For the best experience, open
https://m.samyuktakarnataka.in
on your mobile browser.

ಕ್ಷಮಾಗುಣ ಅಧ್ಯಾತ್ಮಿಕ ಔನ್ನತ್ಯದ ಆರಂಭಿಕ ಹೆಜ್ಜೆ

03:00 AM Apr 16, 2024 IST | Samyukta Karnataka
ಕ್ಷಮಾಗುಣ ಅಧ್ಯಾತ್ಮಿಕ ಔನ್ನತ್ಯದ ಆರಂಭಿಕ ಹೆಜ್ಜೆ

ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲರ‍್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ

ಈ ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೇ..? ಈ ಪ್ರಪಂಚಕ್ಕೆ ಏನಾದರೂ ಅರ್ಥವಿದೆಯೇ..? ಈ ಜೀವಿಗಳ ಮತ್ತು ಪ್ರಪಂಚಗಳ ಸಂಬಂಧವೇನು..? ನಮಗೆ ಗೋಚರವಾಗದೆ ಇರುವುದು ಇಲ್ಲಿ ಏನಾದರೂ ಇದೆಯೇ? ಹಾಗಿದ್ದರೆ ಏನದು? ಅದು ನಮ್ಮ ಜ್ಞಾನಶಕ್ತಿಗೆ ಮೀರಿದ್ದುದೋ..? ಏನು..? ಡಾ. ಡಿ.ವಿ.ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾವಿಸಿರುವ ವಿಚಾರಗಳು ಬಹುಶಃ ಸಹಸ್ರಾರು ವರ್ಷಗಳಿಂದಲೂ ಮನುಷ್ಯನಲ್ಲಿ ಮೂಡಿಬರುತ್ತಿರುವ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಉತ್ತರವನ್ನು ಪಡೆಯಬೇಕೆಂಬ ಮನುಷ್ಯನ ತುಡಿತವನ್ನು ಪ್ರತಿನಿಧಿಸುತ್ತಿದೆ. ನಿರಂತರವಾಗಿ ನಡೆಸಿಕೊಂಡು ಬಂದಿರುವ ವೈಜ್ಞಾನಿಕ ಸಂಶೋಧನೆಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತಿವೆ.
ನಾವು ಬಹುಆಯಾಮಗಳ ವಿಶ್ವದಲ್ಲಿ ವಾಸಿಸುತ್ತಿದ್ದೇವೆ. ಇದು ವಿವಿಧ ಲೋಕಗಳು ಮತ್ತು ಬ್ರಹ್ಮಾಂಡಗಳ ನಡುವಿನ ಪರಸ್ಪರ ಸಂಬಂಧದಿಂದ ನಿರೂಪಿಸಲ್ಪಟ್ಟಿದೆ. ಆಧುನಿಕ ಭೌತಶಾಸ್ತ್ರವು ಮಾನವ ಕಪ್ಪುಸುರಂಗದ ಮೂಲಕ ಐದನೇ ಆಯಾಮವನ್ನು ಪ್ರವೇಶಿಸಬಹುದು; ಬಿಳಿಬೆಳಕಿನ ಸುರಂಗದ ಮೂಲಕ ಹಾದುಹೋಗುತ್ತಾ ಭೂತ, ವರ್ತಮಾನ, ಭವಿಷ್ಯದ ಅಥವಾ ಇನ್ನೊಂದು ಸಮಾನಾಂತರ ಬ್ರಹ್ಮಾಂಡಕ್ಕೆ ಪ್ರವೇಶಿಸಬಹುದು ಎಂಬಿತ್ಯಾದಿ ಹಲವಾರು ವಿಚಾರಗಳನ್ನು ನಮ್ಮ ಮುಂದಿಡುವ ಕಾರ್ಯದಲ್ಲಿ ಯಶಸ್ವಿಯಾಗುತ್ತಿವೆ. ಈ ಆಯಾಮಗಳನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಕೆಲವು ಸಂಪರ್ಕಬಿಂದುಗಳು (ಕತ್ತಲು-ಬೆಳಕಿನ ಸುರಂಗ, ನಕ್ಷತ್ರದ್ವಾರ ಇತ್ಯಾದಿ) ಅಸ್ತಿತ್ವದಲ್ಲಿವೆ. ಆತ್ಮಮಾರ್ಗದರ್ಶಿಗಳು (ಸ್ಪಿರಿಟ್‌ಗೈಡ್ಸ್) ಈ ಸಂಪರ್ಕಬಿಂದುಗಳನ್ನು ತಮ್ಮ ಪ್ರಯಾಣದ ಒಂದು ಮಾಧ್ಯಮವನ್ನಾಗಿ ಬಳಸುತ್ತಾರೆ. ತನ್ನ ಸುಪ್ತಪ್ರಜ್ಞೆಯ ಮೂಲಕ ಮಾನವ ಕೂಡಾ ಅಕ್ಷರಶಃ ಇದೇ ರೀತಿಯ ಪ್ರಯಾಣವನ್ನು (ಸಾವಿನ ಸಮೀಪದ ಅನುಭವದ ಮೂಲಕ, ದೇಹಾತೀತ ಪ್ರಯಾಣದ ಮೂಲಕ) ಮಾಡಲು ಸಾಧ್ಯವಿದೆಯೆಂದು ಅನುಭವಗಳು ತೋರಿಸಿಕೊಟ್ಟಿವೆ. ಭೌತಿಕಲೋಕದ ಆಚೆಗೆ ಸೂಕ್ಷ್ಮಲೋಕ (ಆಸ್ಟ್ರಲ್), ಕಾರಣಲೋಕ (ಕಾಸಲ್), ಮನೋಲೋಕ (ಮೆಂಟಲ್), ಅಭೌತಲೋಕ (ಎಥೆರಿಕ್), ಆತ್ಮಲೋಕ (ಸೋಲ್‌ಪ್ಲೇನ್) ಎಂಬ ವಿವಿಧ ಆಯಾಮಗಳಿವೆ ಎಂಬುದನ್ನೂ ವಿಜ್ಞಾನವು ಗುರುತಿಸಿದೆ. ಆ ಆಂತರಿಕ ವಾಸ್ತವವು ಪ್ರಾಚೀನ ಮನುಷ್ಯನಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡಿತ್ತು. ಆದರೆ ಆಧುನಿಕ ಯುಗದಲ್ಲಿ ನಾವು ಈ ನೈಸರ್ಗಿಕ ಸಾಮರ್ಥ್ಯದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದೇವೆ.
ಯಾವುದೇ ಮನುಷ್ಯ ತನ್ನ ಒಳಗಿನ ಅನಿಸಿಕೆಗಳನ್ನೆಲ್ಲಾ ಪೂರ್ತಿಯಾಗಿ ತೆರೆದಿಟ್ಟು ಯಾರೂ ತೋರಿಸುವುದಿಲ್ಲ. ಒಳಗಿನ ಆಳಗಳನ್ನು ನೋಡುವುದಾದರೂ ಹೇಗೆ? ಮನುಷ್ಯನಿಗೆ ನಾಲ್ಕು ಮುಖಗಳಿರುತ್ತವೆ ಎಂಬುದು ಪ್ರಾಜ್ಞರ ನುಡಿ. ಜಗತ್ತಿಗೆ ತೋರಿಸುವುದಕ್ಕೊಂದು; ಮನೆಯಲ್ಲಿರುವ ತನ್ನವರಿಗಾಗಿ ಇನ್ನೊಂದು; ಚೆಲುವಿನ ಅರಸುವಿಕೆಗೆ ಮತ್ತೊಂದು; ತನ್ನ ಅಂತರಾತ್ಮನಿಗೆ ತೋರಿಸುವುದಕ್ಕೊಂದು. ನಾವು ಮನಸ್ಸಿನಲ್ಲಿ ಎಷ್ಟು ವಿಧವಾಗಿ ಭಾವಿಸಿಕೊಳ್ಳುತ್ತೇವೆಯೋ ಅಷ್ಟೂ ಬಗೆಯ ಮುಖಗಳು ಮಾನವನಿಗಿವೆ! ನಮ್ಮಿಂದ ಜಗತ್ತಿಗೆ ಏನು ಹೋಗುತ್ತದೆಯೋ ಅದೇ ನಮ್ಮೆಡೆಗೆ ಹಲವು ಪಟ್ಟಾಗಿ ಮರಳುತ್ತದೆ ಎನ್ನುತ್ತದೆ ಕರ್ಮಸಿದ್ಧಾಂತ. ಇದು ಪ್ರಕೃತಿ ನಿಯಮವೂ ಹೌದು. ನಾವು ಕಳುಹಿಸುವ ಶಕ್ತಿ, ಪ್ರೀತಿ, ಅನುಕಂಪ, ಕರುಣೆ, ಸಹಾನುಭೂತಿ, ದ್ವೇಷ, ಅಸೂಯೆ, ದುರಾಶೆ-ಹೀಗೆ ಪ್ರತಿಯೊಂದೂ ಹಲವು ಪಟ್ಟಾಗಿ ನಮ್ಮೆಡೆಗೇ ಮರಳಿಬರುತ್ತವೆ ಮತ್ತು ನಮ್ಮ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಇವೆಲ್ಲವೂ ಮಾನವ ಪರಿಭಾಷೆಯಲ್ಲಿ ನಿಖರವಾಗಿ ವಿವರಿಸಲು ಅಸಾಧ್ಯವಾದ ಬಹುಆಯಾಮದ ವಿಶ್ವದಲ್ಲಿ ನಿರಂತರವಾಗಿ ಘಟಿಸುತ್ತಿರುವ ವಿದ್ಯಮಾನಗಳು.
ನಾವು ವಾಸಿಸುತ್ತಿರುವ ಪ್ರಪಂಚದ ಸ್ಥಿತಿಯನ್ನು ಬದಲಾಯಿಸುವ ಅಥವಾ ಇನ್ನೂ ಉತ್ತಮಗೊಳಿಸುವ ಏಕೈಕ ಮಾರ್ಗವೆಂದರೆ; ನಮ್ಮ ಪ್ರಜ್ಞಾವಲಯವನ್ನು ಇನ್ನೂ ಉನ್ನತಮಟ್ಟಕ್ಕೆ ಏರಿಸುವುದು. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರು. ಏಕೆಂದರೆ; ನಮ್ಮ ಸ್ವಂತ ಕನಸುಗಳನ್ನು ರೂಪಿಸುವವರು ನಾವೇ ಮತ್ತು ಆ ಕನಸುಗಳ ಮೂಲಕ ನಾವು ನಿರ್ಮಿಸುವ ಭೌತಿಕ ವಾಸ್ತವತೆಯನ್ನು ಅರಿಯಬೇಕಾದವರೂ ನಾವೇ ಆಗಿರುತ್ತೇವೆ. ನಾವು ಹೇಗಿರುತ್ತೇವೆಯೋ ಹಾಗೆಯೇ ಜಗತ್ತೂ ಇರುತ್ತದೆ. ನಾವು ನಿರೀಕ್ಷಿಸಿದ್ದನ್ನು ನಾವು ಪಡೆಯುತ್ತೇವೆ. ತೀವ್ರವಾದ ಏಕಾಗ್ರತೆ, ಪುನರಾವರ್ತನೆ ಮತ್ತು ಸರಿಯಾದ ಮನಃಸ್ಥಿತಿಯೊಂದಿಗೆ ನಾವು ಏನನ್ನು ಬಯಸುತ್ತೇವೆಯೋ ಅದು ವಾಸ್ತವವಾಗುತ್ತದೆ. ಇದು ಸೃಷ್ಟಿಯ ಯೋಜನೆಯ ಭಾಗವೂ ಹೌದು. ಈ ಸತ್ಯವನ್ನು ಪ್ರಶಂಸಿಸಲು ಮತ್ತು ಅನುಭವಿಸಲು ನಮ್ಮ ಬೌದ್ಧಿಕ ವಿಶ್ಲೇಷಣೆ ಮತ್ತು ಇತರ ಅರಿವಿನ ಸಾಮರ್ಥ್ಯಗಳನ್ನು ಬದಿಗಿಡಬೇಕು. ಏಕೆಂದರೆ; ಅರಿವು ಹೆಚ್ಚು ಹೆಚ್ಚು ಭ್ರಮೆಗಳನ್ನಷ್ಟೇ ಸೃಷ್ಟಿಸುತ್ತದೆ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನು ತಡೆಯುತ್ತದೆ.
ಪ್ರತಿಯೊಂದು ದೇಹವು ತನ್ನದೇ ಆದ ವಿಶಿಷ್ಟ ಗುರುತನ್ನು ಮತ್ತು ಜನ್ಮಾಂತರಗಳ ಹಿನ್ನೆಲೆಯನ್ನು ಹೊಂದಿರುತ್ತದೆ. ನಾವು ಹೊರಜಗತ್ತಿಗೆ ಪ್ರದರ್ಶಿಸುತ್ತಿರುವ ನಮ್ಮ ವ್ಯಕ್ತಿತ್ವವು ನಾವು ಜೀವಿಸುತ್ತಿರುವ ಬ್ರಹ್ಮಾಂಡ ಅಥವಾ ಆಯಾಮಕ್ಕೆ ಹೊಂದಾಣಿಕೆಯಾಗುವಂತೆ ನಮ್ಮದೇ ಆಯ್ಕೆಯಾಗಿರುತ್ತದೆ. ನಮ್ಮೆಲ್ಲಾ ಅಸ್ತಿತ್ವವು ಶಕ್ತಿಯ ವಿವಿಧ ಮಾದರಿಗಳಿಂದ ಸಂಯೋಜಿತಗೊಂಡಿದೆ. ನಮ್ಮ ಕನಸುಗಳು, ಆಲೋಚನೆಗಳು, ನಿರೀಕ್ಷೆಗಳು, ನಂಬಿಕೆಗಳು, ಭಾವನೆಗಳು ಅಕ್ಷರಶಃ ಭೌತಿಕವಸ್ತುವಾಗಿ ರೂಪಾಂತರಗೊಳ್ಳುತ್ತವೆ ಮತ್ತು ಇವು ನಾವು ವಾಸಿಸುವ ಜಗತ್ತನ್ನು ಅರ್ಥೈಸಿಕೊಳ್ಳುವಲ್ಲಿ ಕೇಂದ್ರಬಿಂದುಗಳಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ಮಿದುಳಿನಲ್ಲಿ ಸೃಷ್ಟಿಯಾಗುವ ನರಪ್ರಚೋದನೆಗಳು ನಮ್ಮ ಆಲೋಚನೆಗಳು, ಭಾವನೆಗಳು, ನಿರೀಕ್ಷೆಗಳಿತ್ಯಾದಿಗಳನ್ನು ಅದೃಶ್ಯಮಾರ್ಗಗಳಲ್ಲಿ ದೇಹದಿಂದ ಹೊರಗೆ ಸಾಗಿಸುತ್ತವೆ ಮತ್ತು ಇವು ಮಾನಸಿಕ (ಟೆಲಿಪಥಿಕ್) ಸಂದೇಶಗಳಾಗಿ ರೂಪುಗೊಳ್ಳುತ್ತವೆ. ಇದರಿಂದಾಗಿಯೇ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿರಲು ಸಾಧ್ಯವಾಗುತ್ತದೆ. ಒಂದು ನಿರ್ಧಿಷ್ಟ ರೀತಿಯಲ್ಲಿ ನಾವೆಲ್ಲರೂ ಸೃಷ್ಟಿಕರ್ತರೇ ಆಗಿದ್ದೇವೆ. ದೇವರು ವಿಶ್ವವನ್ನು ಸೃಷ್ಟಿಸಿದಂತೆ ನಾವು ನಮ್ಮ ಭೌತಿಕ ವಾಸ್ತವತೆಯನ್ನು ಸೃಷ್ಟಿಸುತ್ತೇವೆ. ಮನುಷ್ಯನಲ್ಲಿರುವ ಚಿಂತನಾ ಸಾಮರ್ಥ್ಯವು ಶಕ್ತಿ ಮತ್ತು ಸೃಜನಶೀಲ ಸಾಮರ್ಥ್ಯದ ಕಾರ್ಯವಿಧಾನವಾಗಿದೆ. ನಮ್ಮ ನಿರೀಕ್ಷೆ, ಭಯ, ಭಾವನೆಗಳು ನಾವು ಅನುಭವಿಸುತ್ತಿರುವ ವಾಸ್ತವತೆಯ ಅಂತಿಮ ಆವೃತ್ತಿಯಲ್ಲಿ ಸಹಾಯಮಾಡುವ ಮಾನಸಿಕ (ಟೆಲಿಪಥಿಕ್) ಸಂಕೇತಗಳನ್ನು ರಚಿಸುತ್ತವೆ.
ಕ್ಷಮಾಗುಣವು ಅಧ್ಯಾತ್ಮಿಕ ಔನ್ನತ್ಯಕ್ಕೆ ಅಗತ್ಯವಾದ ಹೆಜ್ಜೆಯಾಗಿದೆ. ಕ್ಷಮಾಗುಣವನ್ನು ಸಾಧಿಸುವ ಸರಳ ತಂತ್ರವೆಂದರೆ; ಕನ್ನಡಿಯ ಮುಂದೆ ನಿಂತು ತನ್ನನ್ನು ತಾನು ಪ್ರೀತಿ ಹಾಗೂ ಸಹಾನುಭೂತಿಯಿಂದ ನೋಡಿಕೊಳ್ಳುವುದು ಮತ್ತು ಹೀಗೆ ಹೇಳುವುದು: “ಈ ಅಥವಾ ಯಾವುದೇ ಹಿಂದಿನ ಸಮಾನಾಂತರ ಅಥವಾ ಭವಿಷ್ಯದ ಜೀವನದಲ್ಲಿ ಯಾವುದೇ ಆಲೋಚನೆ, ಕಾರ್ಯ, ಭಾವನೆ ಅಥವಾ ನಿಷ್ಕಿೃಯತೆಗಾಗಿ ನಾನು ನಿನ್ನನ್ನು ಕ್ಷಮಿಸುತ್ತೇನೆ. ನಿನ್ನ ಅಸ್ತಿತ್ವಕ್ಕಾಗಿ ನಾನು ಬೇಷರತ್ತಾಗಿ ಪ್ರೀತಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ. ಯಾವುದೇ ಪ್ರತೀಕಾರ ಅಥವಾ ಇತರ ನಕಾರಾತ್ಮಕತೆಯನ್ನು ತ್ಯಜಿಸುತ್ತೇನೆ ಮತ್ತು ಅದ್ಭುತವಾದ ಬಿಳಿಬೆಳಕಿನಲ್ಲಿ ನನ್ನನ್ನು ಮತ್ತು ಬ್ರಹ್ಮಾಂಡದ ಉಳಿದ ಭಾಗವನ್ನು ಸುತ್ತುವರಿಯುತ್ತೇನೆ” ಇತರರನ್ನು (ಪೋಷಕರು, ಸಂಗಾತಿಗಳು, ಮಕ್ಕಳು, ಸಹೋದ್ಯೋಗಿಗಳು, ಒಡಹುಟ್ಟಿದವರು, ನೆರೆಹೊರೆಯವರು, ಸ್ನೇಹಿತರು) ಮತ್ತು ಸಾಮಾನ್ಯವಾಗಿ ಇಡೀ ವಿಶ್ವವನ್ನು ಕ್ಷಮಿಸುವ ಬಗ್ಗೆ ಈ ಅಭ್ಯಾಸವನ್ನು ಪುನರಾವರ್ತಿಸಬಹುದು. ಬ್ರಹ್ಮಾಂಡವು ಸ್ವತಂತ್ರ ಇಚ್ಛೆಯನ್ನು ಆಧರಿಸಿದೆಯೇ ಹೊರತು ನಾವು ಚಿಂತಿಸುವ ನ್ಯಾಯ ಅಥವಾ ಅನ್ಯಾಯದಿಂದಲ್ಲ.