ಖರೀದಿ ಆಗೋಕೆ ಕಾಂಗ್ರೆಸ್ ಶಾಸಕರು ಕತ್ತೆ, ಕುರಿ, ಕೋಣಾನಾ ?
ಬಿಜೆಪಿಯಿಂದ ಶಾಸಕರ ಖರೀದಿ, ಸಿಎಂ ಆರೋಪಕ್ಕೆ ಕೇಂದ್ರ ಸಚಿವ ಜೋಶಿ ಕಿಡಿ
ಹುಬ್ಬಳ್ಳಿ: ಪ್ರತಿ ಶಾಸಕರಿಗೆ ಐವತ್ರು ಕೋಟಿ ಕೊಟ್ಟು ಬಿಜೆಪಿಯವರು ಖರೀದಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಶನಿವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾದವರಿಗೆ ಏನು ಮಾತನಾಡಬೇಕು, ಏನು ಮಾತನಾಡುತ್ತಿದ್ದೇವೆ ಎಂಬ ಪ್ರಜ್ಞೆ ಇರಬೇಕಾಗುತ್ತದೆ. ಆ ಪ್ರಜ್ಞೆ ಇಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಖರೀದಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಯವರೇ ಹೇಳಿದ ಹಾಗೆ ಒಬ್ಬ ಶಾಸಕರಿಗೆ 50 ಕೋಟಿ ಆದರೆ 50 ಶಾಸಕರಿಗೆ 2500 ಕೋಟಿ ಆಗುತ್ತದೆ. ಈ ರೀತಿ ಹೇಳಿಕೆ ನೀಡುವುದು ಹುಚ್ಚುತನವಾಗುತ್ತದೆ ಎಂದು ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಹಾಗಾದ್ರೆ ನಿಮ್ಮ ಶಾಸಕರು ವ್ಯಾಪಾರ ಆಗೋಕೆ ತಯಾರಾಗಿದ್ದಾರಾ ಅಥವಾ ಯಾರಾದರೂ ಕಾಂಗ್ರೆಸ್ ಶಾಸಕರು ತಮ್ಮನ್ನು ಬಿಜೆಪಿಯವರು 50 ಕೋಟಿ ಕೊಟ್ಟು ಖರೀದಿಸಲು ಬಂದಿದ್ದರು ಎಂದು ಹೇಳಿದ್ದರಾ ? ಹೇಳಿದ್ದರೆ ಯಾವ ಶಾಸಕರನ್ನು ಖರೀದಿಸಲು ಪ್ರಯತ್ನ ಆಗಿತ್ತು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಕತ್ತೆ, ಕುರಿ, ಕೋಣಗಳನ್ನು ವ್ಯಾಪಾರ ಮಾಡ್ತಾರೆ. ಶಾಸಕರನ್ನಲ್ಲ. ನಾನು ಕಾಂಗ್ರೆಸ್ ಪಕ್ಷದ ಶಾಸಕರನ್ನು ಆ ರೀತಿ ಭಾವಿಸಿಲ್ಲ ಎಂದು ಸಚಿವ ಜೋಶಿ ಅ್ಪಷ್ಟಪಡಿಸಿದರು.