For the best experience, open
https://m.samyuktakarnataka.in
on your mobile browser.

ಕ್ಯಾನ್ಸರ್‌ಗೆ ದೇಶದಲ್ಲಿ 9 ಲಕ್ಷ ಜನ ಸಾವು

02:45 AM Feb 03, 2024 IST | Samyukta Karnataka
ಕ್ಯಾನ್ಸರ್‌ಗೆ ದೇಶದಲ್ಲಿ 9 ಲಕ್ಷ ಜನ ಸಾವು

ನವದೆಹಲಿ: ಭಾರತದಲ್ಲಿ ೧೪.೧ ಲಕ್ಷ ಜನರಿಗೆ ಹೊಸದಾಗಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದ್ದು ೯.೧ ಲಕ್ಷ ಜನ ನಿಧನರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ. ಪುರುಷರಲ್ಲಿ ತುಟಿ, ಗಂಟಲು ಮತ್ತು ಶ್ವಾಸಕೋಶದ ಕ್ಯಾನ್ಸರ್ ಸಂಖ್ಯೆ ಜಾಸ್ತಿ ಇದ್ದು, ಶೇ.೧೫.೬ ಜನರಲ್ಲಿ ಇದು ಕಾಣಿಸಿಕೊಂಡಿದೆ. ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠಂದ ಕ್ಯಾನ್ಸರ್ ಅಧಿಕ. ಶೇ.೨೭ ರಷ್ಟು ಪ್ರಕರಣಗಳು ಇದಕ್ಕೆ ಸಂಬಂಧಿಸಿವೆ. ರೋಗ ಬಂದು ೫ ವರ್ಷ ಬದುಕಿದವರು ೩೨.೬ ಲಕ್ಷ ಜನ ಮಾತ್ರ.
ಜಾಗತಿಕ ಮಟ್ಟದಲ್ಲಿ ೨ ಕೋಟಿ ಜನರಲ್ಲಿ ಹೊಸದಾಗಿ ಈ ರೋಗ ಕಾಣಿಸಿಕೊಂಡಿದೆ. ಪ್ರತಿವರ್ಷ ೯೭ ಲಕ್ಷ ಜನ ನಿಧನರಾಗುತ್ತಿದ್ದಾರೆ. ೫ ವರ್ಷಗಳಲ್ಲಿ ೫.೩ ಕೋಟಿ ಜನ ಬಲಿಯಾಗಿದ್ದಾರೆ. ೮ ಜನ ಗಂಡಸರಲ್ಲಿ ಒಬ್ಬರು ಹಾಗೂ ೧೨ರಲ್ಲಿ ಒಬ್ಬ ಮಹಿಳೆಯರು ಸಾಯುತ್ತಿದ್ದಾರೆ. ೭೫ ವರ್ಷದೊಳಗೆ ಇರುವವರಲ್ಲಿ ಶೇ. ೧೦.೬ ರಷ್ಟು ಜನ ಕ್ಯಾನ್ಸರ್‌ನಿಂದ ನಿಧನರಾಗುವ ಅಪಾಯವಿದೆ. ಒಟ್ಟು ೧೧೫ ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಚಿಕಿತ್ಸೆ ನೀಡಿದರೂ ಗುಣಮುಖರಾಗದವರನ್ನು ನೋಡಿಕೊಳ್ಳಲು ಬಹುತೇಕ ದೇಶಗಳಲ್ಲಿ ಉತ್ತಮ ವ್ಯವಸ್ಥೆ ಇಲ್ಲ. ಇದಕ್ಕೆ ಸರ್ಕಾರ ಮತ್ತು ಸಮಾಜದ ಉದಾರ ನೆರವು ಬೇಕು. ಕ್ಯಾನ್ಸರ್ ರೋಗಿಗಳನ್ನು ನೋಡಿಕೊಳ್ಳುವುದಕ್ಕೆ ಬಹಳ ತಾಳ್ಮೆ ಬೇಕು ಎಂದು ವರದಿ ತಿಳಿಸಿದೆ.
ಜಗತ್ತಿನ ಒಟ್ಟು ೧೧೫ ದೇಶಗಳಲ್ಲಿ ಶೇ.೩೯ ರಷ್ಟು ದೇಶಗಳು ಮಾತ್ರ ರೋಗಿಗಳಿಗೆ ಉತ್ತಮ ಚಿಕಿತ್ಸಾ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದು, ಆ ಪೈಕಿ ಶೇ.೨೮ ದೇಶಗಳಲ್ಲಿ ಮಾತ್ರ ಇದು ಅನುಷ್ಠಾನಗೊಂಡಿದೆ. ಒಟ್ಟು ೧೮೫ ದೇಶಗಳಲ್ಲಿ ೩೬ ರೀತಿಯ ಕ್ಯಾನ್ಸರ್ ಕಂಡು ಬಂದಿದೆ.
ವಿವಿಧ ರೀತಿಯ ಕ್ಯಾನ್ಸರ್‌ಗಳಲ್ಲಿ ಶ್ವಾಸಕೋಶದ ತೊಂದರೆಯೇ ಹೆಚ್ಚು. ಇದರಲ್ಲೇ ಸಾಯುವವರ ಸಂಖ್ಯೆಯೂ ಹೆಚ್ಚು. ಇದಕ್ಕೆ ತಂಬಾಕು ಬಳಕೆ ಅಧಿಕಗೊಂಡಿದ್ದು ಕಾರಣ ಎಂದು ತಜ್ಞರು ಹೇಳಿದ್ದಾರೆ. ಮಹಿಳೆಯರಿಗೆ ಸ್ತನದ ಕ್ಯಾನ್ಸರ್ ಪ್ರಮಾಣ ಹೆಚ್ಚು. ಗರ್ಭಕಂಠ ಕ್ಯಾನ್ಸರ್ ಜಗತ್ತಿನಲ್ಲಿ ೮ ನೇ ಸ್ಥಾನ ಪಡೆದಿದೆ.
೨೫ ದೇಶಗಳ ಮಹಿಳೆಯರಲ್ಲಿ ಇದು ಅಧಿಕ. ಮಹಿಳೆಯರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರೆ ಇದನ್ನು ಹೋಗಲಾಡಿಸಬಹುದು. ಆಗಸ್ಟ್ ೨೦೨೦ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಗರ್ಭಕಂಠ ಕ್ಯಾನ್ಸರ್ ನಿವಾರಣೆಗೆ ದೊಡ್ಡ ಆಂದೋಲನವನ್ನೇ ಆರಂಭಿಸಿದೆ.ಹೆಣ್ಣುಮಕ್ಕಳು ೧೫ ವರ್ಷಕ್ಕೆ ಬರುವುದಕ್ಕೆ ಮೊದಲೇ ಲಸಿಕೆ ನೀಡಿ ರಕ್ಷಿಸಬಹುದು.