For the best experience, open
https://m.samyuktakarnataka.in
on your mobile browser.

ಕ.ಕ.ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ : ಹಲವರ ಬಂಧನ

01:34 PM Nov 01, 2024 IST | Samyukta Karnataka
ಕ ಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ   ಹಲವರ ಬಂಧನ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಕಲಬುರಗಿಯ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ತೆರಳತ್ತಿದ್ದ ಹೋರಾಟಗಾರರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನ್ನಡ ರಾಜ್ಯೋತ್ಸವದ ದಿನವಾದ ಶನಿವಾರ ತಮಗೆ ಪ್ರತ್ಯೇಕ ರಾಜ್ಯ ಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಭಾಗದ ಜನರು ಪ್ರತಿಭಟನೆ ನಡೆಸುತ್ತಿದ್ದರು. ಕಳೆದೊಂದು ವರ್ಷದಿಂದ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗಿದೆ.
ಕಳೆದ ವರ್ಷವೂ ಕಲಬುರಗಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದೇ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿತ್ತು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ ನಡೆದಿತ್ತು. ಸರ್ಧಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯು ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿತ್ತು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಈ ಬಾರಿಯೂ ಸಹ ಅದೇ ಸಂಘಟನೆ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘಟನೆಯ ಮುಖಂಡ ಎಂ.ಎಸ್. ಪಾಟೀಲ್ ನರಿಬೋಳ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ೩೭೧ (ಜೆ) ಕಲಂ ಸಂಪೂರ್ಣ ಕಾರ್ಯರೂಪಕ್ಕೆ ಬರುತ್ತಿಲ್ಲ. ಉದ್ದೇಶಪೂರ್ವಕ ಸಂಪೂರ್ಣ ಜಾರಿಯಾಗಲು ಕ.ಕ. ಹೊರತು ಪಡಿಸಿದ ಜನಪ್ರತಿನಿಧಿಗಳು, ಕೆಲ ಕುತಂತ್ರಿ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆಪಾದಿಸಿದರು.
ಮುಂದಿನ ದಿನಗಳಲ್ಲಿ ಕ.ಕ.ಪ್ರದೇಶದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೆಲಂಗಾಣ ಮಾದರಿ ಹೋರಾಟ ಮಾಡುತ್ತೇವೆ. ಇವತ್ತು ಸರ್ಕಾರ ಪೊಲೀಸರ ಮುಖಾಂತರ ಹೋರಾಟ ಹತ್ತಿಕ್ಕಿಸುವ ಪ್ರಯತ್ನ ಮಾಡಿದೆ ಇದನ್ನು ಖಂಡಿಸುತ್ತೇವೆ. ಬಂಧನಕ್ಕೆ ಹೆದರಿ ಹೋರಾಟ ಕೈಬಿಡದೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹೋರಾಟದಲ್ಲಿ ವಿನೋದಕುಮಾರ ಜನೆವರಿ, ಲಕ್ಮೀಕಾಂತ ಸ್ವಾದಿ, ಗ್ರಾಮಿಣ ಅಬಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ನಾಯಕ, ಶರಣಗೌಡ ಪೊಲೀಸ್ ಪಾಟೀಲ್ ನರಿಬೋಳ, ಉದಯಕೂಮಾರ ಜೇವರ್ಗಿ, ಸೋಮಶೇಖರ ಸ್ವಾಮಿ, ಸಂಗಣಗೌಡ ಪಾಟೀಲ್, ಸುಮಾ ಕವಲ್ದಾರ, ಅನುರಾದ ಹೂಗಾರ, ಶಮಿನಾ ಬೆಗಂ, ಶಹನಾ ಶೇಖ, ವಿಶ್ವರಾಧ್ಯ ಬಡಿಗೇರ, ಸಿದ್ದಣ್ಣ ನಾಯಕ, ನಿಂಗಣ್ಣ ಚಿಗರಹಳ್ಳಿ, ದೌಲತರಾಯ ನೀರಲಕೋಡ, ಸುನಿಲ್ ಶಿರ್ಕೆ. ಶರಣು ಮಳಕೇಡ್, ಸಂಗು ಕಾಳನೂರ್, ಚಿದಾನಂದ ಸ್ವಾಮಿ, ಪ್ರಶಾಂತ್ ಶಿರೂರ್ ಇತರರಿದ್ದರು.

Tags :