ಕ್ಯಾಂಟೀನ್ ಸ್ಥಳಾಂತರಕ್ಕೆ ಮುತಾಲಿಕ ಹರ್ಷ
ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿನ ಸ್ಮಶಾನದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರಗೊಂಡ ಬೆನ್ನಲ್ಲೇ ನಗರದ ಅಂಬೇಡ್ಕರ್ ವೃತ್ತದಲ್ಲಿ ಶ್ರೀರಾಮ ಸೇನೆಯ ವತಿಯಿಂದ ಗುರುವಾರ ವಿಜಯೋತ್ಸವ ಆಚರಿಸಲಾಯಿತು.
ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ವಿರೋಧಿಸಿ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಗೆ ಮಣಿದ ಹು-ಧಾ ಮಹಾನಗರ ಪಾಲಿಕೆಯು ಕ್ಯಾಂಟೀನ್ ನಿರ್ಮಾಣಕ್ಕೆ ಬೇರೆ ಸ್ಥಳ ನೀಡುವುದಾಗಿ ಭರವಸೆ ನೀಡಿದೆ. ಹೀಗಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಬಳಿಕ ಮಾತನಾಡಿದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್, ಮಂಟೂರು ರಸ್ತೆಯ ಸ್ಮಶಾನದಲ್ಲಿ ಕೆಲವರು ಅಧಿಕಾರದ ಸೊಕ್ಕಿನಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದ್ದರು. ಸ್ಮಶಾನದ ಗೋಡೆ ಒಡೆದು ರಾತ್ರೋ ರಾತ್ರಿ ಕ್ಯಾಂಟೀನ್ ಕಟ್ಟಡ ನಿರ್ಮಾಣ ಮಾಡಿದ್ದರು. ಹಿಂದೂ ರುದ್ರಭೂಮಿ ಪವಿತ್ರವಾದದ್ದು. ಅದನ್ನು ಅಪವಿತ್ರ ಮಾಡಲು ಹೊರಟಿದ್ದರು. ಇದು ಶಾಸಕ ಪ್ರಸಾದ ಅಬ್ಬಯ್ಯ ಅವರ ಮಾನಸಿಕ ಸ್ಥಿತಿಯನ್ನು ತಿಳಿಸಿಕೊಡುತ್ತದೆ ಎಂದು ಗುಡುಗಿದರು.
ನನ್ನ ಬಗ್ಗೆ ಪ್ರಸಾದ ಅಬ್ಬಯ್ಯ ಏಕ ವಚನದಲ್ಲಿ ಮಾತನಾಡಿದ್ದಾರೆ. ನಾನೂ ಮಾತನಾಡಬಹುದು. ಆದರೆ, ಅದು ನಮ್ಮ ಸಂಸ್ಕೃತಿ ಅಲ್ಲ. ವಿವಾದಿತ ಇಂದಿರಾ ಕ್ಯಾಂಟೀನ್ ಸ್ಥಳಾಂತರಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಸ್ಮಶಾನದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.