ ಮಾಡಿಲ್ಲ. ಇಲ್ಲಿಯವರೆಗೆ ಎಲ್ಲವೂ ಸಹಜ ಸ್ಥಿತಿಯಲ್ಲಿ ಇರಲಿದೆ. ಕ್ರಿಸ್ಮಸ್, ನ್ಯೂಈಯರ್ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದರು.
ತಜ್ಞರ ತಂಡ ಸೂಚಿಸಿದ್ದಲ್ಲಿ ಮಾತ್ರ ವ್ಯಾಕ್ಸಿನೇಷನ್ ಮಾಡಲಾಗುತ್ತದೆ. ದ.ಕ. ಜಿಲ್ಲೆ ಕೇರಳ ಗಡಿಭಾಗವಾಗಿದ್ದರಿಂದ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದರು.
ರಾಜ್ಯದಲ್ಲಿ ಸದ್ಯ ಐದು ಸಾವಿರ, ದ.ಕ.ಜಿಲ್ಲೆಯಲ್ಲಿ ೩೩೦ ಹಾಗೂ ಬೆಂಗಳೂರಿನಲ್ಲಿ ೧,೫೦೦ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಗಡಿ ಜಿಲ್ಲೆಯಾಗಿದ್ದರಿಂದ ಮಂಗಳೂರು, ಮೈಸೂರಿಗೆ ಹೆಚ್ಚು ನೀಡಲಾಗಿದೆ.
ವೆಂಟಿಲೇಟರ್ ಕಾರ್ಯನಿರ್ವಹಣೆ ಪರೀಕ್ಷೆ ಬಗ್ಗೆ ಕ್ರಮ ವಹಿಸುತ್ತೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಪೂರೈಕೆ ಕೆಲಸ ಆಗುತ್ತಿದೆ. ಕೆಲವು ಕಡೆ ಸ್ವಲ್ಪ ತಡ ಆಗಿದೆ, ಎಲ್ಲವೂ ಶೀಘ್ರ ಆಗಲಿದೆ.ಹೆಚ್ಚು ಟೆಸ್ಟಿಂಗ್ ಮಾಡುವ ಅಗತ್ಯ ಇದೆಯೇ ಎಂದು ನಿರ್ಧಾರ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ಗೈಡ್‌ಲೈನ್ಸ್‌ಗಳ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಕ್ರಿಸ್ ಮಸ್, ಹೊಸ ವರ್ಷಕ್ಕೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ. ಆದರೆ ಜನ ಸೇರಿದ್ದಲ್ಲಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸಲಹೆ ಕೊಡ್ತೇವೆ. ಯಾವುದೂ ಕಡ್ಡಾಯವಲ್ಲ, ನಾವು ಯಾವುದೇ ನಿರ್ಬಂಧ ವಿಧಿಸಲ್ಲ.ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಈ ಉಪತಳಿ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.