For the best experience, open
https://m.samyuktakarnataka.in
on your mobile browser.

ಕ್ರೈಸ್ತ ಬಂಧುಗಳಿಂದ ಗಣಪನಿಗೆ ವಿಶೇಷ ಪೂಜೆ

07:40 PM Sep 09, 2024 IST | Samyukta Karnataka
ಕ್ರೈಸ್ತ ಬಂಧುಗಳಿಂದ ಗಣಪನಿಗೆ ವಿಶೇಷ ಪೂಜೆ

ಮಂಗಳೂರು: ಸೌಹಾರ್ದತೆಯ ಕಾರ್ಯಕ್ರಮವೊಂದಕ್ಕೆ ನಗರದ ಸಂಘನಿಕೇತನದಲ್ಲಿ ಸೋಮವಾರ ನಡೆದ ಕಾರ್ಯಕ್ರಮ ಸಾಕ್ಷಿಯಾಗಿದೆ. ಇಲ್ಲಿ ೭೭ನೆಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯೂ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು ೨೦೧೪ರಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿಯೂ ಈ ವೇದಿಕೆಯ ಸದಸ್ಯರು ಸಂಘನಿಕೇತನಕ್ಕೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ಣಾಟಕ ಬ್ಯಾಂಕಿನ ಎಜಿಎಂ ಜೇನ್ ಮರಿಯಾ ಸಲ್ಡಾನಾ ಅವರ ನೇತೃತ್ವದಲ್ಲಿ ಕ್ರೈಸತ ಬಾಂಧವರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸಂಪಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೇರೊ, ಬಾಲಗಂಗಾಧರನಾಥ್ ತಿಲಕರ ಆಶಯದಂತೆ ಪ್ರತಿ ಮನೆಮನೆಗಳಲ್ಲಿ, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಯಿಂದ ಭಾರತೀಯ ಸಮಾಜ ಒಗ್ಗೂಡಲು ಸಾಧ್ಯ ಎಂಬ ಪರಿಕಲ್ಪನೆಯಲ್ಲಿ ಇಂದು ಗಣೇಶೋತ್ಸವದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗುತ್ತಿದೆ. ಕರಾವಳಿಯಲ್ಲಿ ಕೋಮುಸೌಹಾರ್ದತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದ್ದು, ಸಮಾನತೆ, ರಾಷ್ಟ್ರೀಯತೆ ಹಾಗೂ ಸಾಮರಸ್ಯಕ್ಕಾಗಿ ಈ ಬೇಟಿ. ಪ್ರತೀ ಬಾರಿಯೂ ಸಂಘನಿಕೇತನಕ್ಕೆ ಭೆಟಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ, ನಮ್ಮ ಬೇಟಿಗೆ ಇಲ್ಲಿ ಬೇದಬಾವವಿಲ್ಲದೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆ ಎಂದರು.

ಸನ್ಮಾನ: ಈ ವೇಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕ್ರೈಸ್ತ ಬಾಂಧವರಿಗೆ ಪ್ರಸಾದ ವಿತರಿಸಲಾಯಿತು. ಪ್ರತೀ ವರ್ಷ ತೆನೆಹಬ್ಬಕ್ಕೆ ಹಿಂದೂಗಳಿಗೆ ಉಚಿತವಾಗಿ ತೆನೆ ಒದಗಿಸುವ ಹಾಗೂ ಗಣಪತಿ ವಿಸರ್ಜನೆಗೆ ಹಲವಾರು ಬೋಟುಗಳನ್ನು ಒದಗಿಸುವ ಸಾಮಾಜಿಕ ಕಾರ್ಯಕರ್ತ ಹಾಗೂ ಕೃಷಿಕ ಅರ್ಬರ್ಟ್ ಡಿಸೋಜ ಜೆಪ್ಪು ಅವರನ್ನು ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಲೀನಾ ಮೊಂತೆರೋ, ಕ್ರೆಡೈಅಧ್ಯಕ್ಷ ವಿನೋದ್ ಪಿಂಟೊ, ಉದ್ಯಮಿಗಳಾದ ಪ್ರಶಾಂತ್ ಸನಿಲ್, ಗ್ರಗರಿ ಡಿಸೋಜ, ನವೀನ್ ಕಾರ್ಡೋಜಾ, ನವೀನ್ ಫೆರ್ನಾಂಡಿಸ್ ಕುಲಶೇಖರ, ಉಪನ್ಯಾಸಕ ಡಾ. ಜೆಫ್ರಿ ರೋಡ್ರಿಗಸ್, ರೋಟರಿ ಲ್ಯಾನಿ ಪಿಂಟೊ, ವಕೀಲ ಝೀಟಾ ಮೊರಸ್, ಸಾಮಾಜಿಕ ಕಾರ್ಯಕರ್ತ ಜುಲಿಯೆಟ್ ಡಿಕುನ, ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಗಜಾನನ ಪೈ, ಸುರೇಶ್ ಕಾಮತ್, ಯು.ನಂದನ ಮಲ್ಯ, ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಗರೋಡಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.