ಕ್ರೇಜಿ ಬರ್ತ್‌ಡೇಗೆ ಜಡ್ಜ್‌ಮೆಂಟ್
ಗಣೇಶ್ ರಾಣೆಬೆನ್ನೂರು
ಪರಭಾಷೆಗಳಲ್ಲಿ ಕೋರ್ಟ್ ರೂಂ ಡ್ರಾಮ ಚಿತ್ರಗಳು ಉತ್ತಮ ಯಶಸ್ಸನ್ನು ಸಂಪಾದಿಸಿವೆಯಾದರೂ, ಕನ್ನಡದ ಮಟ್ಟಿಗೆ ಆ ಗಾಳಿ ಇನ್ನೂ ಬೀಸಿಲ್ಲ. ಬಂದದ್ದೇ ಕೆಲವೊಂದು. ಆದರೆ ಅದರ ಬಗ್ಗೆಯೂ ಅದೇಕೋ ಪ್ರೇಕ್ಷಕ
ಆಸಕ್ತಿ ತೋರಲಿಲ್ಲ. ಅದರ ನಡುವೆಯೂ ನ್ಯಾಯಾಲಯದಲ್ಲೇ ನಡೆಯುವ ಕಥೆಯೊಂದನ್ನು ಪ್ರೆಸೆಂಟ್ ಮಾಡಿ ಗೆದ್ದು ತೋರಿಸುವ ಹುಮ್ಮಸ್ಸಿನಲ್ಲಿ ಬಂದಿದೆ ದ ಜಡ್ಜ್‌ಮೆಂಟ್ ಚಿತ್ರತಂಡ.
ಕೋರ್ಟ್ ಕಲಾಪದ ಮೂಲಕವೇ ಆಸಕ್ತಿಕರ ಸಂಗತಿ- ಸತ್ಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಕೋರ್ಟ್ಗಳಲ್ಲಿ ನಡೆಯವ ವಾದ ಪ್ರತಿವಾದ, ವಕೀಲರ ತಯಾರಿ, ನ್ಯಾಯಾಧೀಶರ ಅವಲೋಕನ… ಈ ಎಲ್ಲಾ ಪ್ರಕ್ರಿಯೆಗಳನ್ನು ದ ಜಡ್ಜ್ಮೆಂಟ್ ಸಿನಿಮಾದಲ್ಲಿ ನೋಡಬಹುದಂತೆ. ಹಾಗಂತ ಈ ಸಿನಿಮಾ ಬೋರ್ ಹೊಡೆಸುವ ಮಾದರಿಯಲ್ಲಿಲ್ಲ. ಇದೊಂದು ಥ್ರಿಲ್ಲರ್ ಸಿನಿಮಾ ಅನ್ನುವುದು ಅವರ ವಿವರಣೆ.
ಕಳೆದ ವರ್ಷ ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಈ ಸಿನಿಮಾವನ್ನು ಸೆಟ್ಟೇರಿಸಲಾಗಿತ್ತು. ಕರೆಕ್ಟಾಗಿ ಒಂದು ವರ್ಷಕ್ಕೆ, ಅಂದರೆ ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಈ ಸಂತೋಷ ಚಿತ್ರತಂಡದವರಲ್ಲಿ ಎದ್ದು ಕಾಣುತ್ತಿತ್ತು. ಶರದ್ ನಾಡಗೌಡ, ರಾಮು ರಾಯಚೂರು, ವಿಶ್ವನಾಥ್ ಗುಪ್ತ, ರಾಜಶೇಖರ್ ಪಾಟೀಲ ಈ ಚಿತ್ರದ ನಿರ್ಮಾಪಕರು.
ನಟ ರವಿಚಂದ್ರನ್ ಈ ಚಿತ್ರದ ಪ್ರಮುಖ ಆಕರ್ಷಣೆ. ಇವರೊಂದಿಗೆ ದಿಗಂತ್, ಧನ್ಯ ರಾಮ್‌ಕುಮಾರ್, ಮೇಘನಾ ಗಾಂವ್ಕರ್, ಲಕ್ಷಿö್ಮ ಗೋಪಾಲಸ್ವಾಮಿ, ನಾಗಾಭರಣ, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಸೇರಿದಂತೆ ಖ್ಯಾತ ಕಲಾವಿದರ ದಂಡೇ ಇದೆ. ಕ್ರೇಜಿಸ್ಟಾರ್ ಬರ್ತ್ಡೇ ಆಸುಪಾಸಿನಲ್ಲೇ ಸಿನಿಮಾ ಬಿಡುಗಡೆ ಮಾಡಬೇಕೆಂಬುದು ತಂಡದ ಬಯಕೆ.
ಪಿಕೆಹೆಚ್ ದಾಸ್ ಈ ಚಿತ್ರಕ್ಕೆ ಕ್ಯಾಮೆರಾ ನಿರ್ವಹಣೆ ಮಾಡಿದ್ದು ಅನೂಪ್ ಸೀಳಿನ್ ಸಂಗೀತ ನಿರ್ದೇಶಕ. `ರವಿಚಂದ್ರನ್ ಸರ್ ಜೊತೆ ನಟಿಸುವ ಅವಕಾಶ ಸಿಕ್ಕಿತು. ತುಂಬಾ ಖುಷಿಯಾಗಿದೆ' ಎಂದರು ಮೇಘನಾ ಗಾಂವ್ಕರ್. ವಿಭಿನ್ನ ಸಿನಿಮಾದ ಭಾಗವಾಗಿರುವುದಕ್ಕೆ ನಟಿ ಧನ್ಯ ರಾಮ್‌ಕುಮಾರ್ ತೃಪ್ತಿ ವ್ಯಕ್ತಪಡಿಸಿದರು.