For the best experience, open
https://m.samyuktakarnataka.in
on your mobile browser.

ಕ್ಷಯ ರೋಗ ಮಾನವನ ಜೀವಕ್ಕೆ ಮಾರಣಾಂತಿಕ

03:26 AM Aug 27, 2024 IST | Samyukta Karnataka
ಕ್ಷಯ ರೋಗ ಮಾನವನ ಜೀವಕ್ಕೆ ಮಾರಣಾಂತಿಕ

ಇವತ್ತು ಬುದ್ಧಿವಂತ ಮಾನವ ಎಲ್ಲೆಡೆ ತನ್ನ ಕಬಂಧ ಬಾಹುವನ್ನು ಚಾಚಿದ್ದಾನೆ. ಶರೀರದಲ್ಲಿ ಉಸಿರಿದೆ ಆದರೆ ಒಬ್ಬರನ್ನೊಬ್ಬರು ನೋಡಲು ಸಮಯವಿಲ್ಲ. ಅಷ್ಟೊಂದು ನಾಗಾಲೋಟದ ಜೀವನ… ಹಾಗಾಗಿ ಎಲ್ಲೆಡೆ ಜನಜಂಗುಳಿಯನ್ನು ಕಾಣುತ್ತೇವೆ. ಇದರಿಂದ ಮುಂದಾಗುವ ಅನಾಹುತಗಳನ್ನು ನಾವುಗಳು ಕಡೆಗಣಿಸುತ್ತಿದ್ದೇವೆ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವೇ ಮರೆಯುತ್ತ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಆರೋಗ್ಯವೇ ಇಲ್ಲದಿದ್ದರೆ ಏನಿದ್ದರೂ ಏನು ಪ್ರಯೋಜನ. ಮೊದಲು ಆರೋಗ್ಯದ ಕಡೆ ಆದ್ಯತೆ. ದುಡಿಯುವ ಭರಾಟೆಯಲ್ಲಿ ಆರೋಗ್ಯವನ್ನು ಕಳೆದುಕೊಳ್ಳಬೇಡಿ…. ಯಾವುದೇ ಕಾಯಿಲೆ ಬಂದರೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ಸಾವಿನ ಮನೆ ಕದ ತಟ್ಟುವುದು ಖಚಿತ. ಅಂದಹಾಗೆ ಜನಜಂಗುಳಿ ಎಂದರೆ ಕ್ಷಯ ರೋಗ ನೆನಪಿಗೆ ಬರುತ್ತದೆ.
ಕ್ಷಯರೋಗವು (ಟಿಬಿ) ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಗಂಭೀರ, ಮಾರಣಾಂತಿಕ ಕಾಯಿಲೆಯಾಗಿದೆ. ಇದು ಸೋಂಕಿನಿಂದ ಬರುವ ರೋಗವಾಗಿದ್ದು ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೊಸಿಸ ಎಂಬ ಬ್ಯಾಕ್ಟೀರಿಯ ಸೂಕ್ಷ್ಮಜೀವಿಗಳಿಂದ ಬರುವುದು.
ಕ್ಷಯ ರೋಗ ಸಾಂಕ್ರಮಿಕ ರೋಗವಾಗಿದ್ದು ಕೆಮ್ಮಿನ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೂಕ್ಷ್ಮಜೀವಿಗಳು ಶ್ವಾಸಕೋಶವನ್ನು ಪ್ರವೇಶಿಸಿ ಶ್ವಾಸಕೋಶಗಳಿಗೆ ಎದುರಾಗಿ ಬ್ಯಾಕ್ಟೀರಿಯಗಳ ಸೋಂಕಿನಿಂದಾಗಿ ಕ್ಷಯ ರೋಗ ಆವರಿಸುತ್ತದೆ ಹಾಗೂ ಕ್ರಮೇಣ ದೇಹದ ಇತರ ಭಾಗಗಳಲ್ಲಿ ವಿಸ್ತರಿಸುತ್ತದೆ. ಈ ರೋಗಿಗಳ ಕೆಮ್ಮಿನಲ್ಲಿ ರಕ್ತ, ಅತೀವ ಸುಸ್ತು, ತಲೆ ಸುತ್ತುವಿಕೆ, ಎದೆ ಭಾಗದಲ್ಲಿ ನೋವು, ತೂಕ ಇಳಿಯುವಿಕೆ, ರಾತ್ರಿ ಬೆವರಿಕೆ, ಹೊಟ್ಟೆನೋವು, ಬಾಧಿತ ಮೂಳೆ, ಕೀಲುಗಳಲ್ಲಿ ನೋವು, ನಿರಂತರ ತಲೆನೋವು ಮತ್ತು ಸತತ ಜ್ವರದ ಲಕ್ಷಣಗಳು ಕಾಣುತ್ತವೆ. ಯಾವಾಗಲೂ ಕೆಮ್ಮಿನಿಂದ ಬಳಲುತ್ತಾ ಇರುತ್ತಾರೆ. ಹಳದಿ ಬಣ್ಣದ ಕಫ ಉಗುಳುತ್ತಾರೆ ಅಂತಹವರು ಆದಷ್ಟು ಬೇಗನೆ ಕಫ ಪರೀಕ್ಷೆ ಮಾಡಿಸಿ, ರೋಗವನ್ನು ಪತ್ತೆಹಚ್ಚಿಕೊಳ್ಳುವುದು ಬಹಳ ಮುಖ್ಯ. ಸಾಧಾರಣವಾಗಿ ಶೀತ, ಕೆಮ್ಮು ಇತ್ಯಾದಿ ಸಣ್ಣಪುಟ್ಟ ಸೋಂಕುಗಳಂತೆ ಬರುವ ಕ್ಷಯರೋಗ ಹರಡುವ ಸಾಧ್ಯತೆ ಹೆಚ್ಚು. ಆರಂಭದಲ್ಲಿ ಇದು ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ ಹಾಗೂ ಆರೋಗ್ಯಕ್ಕೆ ಅಪಾಯಕಾರಿಯೂ ಆಗಿರುವುದಿಲ್ಲ. ಆದರೆ ದಿನಕಳೆದಂತೆ ಕ್ರಮೇಣವಾಗಿ ರೋಗಲಕ್ಷಣಗಳು ದೇಹದಲ್ಲಿ ಅಭಿವೃದ್ಧಿಯಾಗಿ ಹಲವಾರು ತೊಂದರೆಗಳನ್ನು ಉಂಟುಮಾಡುತ್ತದೆ, ಮುಖ್ಯವಾಗಿ ಶ್ವಾಸಕೋಶಗಳಿಗೆ ಇದರಿಂದ ಹೆಚ್ಚು ತೊಂದರೆ ಉಂಟಾಗಿ ಕೊನೆಗೆ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ.
ವಿಶ್ವಾದ್ಯಂತ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಜನರು ಕ್ಷಯರೋಗದ ಸೋಂಕಿಗೆ ಒಳಗಾಗಿದ್ದಾರೆ ಎಂದು ಎನ್ನಲಾಗುತ್ತಿದೆ. ಕ್ಷಯದ ರೋಗಾಣು ಪತ್ತೆ ಮಾಡಲು ಸತತ ಮೂರು ದಿನ ಕಫದ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ದೆಹಲಿಯ NCT ಸ್ಥಾಪಿಸಿರುವ ವಿವಿಧ ಸ್ಥಳಗಳಲ್ಲಿ ಮತ್ತು ಜಿಲ್ಲಾ DOTS ಕೇಂದ್ರಗಳಲ್ಲಿ ಮಾಡುವರು. ಈ ಸೇವೆಯು ಸಂಪೂರ್ಣ ಉಚಿತ. ಸರಿಯಾಗಿ ಕೆಮ್ಮಿ ಕಫವನ್ನು ಪರೀಕ್ಷೆಗೆ ನೀಡಬೇಕು. ಕಫದ ಬದಲಾಗಿ ಬರಿ ಉಗುಳನ್ನು ನೀಡಬಾರದು. ಆಗ ರೋಗ ಪತ್ತೆ ಆಗದಿರಬಹುದು.
ಇತ್ತೀಚಿನ ವರ್ಷಗಳಲ್ಲಿ ಕ್ಷಯವು ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ಅದು ಔಷಧಿ ನಿರೋಧತೆಯನ್ನು ಬೆಳೆಸಿಕೊಂಡಿದೆ. ಸಾಧಾರಣವಾದ ಆಂಟಿಬಯೋಟಿಕ್‌ಗಳಿಗೆ ಅದು ಸ್ಪಂದಿಸುವುದೇ ಇಲ್ಲ ಎನ್ನುತ್ತಾರೆ ವೈದ್ಯರು. ಔಷಧಿ ನಿರೋಧತೆಗೆ ಕಾರಣ ರೋಗಿಯು ಔಷಧಿಯನ್ನು ಸಕ್ರಮವಾಗಿ ಮತ್ತು ತಪ್ಪದೆ ತೆಗೆದುಕೊಳ್ಳದಿರುವುದೇ ಆಗಿದೆ. ಕ್ಷಯವನ್ನು ತಡೆಯಲು ವೈದ್ಯರು ಹೇಳಿದ ಔಷಧಿಗಳನ್ನು ಪೂರ್ತಿ ಅವಧಿಗೆ ಕ್ರಮವಾಗಿ ತೆಗೆದುಕೊಳ್ಳಬೇಕು. ರೋಗಿಯು ಸತತವಾಗಿ ಆರು ತಿಂಗಳ ಕಾಲ ಔಷಧಿ ಸೇವಿಸಬೇಕು. ಕೆಲವು ಸಲ ಒಂದು ವರ್ಷದವರೆಗೆ ಔಷಧಿ ಮುಂದುವರಿಸ ಬೇಕಾಗಬಹುದು. ಒಆಖ ಹಾಗೂ ಘಿಆಖ ರೀತಿಯ ಕ್ಷಯಕ್ಕೆ ಬಹು ದುಬಾರಿಯಾದ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಅವು ಕೆಲಸ ಮಾಡದೆ ಇರಬಹುದು ಮತ್ತು ಚಿಕಿತ್ಸೆಯ ಅವಧಿಯು ೨ ವರ್ಷಗಳಿಗೂ ಹೆಚ್ಚಾಬಹುದು.
ಮನುಷ್ಯನಿಗೆ ಕ್ಷಯರೋಗ ಬರಲು ಕಾರಣವೇನು ಎಂದು ನೋಡುವುದಾದರೆ, ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾದರೆ ಅದರಿಂದ ಕ್ರಮೇಣವಾಗಿ ಯಾವುದೇ ಸಂದರ್ಭದಲ್ಲಿ ಕ್ಷಯ ರೋಗ ಸೋಂಕಿನ ಕಾರಣದಿಂದ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರಗಳ ಸೇವನೆ ಅಗತ್ಯ, ರೋಗನಿರೋಧಕ ಶಕ್ತಿ ಕೂಡ ಈ ಸಮಯದಲ್ಲಿ ಬಹಳ ಮುಖ್ಯವಾಗುತ್ತದೆ. ಸೇವನೆ ಮಾಡುವ ಆಹಾರದಲ್ಲಿ ದಿನದ ಅಗತ್ಯಕ್ಕೆ ತಕ್ಕಂತೆ ಬೇಕಾದ ವಿಟಮಿನ್ ಅಂಶಗಳು ಹಾಗೂ ಖನಿಜಾಂಶಗಳು ಇರುವುದು ಮುಖ್ಯ, ಜೊತೆಗೆ ಬಿ ಕಾಂಪ್ಲೆಕ್ಸ್ ವಿಟಮಿನ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡು ಆಹಾರ ಕೂಡ ದೇಹಕ್ಕೆ ತುಂಬಾ ಅವಶ್ಯಕವಾಗಿ ಬೇಕಾಗಿರುತ್ತದೆ. ದೇಹದಲ್ಲಿ ರಕ್ತದ ಉತ್ಪತ್ತಿ ಮೊದಲಿನಂತೆ ಸರಾಗವಾಗಿ ನಡೆಯಬೇಕಾದರೆ ನಮ್ಮ ಆಹಾರ ಪದ್ಧತಿಯಲ್ಲಿ ಜಿಂಕ್ ಅಂಶ ಸೇರಿರಬೇಕು. ಈ ರೀತಿ ಆಹಾರದಿಂದ ದೇಹದಲ್ಲಿ ಕ್ಷಯರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಬಲವಾಗುತ್ತದೆ.
ಕ್ಷಯ ರೋಗವನ್ನು ಗುಣಪಡಿಸಲು ನೈಸರ್ಗಿಕ ಮನೆಮದ್ದು ಗಳನ್ನು ಉಪಯೋಗಿಸಿದಲ್ಲಿ ಉತ್ತಮ ಆದರೆ ಕ್ಷಯ ರೋಗ ಹೆಚ್ಚಾದಲ್ಲಿ ಕೇವಲ ಮನೆ ಮದ್ದಿನಿಂದ ಗುಣಪಡಿಸಲು ಸಾಧ್ಯವಿಲ್ಲ. ಆರಂಭಿಕ ಹಂತದಲ್ಲಿ ವೈದ್ಯವಿಜ್ಞಾನ ಔಷಧಿಗಳ ಸೇವನೆಯೊಂದಿಗೆ ರೋಗಿ ತನ್ನ ಆಹಾರ ಕ್ರಮದಲ್ಲಿ ಕೆಲವೊಂದು ಆಹಾರಗಳನ್ನು ಅಳವಡಿಸಿಕೊಂಡಲ್ಲಿ ಚೇತರಿಕೆಯ ಗತಿ ಇನ್ನಷ್ಟು ಶೀಘ್ರವಾಗಿ ಆಗುತ್ತದೆ.

ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಿ
ಕೆಮ್ಮು ಸಾಮಾನ್ಯವೆಂದು ನಿರ್ಲಕ್ಷಿಸದಿರಿ, ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲವೆಂದು ಸುಮ್ಮನಾಗಬೇಡಿ, ಈ ನಿರ್ಲಕ್ಷ್ಯ ನಿಮ್ಮ ಜೀವಕ್ಕೆ ಕುತ್ತು ತರಬಲ್ಲದು. ಕ್ಷಯರೋಗ ಚಿಕಿತ್ಸೆ ಪಡೆಯಬಹುದಾದ ರೋಗವಾಗಿರುವುದರಿಂದ ರೋಗ ಲಕ್ಷಣಗಳನ್ನು ಗುರುತಿಸಲು ಮತ್ತು ಚಿಕಿತ್ಸೆಯನ್ನು ಮುಂಚಿತವಾಗಿ ಪಡೆದುಕೊಳ್ಳಲು ಜಾಗೃತಿ ಮುಖ್ಯ ಹಾಗೂ ಅನಿವಾರ್ಯ. ನಾವಿಂದು ದಿನ ಪತ್ರಿಕೆ, ಸರಕಾರಿ ಆಸ್ಪತ್ರೆಗಳಲ್ಲಿ ಭಿತ್ತಿಪತ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬೋರ್ಡ್ಗಳನ್ನು ಅಳವಡಿಸಿ ಜನರಿಗೆ ಕ್ಷಯದ ಬಗ್ಗೆ ಮುಂಜಾಗ್ರತೆ ಮಾಹಿತಿಗಳನ್ನು ನೀಡುತ್ತಿದ್ದು ಜನರು ಈ ಬಗ್ಗೆ ಅರಿತುಕೊಂಡು ಪರಿಚಯದವರಿಗೂ ತಿಳಿಸಿ ಜಾಗೃತಿ ಮೂಡಿಸುವುದು ಆದ್ಯ ಕರ್ತವ್ಯ ಹಾಗೂ ಅನಿವಾರ್ಯ. ತಪ್ಪಿದಲ್ಲಿ ಮುಂದಿನ ಪೀಳಿಗೆಗೆ ಕ್ಷಯ ಮಾರಣಾಂತಿಕವಾಗಬಲ್ಲದು.

ಕ್ಷಯರೋಗ ಗುಣವಾಗಲು ಹೀಗೆ ಮಾಡಿ
ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿರುವ ಸಲ್ಫೋರಿಕ್ ಆಮ್ಲ ಕ್ಷಯ ರೋಗಿಗಳಿಗೆ ವರದಾನವಾಗಿದೆ. ಇದು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡುತ್ತದೆ ಹಾಗೂ ರೋಗಿಯ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ಕ್ಷಯ ಗುಣವಾಗುವಂತೆ ಮಾಡುತ್ತದೆ. ದಿನದ ಪ್ರಮುಖ ಆಹಾರದೊಂದಿಗೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಬೇಕು.
ಪುದೀನ ಎಲೆಗಳಲ್ಲಿರುವ ಬ್ಯಾಕ್ಟೀರಿಯ ನಿರೋಧಕ ಗುಣಗಳು ಕ್ಷಯದಿಂದಾಗಿ ಘಾಸಿಗೊಂಡಿರುವ ಅಂಗಾಂಶಗಳು ಮರು ಬೆಳವಣಿಗೆ ಪಡೆಯಲು ನೆರವಾಗುತ್ತದೆ, ಇದಕ್ಕಾಗಿ ಒಂದು ಚಮಚ ಪುದೀನ ರಸವನ್ನು ಎರಡು ಚಿಕ್ಕ ಚಮಚ ಜೇನು ಹಾಗೂ ಅರ್ಧ ಕಪ್ ಕ್ಯಾರೆಟ್ ರಸದೊಂದಿಗೆ ಬೆರೆಸಿ ಮಿಶ್ರಣ ಮಾಡಿ ಇದನ್ನು ಮೂರು ಭಾಗಗಳಾಗಿ ವಿಂಗಡಿಸಿ ದಿನಕ್ಕೂ ಮೂರು ಬಾರಿ ಸೇವಿಸಿ.
ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡುತ್ತವೆ. ಇದಕ್ಕಾಗಿ ಕೊಂಚ ನೀರಿನಲ್ಲಿ ಗ್ರೀನ್ ಟೀ ಎಲೆಗಳನ್ನು ಕುದಿಸಿ ದಿನಕ್ಕೆ ಎರಡು ಅಥವಾ ಮೂರು ಲೋಟ ಕುಡಿಯಬೇಕು.
ಅನನಾಸಿನ ರಸವು ಕ್ಷಯರೋಗವನ್ನು ಗುಣಪಡಿಸಲು ಉತ್ತಮ ಪರಿಹಾರವಾಗಿದೆ ಇದರ ರಸಕ್ಕೆ ಶ್ವಾಸಕೋಶದ ನಾಳಗಳಲ್ಲಿ ಕಫ ಉಂಟಾಗುವುದನ್ನು ತಡೆಯುವ ಮೂಲಕ ಗುಣವಾಗುವಿಕೆಯನ್ನು ಶೀಘ್ರಗೊಳಿಸುತ್ತದೆ. ನಿತ್ಯವೂ ಒಂದು ಲೋಟ ತಾಜಾ ಅನಾನಸ್ ಹಣ್ಣಿನ ರಸವನ್ನು ಸೇವಿಸಬೇಕು.
ಕಾಳು ಮೆಣಸು ಕಫವನ್ನು ಸ್ವಚ್ಛಗೊಳಿಸಿ ಶ್ವಾಸನಾಳಗಳನ್ನು ತೆರವುಗೊಳಿಸುವುದಲ್ಲದೆ ಕಫ ಉಂಟಾಗುವುದನ್ನು ತಡೆಯುತ್ತದೆ.
ನಿತ್ಯ ಒಂದೆರಡು ನೆಲ್ಲಿಕಾಯಿಗಳನ್ನು ಚೆನ್ನಾಗಿ ಜಗಿದು ನುಂಗುವುದು ಅಥವಾ ಒಂದು ಲೋಟದಷ್ಟು ಇದರ ರಸವನ್ನು ಕುಡಿದರೆ ದೇಹದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಹೆಚ್ಚಾಗುವುದು. ವಿಟಮಿನ್ ಸಿ ಇರುವ ಹಣ್ಣುಗಳ ಪಾನಕ ಮಾಡಿದ ಕುಡಿಯುವುದರಿಂದಲೂ ದೇಹದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಉತ್ಪತ್ತಿಯಾಗುತ್ತವೆ. ಈ ಮೂಲಕ ಕ್ಷಯ ರೋಗ ಶೀಘ್ರ ಗುಣವಾಗಲು ನೆರವಾಗುತ್ತದೆ.
ಗಮನಿಸಬೇಕಾದ ಮುಖ್ಯ ಅಂಶವೆಂದರೆ ಚಿಕಿತ್ಸೆ ಅವಧಿಯಲ್ಲಿ ಹಾಗೂ ನಂತರದಲ್ಲಿಯೂ ಧೂಮಪಾನ ಹಾಗೂ ಮದ್ಯಪಾನ ಮಾಡಬೇಡಿ. ದೇಹವು ಆಂತರಿಕವಾಗಿ ಗುಣವಾಗಲು ಸಾಕಷ್ಟು ವಿಶ್ರಾಂತಿ, ಉತ್ತಮ ನಿದ್ರೆ ಮುಖ್ಯ. ಸಕ್ರಿಯ ಸೋಂಕನ್ನು ಹೊಂದಿದ್ದರೆ ಸ್ನೇಹಿತರು ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದನ್ನು ತಪ್ಪಿಸಿ. ಮಾಸ್ಕನ್ನು ಕಡ್ಡಾಯವಾಗಿ ಧರಿಸಿ ಹಾಗೂ ಸಾರ್ವಜನಿಕವಾಗಿ ಎಲ್ಲೂ ಉಗುಳಬಾರದು.