ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಖಜಾನೆ-ಕೀಲಿಕೈ ಇದ್ದರೂ ಕನ್ನಡಿಯ ಗಂಟಿನ ಪ್ರೀತಿ

04:30 AM Nov 19, 2024 IST | Samyukta Karnataka

ದೇವರ ನಾಮ-ಮಂತ್ರದ ಸ್ಮರಣೆಗಳು ನಮ್ಮನ್ನು ದೇವರ ದರ್ಶನದವರೆಗೂ ಕರೆದುಕೊಂಡು ಹೋಗಬಲ್ಲದು. ಅಲ್ಲದೆ, ಅದು ಅನಂತ ಆನಂದದ ಖಜಾನೆಯನ್ನೇ ತೆರೆದುಕೊಡಬಲ್ಲದು. ಅನಂತ ಆನಂದದ ಖಜಾನೆಗೆ ದೇವರ ನಾಮ-ಮಂತ್ರವೇ ಕೀಲಿಕೈ (ಚಾವಿ).
ಕೀಲಿಕೈ ನೋಡಲು ಸಣ್ಣದಾಗಿರುತ್ತದೆ. ಆದರೆ ಒಂದರ್ಥದಲ್ಲಿ, ಕೋಣೆಯೊಳಗಿನ ಎಲ್ಲ ಸಂಪತ್ತು ಅದರ ಕೈಯಲ್ಲಿಯೇ ಇದೆ. ಕೀಲಿಕೈಯನ್ನು ಬಾಗಿಲಿನ ರಂಧ್ರಕ್ಕೆ ಹಾಕಿ ತಿರುಗಿಸಿದರೆ ಒಂದೇ ಸಲಕ್ಕೆ ನಾಲ್ಕಾರು ಕೀಲಕಗಳು (ಲಾಕ್) ತೆರೆದುಕೊಳ್ಳುತ್ತವೆ (ಓಪನ್ ಆಗುತ್ತವೆ). ಅಲ್ಲದೆ ಖಜಾನೆಯ ಒಳಗಿನ ಸಂಪತ್ತೆಲ್ಲ ನಮ್ಮ ಕೈಗೆ ಸಿಗುತ್ತವೆ. ಹಾಗೆಯೇ ಭಗವಂತನ ನಾಮ-ಮಂತ್ರವು ನೋಡಲು ಚುಟುಕಾಗಿ ಕಾಣುತ್ತದೆ. ಆದರೆ ಅದು ಮನಸ್ಸೆಂಬ ಬಾಗಿಲಿನ ನಾಲ್ಕಾರು ಕೀಲಕಗಳನ್ನು ತೆರೆಯುವಂತೆ ಮಾಡುತ್ತದೆ. ವಿವಿಧ ವಾಸನೆಗಳೇ (ಸಂಸ್ಕಾರ) ಇಲ್ಲಿ ಕೀಲಕಗಳು. ವಾಸನೆಗಳನ್ನು ಗ್ರಂಥಿ(ಗಂಟು) ಎಂದು ಕರೆಯುತ್ತಾರೆ. ನಾಮ-ಮಂತ್ರವನ್ನು ಭಕ್ತಿಯಿಂದ ಸ್ಮರಣೆ ಮಾಡಿದಾಗ ಗ್ರಂಥಿಗಳು ಬಿಡಿಸಿಕೊಳ್ಳುತ್ತವೆ. ಅಲ್ಲದೆ, ಒಳಗಿರುವ ಭಗವಂತನ ಅನಂತ ಆನಂದವೆಂಬ ಖಜಾನೆ ಕೈಗೆ ಸಿಗುತ್ತದೆ. ಇದನ್ನೇ ಕೃಷ್ಣಭಕ್ತೆ ಮೀರಾಬಾಯಿ, ರಾಮರತನ ಧನ ಪಾಯೋ' (ರಾಮನೆಂಬ ರತ್ನವನ್ನು ಮತ್ತು ಧನವನ್ನು ನಾನು ಪಡೆದೆ') ಎಂಬುದಾಗಿ ಹಾಡಿದ್ದಾರೆ. ಕೀಲಿಕೈ ಸಣ್ಣದಾದರೂ ಎಷ್ಟೊಂದು ಕೆಲಸ ಮಾಡುತ್ತದೆ!
ಇಂತಹ ಖಜಾನೆ ಮತ್ತು ಕೀಲಿಕೈ ತಮ್ಮ ಕೈಯಲ್ಲಿರುವಾಗಲೇ ಕೆಲವರು ಕನ್ನಡಿಯೊಳಗಿನ ಸಂಪತ್ತನ್ನು ಕಂಡು ಅದಕ್ಕೆ ಆಸೆಪಡುತ್ತಿದ್ದಾರೆ. ಅದು ಯಾವ ಕಾಲಕ್ಕೂ ಯಾವ ಪ್ರಯತ್ನಕ್ಕೂ ಕೈಗೆ ಸಿಗುವುದಿಲ್ಲ. ಆದರೆ ಅವರು ಆಸೆಯನ್ನು ಬಿಡುವುದಿಲ್ಲ. ಇಲ್ಲಿ ಲೌಕಿಕ ಭೋಗಗಳೇ ಕನ್ನಡಿಯೊಳಗಿನ ಸಂಪತ್ತು. ಲೌಕಿಕ ಭೋಗಗಳು ಕನ್ನಡಿಯೊಳಗಿನ ಸಂಪತ್ತಿನಂತೆಯೇ ಆಕರ್ಷಣೆಯನ್ನು ಉಂಟುಮಾಡುತ್ತವೆ. ಇದು ಕನ್ನಡಿಯೊಳಗೆ ಪ್ರತಿಬಿಂಬವಾಗಿ ಕಾಣುವ ಸಂಪತ್ತಿನಂತೆಯೇ ಕೇವಲ ತೋರಿಕೆಯಾಗಿದೆ. ಜೀವನದ ಆರಂಭಿಕ ಅವಸ್ಥೆಯಲ್ಲಿದ್ದವರಿಗೆ ಇದು ಗೊತ್ತಾಗುವುದಿಲ್ಲ. ಕೊನೆಯ ಅವಸ್ಥೆಯ ಹತ್ತಿರ ಬಂದವರಿಗೆ ಸ್ವಲ್ಪ ಅರ್ಥವಾಗುತ್ತದೆ. ಕೊನೆಯ ಅವಸ್ಥೆಯಲ್ಲಿಯೇ ಇರುವವರಿಗೆ ಸರಿಯಾಗಿ ಅರ್ಥವಾಗುತ್ತದೆ.
ಭಗವಂತನ ಸತ್ತ್ವವಾಗಿರುವ ಖಜಾನೆ ಮತ್ತು ಕೀಲಿಕೈ ಇದ್ದರೂ ಮಿಥ್ಯವಾಗಿರುವ ಕನ್ನಡಿಯ ಸಂಪತ್ತಿನ ಕಡೆಗೆ ಹೆಚ್ಚು ಒಲವು ಬರಲು ಇನ್ನೊಂದು ಕಾರಣವಿದೆ. ಕನ್ನಡಿಯ ಸಂಪತ್ತು ಸುಲಭವಾಗಿ ಕಣ್ಣಿಗೆ ಬೀಳುತ್ತದೆ, ಖಜಾನೆಯು ಒಳಗಿದ್ದುದರಿಂದ ಒಮ್ಮೆಲೇ ಗೋಚರವಾಗುವುದಿಲ್ಲ. ಆದರೆ ಸೂಕ್ಷ್ಮದೃಷ್ಟಿಯುಳ್ಳ ಮಹಾತ್ಮರಿಗೆ ಗೋಚರವಾಗುತ್ತದೆ. ಮಹಾತ್ಮರಿಗೆ ಸತ್ಯ-ಮಿಥ್ಯೆಗಳನ್ನು ಬಿಡಿಸಿ ನೋಡುವ ದೃಷ್ಟಿ ಇರುತ್ತದೆ. ಮಹಾತ್ಮರು ನೀಡಿದ ಸಂದೇಶಗಳನ್ನು ಅನುಸರಿಸಿಕೊಂಡು ಹೋದರೆ ನಮ್ಮದು ಸತ್ಯಪಥವಾಗುತ್ತದೆ.

Next Article