ಕ್ವಾಡ್ ಒಪ್ಪಂದ ಫಲ ಉನ್ನತ ತಂತ್ರಜ್ಞಾನದತ್ತ ದಾಪುಗಾಲು
ಪ್ರಧಾನಿ ಮೋದಿ ಮೂರು ದಿನ ಅಮೆರಿಕಕ್ಕೆ ಭೇಟಿ ನೀಡಿರುವುದು ಇಡೀ ಜಗತ್ತಿನ ಗಮನಸೆಳೆದಿದೆ. ಅಮೆರಿಕವೂ ಸೇರಿದಂತೆ ಪ್ರಮುಖ ದೇಶಗಳು ಭಾರತದ ಹೆಜ್ಜೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಇದರಿಂದ ಭಾರತದ ಘನತೆ-ಗೌರವ ಹೆಚ್ಚಿಸಿದೆ. ಕ್ವಾಡ್ ಒಪ್ಪಂದಗಳು ಈಗ ಮಹತ್ವ ಸ್ಥಾನ ಪಡೆಯುತ್ತಿವೆ. ಅದರಲ್ಲೂ ವೈಜ್ಞಾನಿಕ ಬೆಳವಣಿಗೆಯಲ್ಲಿ ಈ ಒಪ್ಪಂದಗಳು ಪ್ರಮುಖ ಪಾತ್ರವಹಿಸುತ್ತಿವೆ. ಈ ಒಪ್ಪಂದಗಳು ರಾಜಕೀಯದಿಂದ ದೂರ ಇರುವುದು ಗಮನಾರ್ಹ. ಈಗ ನಾವು ವಿದೇಶಿ ಕಂಪನಿಗಳಿಗೆ ನಮ್ಮಲ್ಲಿ ಬಂಡವಾಳ ಹೂಡಲು ಮಾತ್ರ ಕರೆಯುತ್ತಿಲ್ಲ. ವಿದೇಶಿ ಕಂಪನಿಗಳು ಇಲ್ಲೇ ತಯಾರಿಸಿ ನಮ್ಮ ದೇಶಕ್ಕೂ ಕೊಡುವುದಲ್ಲದೆ ಇತರೆ ದೇಶಗಳಿಗೆ ಇಲ್ಲಿಂದಲೇ ನೇರವಾಗಿ ರಫ್ತು ಮಾಡಬೇಕು. ಆಗ ನಮ್ಮಲ್ಲಿ ತಯಾರಾದ ವಸ್ತುಗಳಿಗೆ ಜಾಗತಿಕ ಮನ್ನಣೆ ಸಿಗುತ್ತದೆ. ಈಗ ಅಮೆರಿಕದಲ್ಲಿ ಮೋದಿ ಹಲವು ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಇವುಗಳ ಪ್ರಭಾವ ೨೦೨೫ರಿಂದಲೇ ಕಂಡುಬರಲಿದೆ. ಇದುವರೆಗೆ ನಾವು ವಿದೇಶಿ ಕಂಪನಿಗಳಿಗೆ ಜಾಗ ಕೊಡುತ್ತಿದ್ದೆವು. ಆದರೆ ಅವರು ತಮ್ಮ ತಂತ್ರಜ್ಞಾನ ಕೊಡುತ್ತಿರಲಿಲ್ಲ. ಈಗ ಹಾಗಿಲ್ಲ ವಿದೇಶಿ ಕಂಪನಿಗಳು ಕಾರಿನಿಂದ ಹಿಡಿದು ವಿಮಾನದವರೆಗೆ ಯಾವುದೇ ತಯಾರು ಮಾಡಿದರೂ ನಮಗೂ ಕೊಡಬೇಕು. ಅದೇರೀತಿ ವಿದೇಶಗಳಿಗೆ ಇದೇ ವಿಮಾನಗಳನ್ನು ರಫ್ತು ಮಾಡಬೇಕು. ಆಗ ನಮ್ಮ ಬಳಕೆಯಲ್ಲಿರುವ ವಸ್ತುಗಳೂ ಜಾಗತಿಕ ಮಟ್ಟವನ್ನು ಹೊಂದಿರುತ್ತದೆ.
ಈಗ ಮೋದಿ-ಬೈಡನ್ ಮಾಡಿಕೊಂಡಿರುವ ಒಪ್ಪಂದದಂತೆ ರಕ್ಷಣೆ, ವೈದ್ಯಕೀಯ, ಟೆಲಿ ಕಮ್ಯೂನಿಕೇಷನ್ ರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಭಾರತದಲ್ಲಿ ನಡೆಯಲಿದೆ. ಇಲ್ಲಿಯ ಸಂಶೋಧನಾ ಕೇಂದ್ರಗಳ ಗುಣಮಟ್ಟ ಜಾಗತಿಕವಾಗಬೇಕಿದೆ. ರಷ್ಯಾ, ಚೀನಾದಲ್ಲಿ ತಯಾರಾದ ವಸ್ತುಗಳನ್ನು ಈಗ ಬೇರೆ ದೇಶಗಳು ಬಳಸುತ್ತಿವೆ. ಮುಂದಿನ ವರ್ಷದಿಂದ ಭಾರತದಲ್ಲಿ ತಯಾರಾದ ವಸ್ತುಗಳು ವಿದೇಶಗಳಿಗೆ ರವಾನೆಯಾಗಲಿದೆ. ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಅಮೆರಿಕದ ನೆರವು ಸಿಗಲಿದೆ. ಎರಡು ಸರ್ಕಾರಗಳ ನಡುವೆ ಒಪ್ಪಂದವಾದಲ್ಲಿ ಆಯಾ ದೇಶದ ಖಾಸಗಿ ಕಂಪನಿಗಳು ನಿರ್ಭೀತಿಯಿಂದ ಕೆಲಸ ಮಾಡಬಹುದು. ಆಗ ಅಂತಾರಾಷ್ಟ್ರೀಯ ನಿರ್ಬಂಧಗಳು ಅನ್ವಯವಾಗುವುದಿಲ್ಲ. ಅಲ್ಲದೆ ಆಯಾ ದೇಶಗಳಲ್ಲಿ ಸರ್ಕಾರಗಳು ಬದಲಾದರೂ ಒಪ್ಪಂದಗಳು ಹಾಗೆ ಮುಂದುವರಿಯುತ್ತವೆ. ಈಗ ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (ಎಐ) ಕ್ವಾಟಂಮ್ ಕಂಟ್ಯೂಟಿಂಗ್, ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಹೆಚ್ಚಿನ ಕೊಡು-ಕೊಡುಗೆ ನಡೆಯಬೇಕು. ಅಮೆರಿಕದ ರಾಷ್ಟ್ರೀಯ ಸಂಶೋಧನ ಕೇಂದ್ರಕ್ಕೆ ಸರಿಸಮಾನವಾಗಿ ನಮ್ಮ ರಾಷ್ಟ್ರೀಯ ಸಂಶೋಧನಾ ಕೇಂದ್ರ ಬೆಳೆಯಬೇಕಿದೆ. ರಷ್ಯಾ, ಜಪಾನ್, ಯೂರೋಪ್, ಚೀನಾ ಮತ್ತು ಅಮೆರಿಕದಲ್ಲಿ ನಮ್ಮ ಸಂಶೋಧನೆಗೆ ಮನ್ನಣೆ ಸಿಗಬೇಕು. ಈಗ ನಾವು ಪ್ರಾಥಮಿಕ ಹಂತದಲ್ಲಿದ್ದೇವೆ. ಎರಡನೇ ಹಂತಕ್ಕೆ ಹೋಗಲು ಬೇಕಾದ ಮಾನವ ಸಂಪನ್ಮೂಲ ಇದೆ. ಕೌಶಲ್ಯ ಇಲ್ಲ. ಅದಕ್ಕೆ ಹೆಚ್ಚಿನ ಬಂಡವಾಳ ಬೇಕು. ಅದನ್ನು ಅಮೆರಿಕ ಈಗ ಭಾರತದಲ್ಲಿ ಹೂಡಿಕೆ ಮಾಡಲು ಒಪ್ಪಿದೆ. ನಮ್ಮ ಟಾಟಾ ಸಂಸ್ಥೆಯೊಂದಿಗೆ ಕೆಲಸ ಮಾಡಲು ಹಿಂದೆ ವಿದೇಶಿ ಕಂಪನಿಗಳು ಒಪ್ಪಿರಲಿಲ್ಲ. ಈಗ ವಿಮಾನಗಳ ತಯಾರಿಕೆಗೆ ಕೈಜೋಡಿಸಲು ಮುಂದೆ ಬಂದಿವೆ. ಇದು ಈಗ ಬಂದಿರುವ ಬದಲಾವಣೆ. ಹಿಂದೆ ಚೆನ್ನೈನಲ್ಲಿದ್ದ ಫೋರ್ಡ್ ಕಂಪನಿಯನ್ನು ಮುಚ್ಚಲಾಗಿತ್ತು. ಈಗ ಮತ್ತೆ ಆರಂಭಿಸಿ ವಿದೇಶಕ್ಕೆ ರವಾನಿಸುವ ವಾಹನಗಳನ್ನು ಇಲ್ಲೇ ತಯಾರಿಸಲು ಮುಂದೆ ಬಂದಿವೆ.
ಈ ಬದಲಾವಣೆ ನಮ್ಮ ತಂತ್ರಜ್ಞಾನ ಮತ್ತು ವಿಜ್ಞಾನಿಗಳಿಗೆ ಅರ್ಥವಾಗಿದೆ. ಮೋದಿ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ ಅಮೆರಿಕದ ಪ್ರಮುಖ ಕಂಪನಿಗಳ ಸಿಇಓ ಜತೆ ಸಂವಾದ ನಡೆಸಿದ್ದಾರೆ. ನಾವು ತಂತ್ರಜ್ಞಾನದಲ್ಲೂ ರಷ್ಯಾ, ಅಮೆರಿಕ, ಯೂರೋಪ್, ಚೀನಾ, ಜಪಾನ್‌ಗಳಿಗೆ ಸರಿಸಮಾನವಾಗಿರಬೇಕು. ನಮ್ಮಲ್ಲಿ ನೂರಾರು ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಅವುಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗಬೇಕು. ಇಲ್ಲಿ ನಡೆಯುವ ಸಂಶೋಧನೆಗೆ ಪ್ರಮುಖ ದೇಶಗಳು ಕಿವಿಗೊಡಬೇಕು. ಅದಕ್ಕೆ ಬೇಕಾದ ಉನ್ನತ ಮಟ್ಟದ ತಂತ್ರಜ್ಞಾನ ಪಡೆಯುವುದು ಮುಖ್ಯ.