ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

೩೬ನೇ ಒಲಿಂಪಿಕ್ಸ್‌ಗೆ ಭಾರತದ ಆತಿಥ್ಯ?

02:30 AM Feb 06, 2024 IST | Samyukta Karnataka

ನವದೆಹಲಿ: ೨೦೩೬ರ ಒಲಿಂಪಿಕ್ಸ್ ಮತ್ತು ೨೦೩೦ರ ಯೂತ್ ಒಲಿಂಪಿಕ್ಸ್ ಆತಿಥ್ಯ ವಹಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಜೊತೆ ಮಾತುಕತೆ ಆರಂಭಿಸಲಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿಟಿ ಉಷಾ ಹೇಳಿದ್ದಾರೆ. ಒಲಿಂಪಿಕ್ ಬಿಡ್‌ಗಾಗಿ ಐಒಸಿಯೊಂದಿಗೆ ಮಾತುಕತೆ ಆರಂಭಿಸಿರುವುದಾಗಿ ಐಒಎ ಒಪ್ಪಿಕೊಂಡಿರುವುದು ಇದೇ ಮೊದಲು.
ಇದೇ ವರ್ಷದ ಜುಲೈ ೨೬ ರಿಂದ ಆಗಸ್ಟ್ ೧೧ರ ವರೆಗೆ ಪ್ಯಾರಿಸ್‌ನಲ್ಲಿ ೩೩ನೇ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದ್ದು, ಈಗಾಗಲೇ ೨೦೨೮ರಲ್ಲಿ ನಡೆಯುವ ಕೂಟಕ್ಕೆ ಅಮೆರಿಕದ ಲಾಸ್‌ಏಂಜಲಿಸ್ ಹಾಗೂ ೨೦೩೨ರ ಕೂಟಕ್ಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ಆತಿಥ್ಯ ದೊರೆತಿದೆ.
೨೦೩೬ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯಕ್ಕಾಗಿ ಭಾರತ ಬಿಡ್ ಸಲ್ಲಿಸಲಿದೆ ಎನ್ನುವ ಮಾತುಗಳು ಕಳೆದ ವರ್ಷದಿಂದಲೇ ಕೇಳಿ ಬರುತ್ತಿದೆ. ಕಳೆದ ವರ್ಷ ಅಕ್ಟೋಬರ್ ೧೪ರಂದು ಮುಂಬೈನಲ್ಲಿ ನಡೆದ ಐಒಸಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ೨೦೩೬ರ ಕ್ರೀಡಾಕೂಟದ ಆತಿಥ್ಯ ವಹಿಸುವುದಾಗಿ ಘೋಷಿಸಿದ್ದರು. ೪೦ ವರ್ಷಗಳ ನಂತರ ಭಾರತದಲ್ಲಿ ನಡೆಯುವ ಐಒಸಿಯ ಸಭೆ ಇದಾಗಿತ್ತು. ಈ ಹಿಂದೆ ೧೯೮೩ ನವದೆಹಲಿ ಐಒಸಿ ೮೬ನೇ ಆವೃತ್ತಿಯ ಅಧಿವೇಶನವನ್ನು ನಡೆಸಿತ್ತು.
"ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ನಾವೆಲ್ಲ ಕಾಯುತ್ತಿದ್ದೇವೆ. ನಮ್ಮ ದೇಶದಲ್ಲಿ ಒಲಿಂಪಿಕ್ಸ್ ನಡೆಯಬೇಕು ಎಂಬುದು ೧೪೦ ಕೋಟಿ ಜನರ ಕನಸಾಗಿದೆ. ೨೦೩೬ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತದಲ್ಲಿಯೇ ಆಯೋಜಿಸಲು ಸಕಲ ಪ್ರಯತ್ನ ಮಾಡಲಾಗುವುದು" ಎಂದು ಮೋದಿ ಹೇಳಿದ್ದಾರೆ. ಆ ಮೂಲಕ ೨೦೩೬ರ ಒಲಿಂಪಿಕ್ಸ್ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವುದನ್ನು ಪ್ರಧಾನಿ ಮೋದಿ ದೃಢಪಡಿಸಿದ್ದರು. ಇದೀಗ ಐಒಸಿ ಜತೆ ಔಪಚಾರಿಕ ಮಾತುಕತೆ ಪ್ರಾರಂಭಿಸಿದೆ ಎಂದು ಐಒಎ ಅಧಿಕೃತ ಹೇಳಿಕೆ ನೀಡುವ ಮೂಲಕ ಭಾರತವೂ ಪ್ರಪ್ರಥಮ ಬಾರಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಳ್ಳುವ ಕಾಲ ಸನ್ನಿಹಿತವಾದಂತೆ ತೋರುತ್ತಿದೆ.
ಕೆಲವು ವರದಿಗಳ ಪ್ರಕಾರ ಈಗಾಗಲೇ ಗುಜರಾತ್‌ನಲ್ಲಿ ೨೦೩೬ರ ಒಲಿಂಪಿಕ್ಸ್ ಕೂಟ ನಡೆಸುವ ಸಲುವಾಗಿ ಜಾಗವನ್ನು ಮೀಸಲಿರಿಸಿ ಕ್ರೀಡಾಂಗಣದ ಕೆಲಸ ಕಾರ್ಯಗಳು ಆರಂಭಗೊಂಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
೧೯೫೧, ೧೯೮೨ ರಲ್ಲಿ ದೆಹಲಿಯಲ್ಲಿ ಏಷ್ಯಾ ಕ್ರೀಡೆಗಳು ನಡೆದಿದ್ದವು. ಇದೇ ವೇದಿಕೆಯಲ್ಲಿ ೨೦೧೦ರಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಕೂಡ ನಡೆದಿವೆ. ಆದರೆ ೨೦೩೬ರಲ್ಲಿ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳು ಭಾರತಕ್ಕೆ ಸಿಕ್ಕರೆ ಈ ಕ್ರೀಡಾಕೂಟವನ್ನು ಗುಜರಾತ್‌ನಲ್ಲಿ ನಡೆಸುವುದಾಗಿ ಅನುರಾಗ್ ಠಾಕೂರ್ ಇತ್ತೀಚೆಗೆ ಹೇಳಿದ್ದರು.

Next Article