For the best experience, open
https://m.samyuktakarnataka.in
on your mobile browser.

ಖಜಾನೆ ಖಾಲಿ ಮಾಡಿರುವ ರಾಜ್ಯದ ದರಿದ್ರ ಕಾಂಗ್ರೆಸ್‌ ಸರ್ಕಾರ

05:24 PM Apr 12, 2024 IST | Samyukta Karnataka
ಖಜಾನೆ ಖಾಲಿ ಮಾಡಿರುವ ರಾಜ್ಯದ ದರಿದ್ರ ಕಾಂಗ್ರೆಸ್‌ ಸರ್ಕಾರ

ಗದಗ: ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿ ಆಗಿದೆ. ಒಂದು ನಯಾ ಪೈಸೆ ಈ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಗದಗ ವಿಧಾನಸಭಾ ಕ್ಷೇತ್ರದ ಕುರ್ತಕೋಟಿ, ಹರ್ತಿ, ಕಣವಿ, ಹೊಸೂರು ಹಾಗೂ ಸೊರಟೂರು ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಗ್ರಾಮ ಪಂಚಾಯಿತಿಗೆ ರಸ್ತೆ, ದೀಪ ಹಾಕಿಸಿಕೊಡದಂತಹ ದುಃಸ್ಥಿತಿ ಈ ಸರ್ಕಾರದ್ದಾಗಿದೆ ಎಂದು ನಾವು ಹೇಳುತ್ತಿಲ್ಲ. ಕಾಂಗ್ರೆಸಿನ ಶಾಸಕರೇ ಹೇಳುತ್ತಿದ್ದಾರೆ. ಬರಗಾಲ ಬಂದಿದೆ. ಒಂದು ಬೆಳೆಯೂ ಬಂದಿಲ್ಲ. ರೈತರಿಗೆ ಬರ ಪರಿಹಾರ ನೀಡದೇ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇದೊಂದು ದರಿದ್ರ ಸರ್ಕಾರ. ಇಂತಹ ದರಿದ್ರ ಸರ್ಕಾರವನ್ನು ಹಿಂದೆಂದೂ ನಾನು ನೋಡಿಲ್ಲ ಎಂದರು.
ಈ ದೇಶದ ಚುನಾವಣೆ ನಡೆಯುವಂತಹ ಸಂದರ್ಭದಲ್ಲಿ ಯಾರು ಆಡಳಿತ ಪಕ್ಷದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಮುಖ್ಯ. ಇದು ರಾಜ್ಯದ ಅಲ್ಲ, ದೇಶದ ಚುನಾವಣೆಯಾಗಿದೆ. ಈ ಚುನಾವಣೆ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಆಗುತ್ತದೆ. ದೇಶ ಸುಭದ್ರವಾಗಿದ್ದರೆ, ರಾಜ್ಯ ಸುಭದ್ರವಾಗಿರುತ್ತದೆ. ರಾಜ್ಯ ಸುಭದ್ರವಾಗಿದ್ದರೆ ನಮ್ಮ ಹಳ್ಳಿ ಸುಭದ್ರವಾಗಿರುತ್ತವೆ. ಇಡೀ ದೇಶದಲ್ಲಿ ವಿಶ್ವದಲ್ಲಿ ಪ್ರಖ್ಯಾತ ಆಗಿರುವಂತಹ ನಾಯಕರು ಅಂದರೆ, ಅದು ನರೇಂದ್ರ ಮೋದಿಯವರು. ಭಯೋತ್ಪಾದನೆ ಮುಕ್ತ ಭಾರತವನ್ನು ಮೋದಿ ಮಾಡಿದ್ದಾರೆ ಎಂದರು.
ರಾಹುಲ್‌ ಗಾಂಧಿ ನಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಎಂದು, ಕೆಲವರು ಹೇಳಿದರೆ, ಇನ್ನು ಕೆಲವರು ಮಲ್ಲಿಕಾರ್ಜುನ ಖರ್ಗೆ ಎನ್ನುತ್ತಾರೆ. ಇವರಿಗೆ ಸರಿಯಾದ ಅಭ್ಯರ್ಥಿ ಯಾರಾಗಬೇಕೆಂಬ ನಿರ್ಣಯವೇ ಕಾಂಗ್ರೆಸಿನಲ್ಲಿ ಇಲ್ಲ. ಗ್ಯಾರೆಂಟಿಗಳೆಲ್ಲಾ ನಶಿಸಿ ಹೋಗಿವೆ. ಗ್ಯಾರಂಟಿಗಾಗಿ ಅಲೆದು ಅಲೆದು ಜನ ಸಾಕಾಗಿದ್ದಾರೆ. ಗ್ಯಾರೆಂಟಿಗೆ ಅಲೆದು ಗೃಹಲಕ್ಷ್ಮೀಯರ ಚಪ್ಪಲಿ ಸವೆಯುತ್ತಿವೆ. ಬರಗೆಟ್ಟ ಗ್ಯಾರೆಂಟಿ ಇದು ಎಂದರು.