ಕ್ವಿಂಟಲ್ ಕೊಬ್ಬರಿಗೆ ೧೩,೫೦೦ ಬೆಂಬಲ ಬೆಲೆ
ಬೆಂಗಳೂರು: ರಾಜ್ಯದಲ್ಲಿ ಸಂಕಷ್ಟದಲ್ಲಿ ರುವ ಕೊಬ್ಬರಿ ಬೆಳೆಗಾರರ ನೆರವಿಗೆ ಧಾವಿಸಿರುವ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೩,೫೦೦ ರೂಪಾಯಿ ಬೆಂಬಲ ಬೆಲೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ರೈತರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಯನ್ವಯ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೨,೦೦೦ ರೂಪಾಯಿ ದೊರೆಯುತ್ತಿದ್ದು ಇದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ೧೫೦೦ ರೂಪಾಯಿ ಸೇರಿಸಿ ಒಟ್ಟು ೧೩,೫೦೦ ಕೋಟಿ ರೂಪಾಯಿ ನೀಡಲು ತೀರ್ಮಾನಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸಹಕಾರ ಇಲಾಖೆ ೯೩.೭೩ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ವಯ ಪ್ರತಿ ಕ್ಷಿಂಟಾಲ್‌ಗೆ ೧೨,೦೦೦ ರೂಪಾಯಿ ಬೆಂಬಲ ಬೆಲೆ ದೊರೆಯಲಿದೆ. ಇದೇ ವೇಳೆ ೨೦೨೨-೨೩ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ೧೨೫೦ ರೂಪಾಯಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ೨೫೦ ರೂಪಾಯಿ ಸೇರಿಸಿ ಒಟ್ಟು ೧೫೦೦ ರೂಪಾಯಿಯನ್ನು ರಾಜ್ಯ ಸರ್ಕಾರದ ಪರವಾಗಿ ಬೆಳಗಾರರಿಗೆ ನೀಡಲಾಗುತ್ತದೆ. ಈ ಸಂಬಂಧ ೯೩,೭೩ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ಕೃಷಿ ಮಾರಾಟ ಮಂಡಳಿಗೆ ಮಂಜೂರಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.