ಕ್ರೈಂ ತಡೆಯಲು ಪೊಲೀಸರಿಂದ ಗ್ರಾಮ ವಾಸ್ತವ್ಯ
ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ: ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ರೂಪಿಸುತ್ತಿರುವ ಹಿನ್ನಲೆ ಪೊಲೀಸರು ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪರಾಧ ಕಾನೂನುಗಳ ಬಗ್ಗೆ ಜನತೆಗೆ ತಿಳಿಹೇಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪ್ರತಿ ತಿಂಗಳು ಮೂರು ಗ್ರಾಮಗಳಲ್ಲಿ ವಾಸ್ತವ್ಯ ನಡೆಸುತ್ತಿರುವ ಪೊಲೀಸ್ ತಂಡ ಶನಿವಾರ ರಾತ್ರಿ ಯಲ್ಲಟ್ಟಿ ಹಾಗೂ ಯರಗಟ್ಟಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿದರು.
ಪಿಎಸ್‌ಐ ಶಾಂತಾ ಹಳ್ಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿವೆ. ಅದರಲ್ಲೂ ಕೊಲೆ, ಮನೆಗಳ್ಳತನ, ದರೋಡೆಗಳಂತಹ ಪ್ರಕರಣಗಳಿವೆ ಕಡಿವಾಣ ಹಾಕಿ, ಇದರ ಜೊತೆಗೆ ಅಲ್ಲಲ್ಲಿ ಸಣ್ಣಪುಟ್ಟ ಆಸ್ತಿ ವ್ಯಾಜ್ಯಗಳು ಕೂಡಾ ಹೆಚ್ಚಾಗಿರುವದರಿಂದ ಅನೇಕರು ತೊಂದರೆ ಅನುಭವಿಸುವುದು ಜನತೆ ಎಂದರು.
ಸಾಮಾನ್ಯವಾಗಿ ಪೊಲೀಸರೆಂದರೆ ಅನೇಕರಿಗೆ ಭಯವಿರುತ್ತದೆ. ಹೀಗಾಗಿ ಯಾರಿಂದಾದರೂ ತೊಂದರೆ ಆದರೂ ನ್ಯಾಯ ಕೇಳಲು ಅನೇಕರು ಪೊಲೀಸರ ಬಳಿ ಹೋಗಲು ಭಯಪಡುತ್ತಾರೆ. ಜನರಲ್ಲಿನ ಭಯವನ್ನು ದೂರ ಮಾಡುವುದರ ಜೊತೆಗೆ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಮೂಲಕ ಅಪರಾಧ ಕೃತ್ಯಗಳನ್ನು ತಡೆಯುವುದು ಗ್ರಾಮ ವಾಸ್ತವ್ಯದ ಉದ್ದೇಶವೆಂದು ಪಿಎಸ್‌ಐ ಶಾಂತಾ ಹಳ್ಳಿ ತಿಳಿಸಿದರು.
ಗ್ರಾಮ ವಾಸ್ತವ್ಯದಲ್ಲೇನು ?…
ಗ್ರಾಮದ ಸರ್ಕಾರಿ ಹಾಸ್ಟೇಲ್, ಶಾಲಾ-ಕಾಲೇಜು, ಅನಿವಾರ್ಯ ಪ್ರಸಂಗದಲ್ಲಿ ದೇವಾಲಯ ಆವರಣದಲ್ಲಿ ವಾಸ್ತವ್ಯ ಹೂಡುವ ಪೊಲೀಸ್ ಅಧಿಕಾರಿಗಳು, ಆ ಗ್ರಾಮದಲ್ಲಿನ ಮನೆ ಮನೆಗೆ ಹೋಗಿ ಕಾನೂನಿನ ಬಗ್ಗೆ ಅರಿವು ಮೂಡಿಸುತ್ತಾರೆ. ಗ್ರಾಮದಲ್ಲಿನ ಜನರ ಜೊತೆ ಸೇರಿ ಸಭೆಯನ್ನು ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡುತ್ತಿದ್ದಾರೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ.
ಜನ ಮೆಚ್ಚುಗೆ…
ಗ್ರಾಮೀಣ ಭಾಗದ ಜನರು ಇನ್ನೂ ಕೂಡಾ ಪೊಲೀಸರೆಂದರೆ ಭಯ. ಗ್ರಾಮ ವಾಸ್ತವ್ಯದ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ನಿಮ್ಮೊಂದಿಗೆ ನಾವಿದ್ದೇವೆಂಬ ಅಭಯ ನೀಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ಬಗ್ಗೆ ಸಂತಸ ತಂದಿದೆ.