ಕ್ರೇಜಿ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಕಾರಣದಲ್ಲಿ ಹೊಸತನ್ನು ಮಾಡುವುದರಲ್ಲೇ ನಿರತರಾಗಿರುತ್ತಾರೆ. ಈಗ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಘೋಷಿಸಿದ್ದಾರೆ. ಇದಕ್ಕೆ ಕೊಟ್ಟ ಕಾರಣ ಜನರ ಆಶೀರ್ವಾದ ಪಡೆಯುವುದು ಎಂದು ಹೇಳಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಬಹುದಿತ್ತು. ಅಬಕಾರಿ ನೀತಿಯ ವಿರುದ್ಧ ಅಪಸ್ವರ ಕೇಳಿಬಂದಾಗಲೇ ರಾಜೀನಾಮೆ ನೀಡಿ ಚುನಾವಣೆ ಎದುರಿಸುವುದಾಗಿ ಹೇಳಿದ್ದರೆ ಪಕ್ಷದ ಮರ್ಯಾದೆಯೂ ಉಳಿಯುತ್ತಿತ್ತು. ಹಿಂದೆ ಹಲವು ಮುಖ್ಯಮಂತ್ರಿಗಳು ಆರೋಪ ಕೇಳಿ ಬಂದ ಕೂಡಲೇ ರಾಜೀನಾಮೆ ಸಲ್ಲಿಸಿ ಚುನಾವಣೆ ಎದುರಿಸಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ರೈಲ್ವೆ ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದರು. ಕೇಜ್ರಿವಾಲ್ ಇಂದಿನ ಕ್ರಮವನ್ನು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಕ್ರಮಕ್ಕೆ ಹೋಲಿಸಲು ಬರುವುದಿಲ್ಲ. ಶಾಸ್ತ್ರಿಯವರ ಕ್ರಮದಲ್ಲಿ ಕಪಟತೆ ಇರಲಿಲ್ಲ. ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿತ್ತು. ಆದರೆ ಈಗ ಕೇಜ್ರಿವಾಲ್ ರಾಜೀನಾಮೆ ರಾಜಕೀಯ ತಂತ್ರವಾಗಿ ಕಂಡು ಬಂದಲ್ಲಿ ಆಶ್ಚರ್ಯವಿಲ್ಲ. ಜೈಲಿನಲ್ಲಿದ್ದು ಚುನಾವಣೆಯಲ್ಲಿ ಗೆದ್ದವರು ಇದ್ದಾರೆ. ಮುಖ್ಯಮಂತ್ರಿಯಾಗಿ ಜೈಲಿಗೆ ಹೋಗಿಯೂ ರಾಜೀನಾಮೆ ಸಲ್ಲಿಸದ ಏಕೈಕ ವ್ಯಕ್ತಿ ಕೇಜ್ರಿವಾಲ್ ಮಾತ್ರ. ಅಂದು ನೈತಿಕತೆ ಬಾರದ ಪ್ರಶ್ನೆ ಇಂದು ಏಕೆ ಕಾಡಿತೋ ತಿಳಿಯದು. ಆಡಳಿತವನ್ನು ಜನರಿಗಾಗಿ ನಡೆಸಬೇಕು. ಯಾವುದೋ ಪಕ್ಷದ ವಿರುದ್ಧ ರಾಜಕೀಯ ನಡೆಸಲು ಜನ ಕೊಟ್ಟ ಅಧಿಕಾರವನ್ನು ಬಳಸಿಕೊಳ್ಳಬಾರದು. ಅರವಿಂದ ಕೇಜ್ರಿವಾಲ್ ವಿದ್ಯಾವಂತರು, ರಾಜಕೀಯ ಚಾಣಾಕ್ಷರು. ಅವರು ತಮ್ಮ ಕಸರತ್ತುಗಳ ಮೂಲಕ ಬೇರೆ ಪಕ್ಷಗಳಿಗೆ ಸೆಡ್ಡು ಹೊಡೆಯಬಹುದು. ಇದು ಯಾವುದೂ ಜನಪರ ಕಾಳಜಿಗೆ ಸಮಾನವಾಗುವುದಿಲ್ಲ. ಹೈಕೋರ್ಟ್, ಸುಪ್ರೀಂ ಕೋರ್ಟ್ ಕೇಜ್ರಿವಾಲ್ ವಿರುದ್ಧ ವಿಚಾರಣೆ ನಡೆಸುವಾಗ ಮುಖ್ಯಮಂತ್ರಿ ಪದವಿ ತ್ಯಜಿಸುವುದು ಬಿಡುವುದು ಅವರಿಗೆ ಸೇರಿದ್ದು ಎಂದು ಹೇಳಿದೆ. ಅಂದರೆ ಅದು ನೈತಿಕತೆಯ ಪ್ರಶ್ನೆ. ಮಾರ್ಚ್ ೨೧ ರಂದು ಕೇಜ್ರಿವಾಲ್ ಬಂಧನವಾಯಿತು. ಮೇ ೧೦ರಿಂದ ಜೂನ್ ೧ವರೆಗೆ ಚುನಾವಣೆಯಲ್ಲಿ ಪ್ರಚಾರ ಮಾಡಲು ನ್ಯಾಯಾಲಯವೇ ಜಾಮೀನು ನೀಡಿತು. ಜೂನ್ ೨ ರಿಂದ ಮತ್ತೆ ಜೈಲಿಗೆ ಹೋದರು. ಸೆಪ್ಟೆಂಬರ್ ೧೩ರಂದು ಜೈಲಿನಿಂದ ಬಿಡುಗಡೆಯಾದರು. ಈಗ ಅವರಿಗೆ ನೈತಿಕತೆ ಕಾಡುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿ. ಆಮ್ ಆದ್ಮಿ ಪಕ್ಷದ ಏಕೈಕ ನಾಯಕ ಆಗಿರುವುದರಿಂದ ಅವರು ದಿಢೀರ್ ನಿರ್ಧಾರಗಳನ್ನು ಕೈಗೊಳ್ಳಬಹುದು ಹಾಗೂ ಬದಲಿಸಬಹುದು. ಇದರ ರಾಜಕೀಯ ಪಕ್ಷಗಳಲ್ಲಿ ಈ ರೀತಿ ಮಾಡಲು ಅವಕಾಶ ಕೊಡುವುದಿಲ್ಲ. ಈಗ ವಿಧಾನಸಭೆಯನ್ನು ವಿಸರ್ಜಿಸುವಂತೆ ಕೋರಿಲ್ಲ. ಫೆಬ್ರವರಿಯಲ್ಲಿ ನಡೆಯಬೇಕಿರುವ ಚುನಾವಣೆಯನ್ನು ಮಹಾರಾಷ್ಟçದೊಂದಿಗೆ ಮೊದಲೇ ನಡೆಸಬಹುದು ಎಂದು ಹೇಳಿದ್ದಾರೆ. ವಿಧಾನಸಭೆ ವಿಸರ್ಜನೆಗೊಳ್ಳಬೇಕು. ಇಲ್ಲವೆ ಅವಧಿ ಮುಕ್ತಾಯಗೊಳ್ಳಬೇಕು. ಆಗ ಮಾತ್ರ ಚುನಾವಣೆ ಆಯೋಗ ಚುನಾವಣೆ ನಡೆಸಲು ಆಲೋಚಿಸಬಹುದು. ದೆಹಲಿ ಕೇಂದ್ರಾಡಳಿ ಪ್ರದೇಶವಾಗಿರುವುದರಿಂದ ಅದು ಬೇರೆ ರಾಜ್ಯಗಳ ರೀತಿ ಕೆಲಸ ಮಾಡಲು ಬರುವುದಿಲ್ಲ. ಅರವಿಂದ ಕೇಜ್ರಿವಾಲ್ ಲೋಕಪಾಲ ರಚನೆಗೆ ಒತ್ತಾಯಿಸಿ ಅಣ್ಣಾ ಹಜಾರೆ ಅವರ ಜತೆ ಹೋರಾಟ ನಡೆಸಿ ನಂತರ ಆಮ್ ಆದ್ಮಿ ಪಕ್ಷ ಕಟ್ಟಿ ಮುಖ್ಯಮಂತ್ರಿಯಾದವರು. ಈಗ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿ ಹೊರಬಂದಿದ್ದಾರೆ. ಈಗ ಜನರ ಮುಂದೆ ತಾನು ಸ್ವಚ್ಛ ಎಂದು ಸಾಬೀತುಪಡಿಸಬೇಕು. ಅದಕ್ಕೆ ತನಿಖೆ ನಡೆಯಬೇಕು. ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಕೊಡಬೇಕು. ಚುನಾವಣೆಯಲ್ಲಿ ಗೆಲ್ಲುವುದೇ ಮಾನದಂಡವಾಗುವುದಿಲ್ಲ. ಅವರು ತಮ್ಮ ಮೇಲಿರುವ ಆರೋಪವನ್ನು ಜನರ ಮುಂದಿಟ್ಟು ಅದಕ್ಕೆ ಜನಾದೇಶವನ್ನು ನೀಡುವಂತೆ ಕೋರಬೇಕು. ಆದರೂ ನಮ್ಮಲ್ಲಿ ನ್ಯಾಯಾಂಗ ಪ್ರಕ್ರಿಯೆ ನಿಲ್ಲುವುದಿಲ್ಲ. ನಮ್ಮಲ್ಲಿ ಚುನಾವಣೆ ಫಲಿತಾಂಶಕ್ಕೆ ಸೀಮಿತ ಅರ್ಥವಿದೆ. ಅದನ್ನು ಚಾರಿತ್ರ್ಯದ ಸರ್ಟಿಫಿಕೇಟ್ ಎಂದು ಪರಿಗಣಿಸಲು ಬರುವುದಿಲ್ಲ. ಜನಪ್ರತಿನಿಧಿಗಳಿಗಾಗಿ ಪ್ರತ್ಯೇಕ ನ್ಯಾಯಾಲಯ ರಚಿಸಲಾಗಿದೆ. ಅಲ್ಲಿ ವಿಚಾರಣೆ ಮುಂದುವರಿಯುತ್ತದೆ. ನಮ್ಮ ಕ್ರಿಮಿನಲ್ ಕಾಯ್ದೆ ಎಲ್ಲರಿಗೂ ಒಂದೇ ಮುಖ್ಯಮಂತ್ರಿಯಿಂದ ಹಿಡಿದು ಮಂಡಲ ಪಂಚಾಯ್ತಿ ಸದಸ್ಯರವರೆಗೆ ಎಲ್ಲರಿಗೂ ಅನ್ವಯವಾಗುತ್ತದೆ. ಚುನಾವಣೆಯಲ್ಲಿ ಗೆದ್ದರೂ ಮೊಕದ್ದಮೆಗಳನ್ನು ಕೈಬಿಡಲು ಬರುವುದಿಲ್ಲ. ಅಣ್ಣಾ ಹಜಾರೆ ಅರವಿಂದ ಕೇಜ್ರಿವಾಲ್ ರಾಜಕೀಯ ಪ್ರವೇಶಿಸುವುದನ್ನು ಒಪ್ಪಿರಲಿಲ್ಲ. ಇದು ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದಂತೆ.ಕೇಜ್ರಿವಾಲ್ ಅವರ ತೀರ್ಮಾನವನ್ನು ಅವರ ಪಕ್ಷ ಯಾವ ರೀತಿ ಸ್ವೀಕರಿಸುತ್ತದೆ ಎಂಬುದು ಮುಖ್ಯ.ಮಂಗಳವಾರ ಆಮ್ ಆದ್ಮಿ ಪಕ್ಷದ ಶಾಸಕರ ಸಭೆ ನಡೆಯುತ್ತದೆ ಅದರ ನಂತರ ಅವರು ಲೆಫ್ಟಿನೆಂಟ್ ಗರ‍್ನರ್ ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಕಾರ್ಯಕ್ರಮವಿದೆ. ಇದೆಲ್ಲವೂ ಜನರ ಗಮನಸೆಳೆಯುವ ತಂತ್ರ ಎಂದು ಹೇಳುವ ಅಗತ್ಯವಿಲ್ಲ.